Mysuru : ಮೇಯರ್ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ
ಗುರುವಾರ ಕರೆದಿರುವ ಸಭೆಯಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾವು ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಜೆಡಿಎಸ್ ಸದಸ್ಯರು ಪತ್ರ ಬರೆದ ಹಿನ್ನೆಲೆಯಲ್ಲಿ ನಗರಪಾಲಿಕೆ ಸಾಮಾನ್ಯ ಸಭೆ ಮುಂದೂಡಿದ ಮೇಯರ್ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು.
ಮೈಸೂರು : ಗುರುವಾರ ಕರೆದಿರುವ ಸಭೆಯಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾವು ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಜೆಡಿಎಸ್ ಸದಸ್ಯರು ಪತ್ರ ಬರೆದ ಹಿನ್ನೆಲೆಯಲ್ಲಿ ನಗರಪಾಲಿಕೆ ಸಾಮಾನ್ಯ ಸಭೆ ಮುಂದೂಡಿದ ಮೇಯರ್ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು.
ಸ್ಥಾಯಿ ಸಮಿತಿ ಚುನಾವಣೆ ನಡೆಸದ ಓಡಿ ಹೋದ ಮೇಯರ್‌ಗೆ ಧಿಕ್ಕಾರ, ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಖಾಲಿ ಕುರ್ಚಿಯೊಂದಕ್ಕೆ ಧಿಕ್ಕಾರದ ನಾಮಫಲಕ ಹಾಕಿದರು. ನಗರ ಪಾಲಿಕೆಯ ದ್ವಾರದಲ್ಲಿ ಬೇಗಂ ಪಲ್ಲವಿ ಅವರು ಅಂಬೇಡ್ಕರ್ ಭಾವಚಿತ್ರದೊಡನೆ ಪ್ರತಿಭಟನೆಗಿಳಿದರು.
ಅಯೂಬ್‌ಖಾನ್ ಆಕ್ರೋಶ
ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಅಯೂಬ್‌ಖಾನ್, ಚುನಾವಣೆ ನಿಗದಿ ಆಗುವ ದಿನ ಮೇಯರ್ ಎರಡು ಬಾರಿ ಗೈರುಹಾಜರಾಗಿ ಸಭೆ ಮುಂದೂಡಿದ್ದಾರೆ. ಈಗ ಜೆಡಿಎಸ್ ಸದಸ್ಯರು ಸಭೆಯ ಕಾರಣ ನೀಡಿ ಪತ್ರಬರೆದಿದ್ದಾರೆ.
ಇದು ಹೀಗೆಯೇ ಮುಂದುವರೆದರೆ ನಗರ ಪಾಲಿಕೆ ಆಡಳಿತ ವ್ಯವಸ್ಥೆ ಏನಾಗುತ್ತದೆ? ಇದು ಪ್ರಜಾಪ್ರಭುತ್ವದ ಕೊಗ್ಗಲೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಕಳೆದ ಏಳೆಂಟು ತಿಂಗಳಿಂದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಇದರಿಂದ ನಗರ ಪಾಲಿಕೆಯ ಸದಸ್ಯರಿಗೆ ಮಾತ್ರವಲ್ಲ, ಇಡೀ ಮೈಸೂರು ನಗರದ ಜನರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಆರೋಗ್ಯ ಸಮಿತಿ ಇದ್ದರೆ ಅನೇಕರಿಗೆ ವಿವಿಧ ಸವಲತ್ತು ತಲುಪಿಸಬಹುದಿತ್ತು. ಫಲಾನುಭವಿಗಳನ್ನು ಆಯ್ಕೆ ಮಾಡಬಹುದಿತ್ತು. ನಗರದಲ್ಲಿ ನಡೆಯುವ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಲು ಒಂದು ಸಮಿತಿ ಇಲ್ಲ. ಮಾ. 31 ರೊಳಗೆ ಬಜೆಟ್ ಮಂಡಿಸದಿದ್ದರೆ ನಾವು ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ನೌಕರರಿಗೆ ಸಂಬಳ ನೀಡುವುದು ಕಷ್ಟ. ಬಿಜೆಪಿ ಮತ್ತು ಜೆಡಿಎಸ್‌ನವರು ದುರಾಡಳಿತ ನಡೆಸುತ್ತಿದ್ದಾರೆ. ಇವರು ನಾಯಕರು ಉತ್ತಮ ಆಡಳಿತ ನೀಡುತ್ತೇವೆ ಎಂದು ಯಾವ ಮುಖ ತೆಗೆದುಕೊಂಡು ಹೋಗಿ ಮತ ಕೇಳುತ್ತಾರೆ ಎಂದು ಗುಡುಗಿದರು.
ನಗರ ಪಾಲಿಕೆಯಲ್ಲಿ ಆಡಳಿತ ನಡೆಸಲಾಗದವರು ಇನ್ನು ರಾಜ್ಯಕ್ಕೆ ಏನು ಕೊಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ಎರಡು ಬಾರಿ ಮುಂದೂಡಿಕೆ:
ಹಲವು ದಿನಗಳಿಂದ ಸ್ಥಾಯಿ ಸಮಿತಿ ಚುನಾವಣೆ ನಡೆಸದೆ ಮೀನಾ ಮೇಷ ಎಣಿಸಲಾಗುತ್ತಿದೆ ಎಂಬ ಆರೋಪ ಮೇಯರ್ ಮೇಲಿದೆ. ಇದರ ನಡುವೆ ಎರಡು ಬಾರಿ ಸಭೆ ಕರೆದು ಮೇಯರ್ ಅನಾರೋಗ್ಯದ ನೆಪಹೇಳಿ ಮುಂದೂಡಿದ್ದರು. ಈ ಬಾರಿ ಮಾ. 23ಕ್ಕೆ ಸಭೆ ನಿಗದಿಪಡಿಸಲಾಗಿತ್ತು. ಆದರೆ ಜೆಡಿಎಸ್ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.
ಮೇಯರ್ ಚುನಾವಣೆ ನಡೆದು ಆರೇಳು ತಿಂಗಳು ಸಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆಯಬೇಕಿತ್ತು. ಆದರೆ ಈವರೆಗೂ ಆಯ್ಕೆ ಆಗಿಲ್ಲ. ನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಾದ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಮತ್ತು ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಚುನಾವಣೆ ಆಗದಿರುವುದು ಈಗ ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನೆ ವೇಳೆ ಮಾಜಿ ಮೇಯರ್ ಆರೀಫ್ ಹುಸೇನ್, ಅಯೂಬ್‌ಖಾನ್, ಪುಷ್ಪಲತಾ ಜಗನ್ನಾಥ್, ಮಾಜಿ ಉಪ ಮೇಯರ್ ಶಾಂತಕುಮಾರಿ, ಸದಸ್ಯರಾದ ಶೌಕತ್ ಪಾಷ, ಶೋಭಾ, ರಜನಿ, ಜೆ. ಗೋಪಿ ಮೊದಲಾದವರು ಇದ್ದರು.