ಮೈಸೂರು ಅರಮನೆಯ ಫಿರಂಗಿ ಗಾಡಿಗಳಿಗೆ ಪೂಜೆ, ದಸರಾ ಮಹೋತ್ಸವಕ್ಕೆ ಸಾಂಕೇತಿಕ ಚಾಲನೆ
ಮೈಸೂರು ಅರಮನೆಯ ಫಿರಂಗಿ ಗಾಡಿಗಳಿಗೆ ಉಸ್ತುವಾರಿ ಸಚಿವ ಪೂಜೆ ಸಲ್ಲಿಸಿದರು. ಈ ಮೂಲಕ ದಸರಾ ಮಹೋತ್ಸವಕ್ಕೆ ಸಾಂಕೇತಿಕ ಚಾಲನೆ ನೀಡಿದರು.
ವರದಿ : ಮಧು.ಎಂ.ಚಿನಕುರಳಿ
ಮೈಸೂರು, (ಆಗಸ್ಟ್.29): ಕುಶಾಲತೋಪಿನ ಸಿಡಿ ಮದ್ದು ಸ್ಪೋಟ ಆಯ್ತು ಅಂದ್ರೆ, ಅದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಬಂದೇ ಬಿಡ್ತು ಅಂತ ಅರ್ಥ. ಅಷ್ಟೇ ಅಲ್ಲ ಜಂಬೂ ಸವಾರಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರೆತಿದೆ ಎಂದರ್ಥ. ಕುಶಾಲ ತೋಪಿಗೆ ದಸರಾದಲ್ಲಿ ವಿಶೇಷ ಮಹತ್ವವಿದೆ. ದಸರಾ ಮುಗಿದ ನಂತರ ಒಂದು ವರ್ಷಗಳ ಕಾಲ ಅಲಂಕಾರಿಕವಾಗಿದ್ದ ಕುಶಾಲ ತೋಪುಗಳನ್ನು ಈಗ ಸಜ್ಜು ಗೊಳಿಸಲಾಗ್ತಿದೆ. ಈ ಬಾರಿಯ ದಸರಾದಲ್ಲಿ ಬಳಸಿಕೊಳ್ಳುವ ಪಿರಂಗಿ ಗಾಡಿಗಳಿಗೆ ಇಂದು(ಸೋಮವಾರ) ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಗಿದೆ.
ಕುಶಾಲ ತೋಪು ಸಿಡಿಮದ್ದು ಸ್ಪೋಟಗೂಳ್ಳುವುದರ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಸಾಗಲು ಸಾಂಕೇತಿಕ ಚಾಲನೆ ದೊರೆಯುತ್ತದೆ. ಕಳೆದ ವರ್ಷ ದಸರಾ ಮಹೋತ್ಸವ ಮುಗಿದ ನಂತರ ಅಲಂಕಾರಿಕವಾಗಿದ್ದ ಫಿರಂಗಿಗಾಡಿಗಳು ಈಗ ಬಾರಿಯ ದಸರೆಗಾಗಿ ಸಜ್ಜುಗೊಂಡಿವೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಟಿ.ಸೋಮಶೇಖರ್ ಅರಮನೆಯಂಗಳದಲ್ಲಿ ಕುಂಬಳಕಾಯಿ ಹೊಡೆಯುವ ಮೂಲಕ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಿದರು.
Mysuru Dasara: ದಸರಾ ನಿಮಿತ್ತ 90 ದಿನಗಳ ವಸ್ತು ಪ್ರದರ್ಶನಕ್ಕೆ ಸಿದ್ಧತೆ
ಮೈಸೂರು ಅರಮನೆಯಲ್ಲಿರುವ ಪಿರಂಗಿ ಗಾಡಿಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಕಾಸಿಪುರದ ಎ.ಬ್ರೋಮೆ ಎಂಬ ಕುಶಲಕರ್ಮಿ ಕಲಾವಿದ ಈ ಪಿರಂಗಿ ಗಾಡಿಗಳನ್ನು ತಯಾರಿಸಿದ್ದನು. ಅಂದಿನ ಮಹಾರಾಜರು 1856 ರಲ್ಲಿ ಇಟಲಿಯಿಂದ 11 ಪಿರಂಗಿ ಗಾಡಿಗಳನ್ನು ಮೈಸೂರು ಅರಮನೆಗೆ ತರಿಸಿದ್ದರು. ಯುದ್ಧದ ಸಂದರ್ಭದಲ್ಲಿ, ಮಹಾರಾಜರ ಹುಟ್ಟಿದ ದಿನದ ಸಂಭ್ರಮಾಚರಣೆ ಹಾಗೂ ಯುವರಾಜ ಹುಟ್ಟಿದ ವೇಳೆ ಈ ಪಿರಂಗಿಗಳಿಂದ ಕುಶಾಲ ತೋಪುಗಳನ್ನು ಸಂಭ್ರಮಕ್ಕೆ ಸಾಂಕೇತಿಕವಾಗಿ ಸಿಡಿಸಲಾಗುತ್ತಿತ್ತು.
ಅದರ ಸ್ಪೋಟದ ಶಬ್ದದಿಂದ ಮೈಸೂರು ಸುತ್ತಮುತ್ತಲಿನ ಜನರಿಗೆ ಅರಮನೆಯ ಸಂಭ್ರಮಾಚರಣೆಯ ಸುದ್ಧಿ ಮುಟ್ಟಿಸಲಾಗುತ್ತಿತ್ತು. ಜೊತೆಗೆ ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಸಂದರ್ಭದಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸಿದಾಗ ಮುಖ್ಯಮಂತ್ರಿಗಳು ತಾಯಿ ಚಾಮುಂಡೇಶ್ವರಿಗೆ ಪುಷ್ಪರ್ಚನೆ ಸಲ್ಲಿಸಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವುದು ಸಂಪ್ರದಾಯ. ಈ ನಿಟ್ಟಿನಲ್ಲಿ ಕುಶಾಲ ತೋಪುಗಳನ್ನು ಈ ಬಾರಿಯ ದಸರಾ ಮಹೋತ್ಸವದಲ್ಲಿ ಬಳಸಿಕೊಳ್ಳುವ ಕಾರ್ಯಕ್ಕೆ ಇಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
Mysuru Dasara: ಇಂದಿನಿಂದ ಗಜಪಡೆಗಳ ನಡಿಗೆ ತಾಲೀಮು ಶುರು
4 ಪಿರಂಗಿಗಳನ್ನು ಪರ್ತ್ಸ್ ಉಕ್ಕಿನಿಂದ ಹಾಗೂ 3 ಪಿರಂಗಿಗಳನ್ನು ಹಿತ್ತಾಳೆಯಿಂದ ತಯಾರಿಸಲಾಗಿದೆ. ಜಂಬೂ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಮೊಳಗುವ ರಾಷ್ಟ್ರಗೀತೆಯ ಒಂದೂವರೆ ನಿಮಿಷದಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸಲಾಗುತ್ತದೆ. ಒಂದು ವರ್ಷಗಳ ಕಾಲ ಅಲಂಕಾರಿಕವಾಗಿದ್ದ ಕುಶಾಲ ತೋಪುಗಳನ್ನು ಈ ಬಾರಿಯ ದಸರಾದಲ್ಲಿ ಬಳಸಿಕೊಳ್ಳಲು ಸಿದ್ಧತೆ ಮಾಡಲಾಗಿದೆ.
ಸೆಪ್ಟಂಬರ್ ಮೊದಲ ವಾರದಿಂದ ಪಿರಂಗಿ ಗಾಡಿಗಳಿಂದ ಕುಶಾಲ ತೋಪು ಸಿಡಿಸಿ ರಿಹರ್ಸಲ್ ಆರಂಭಿಸಲಾಗುತ್ತದೆ. ಈ ಮೂಲಕ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಗಜಪಡೆ ಹಾಗೂ ಅಶ್ವಾರೋಹಿ ಪಡೆ ಹೆದರದಂತೆ ಹಾಗೂ ವಿಚಲಿತಗೊಳ್ಳದಂತೆ ತಾಲೀಮು ಮೂಲಕ ಒಗ್ಗಿಸಿಕೊಳ್ಳಲಾಗುತ್ತದೆ.
ಈ ಪಿರಂಗಿಗಳ ಮೇಲೆ ವಿಕ್ಟೋರಿಯಾ ರೆಜಿನಾ ಎಂಬ ಸಂಕೇತ ಹಾಗೂ ಶಾಸನವನ್ನು ನಮೂದಿಸಲಾಗಿದೆ. 156 ವರ್ಷಗಳ ಇತಿಹಾಸ ಹೊಂದಿರುವ ಈ ಪಿರಂಗಿಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಬಹಳ ಮಹತ್ವ ಪಡೆದಿದೆ. ಅಲ್ಲದೆ ದಸರಾ ಮಹೋತ್ಸವ ಕೊನೆಗೊಳ್ಳುವ ಬನ್ನಿ ಮಂಟಪದ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಕೂಡ ಈ ಪಿರಂಗಿಗಳಿಂದ ಕುಶಲಾ ತೋಪುಗಳನ್ನು ಸಿಡಿಸಿ ಮಂಗಳ ಹಾಡಲಾಗುತ್ತದೆ. ಇತಿಹಾಸದ ಪುಟಗಳಲ್ಲಿ ಫಿರಂಗಿಗಳನ್ನ ಓದಿ ತಿಳಿದುಕೊಳ್ಳುತ್ತಿದ್ದವರಿಗೆ ದಸರಾ ಮಹೋತ್ಸವದಲ್ಲಿ ಫಿರಂಗಿಗಳು ಕಣ್ತುಂಬಲಿವೆ.