ಬ್ರಾಹ್ಮಣರಿಗೆ ಬೆಲೆ ಕೊಡದ ಹಾಗೂ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಶಾಸಕ ರಾಮದಾಸ್‌ಗೆ ಚುನಾವಣೆಯ ವೇಳೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬಾರದು ಎಂದು ಬ್ರಾಹ್ಮಣರ ಸಂಘ ಒತ್ತಾಯಿಸಿದೆ.

ಮೈಸೂರು (ಫೆ.23): ಬ್ರಾಹ್ಮಣರಿಗೆ ಬೆಲೆ ಕೊಡದ ಹಾಗೂ ಅಗತ್ಯ ಸಂದರ್ಭಗಳಲ್ಲಿ ಸಹಾಯವನ್ನು ಮಾಡದ ಹಾಲಿ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯ ವೇಳೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬಾರದು ಎಂದು ಬ್ರಾಹ್ಮಣರ ಸಂಘ ಒತ್ತಾಯಿಸಿದೆ.

ಈ ಕುರಿತು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ನಟರಾಜ ಜೋಯಿಸ್ ಅವರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಬ್ರಾಹ್ಮಣ ಸಮುದಾಯದವರಿಗೆ ರಾಮದಾಸ್ ಸಾಂತ್ವನದ ಮಾತನ್ನು ಹಾಡುತ್ತಿಲ್ಲ. ಶಾಸಕರು ಬ್ರಾಹ್ಮಣರಿಗೆ ಬೆಲೆ ಕೊಡುತ್ತಿಲ್ಲ‌. ಸಂಘದ ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ಬ್ರಾಹ್ಮಣ ಸಮುದಾಯದ ಬಡವರಿಗೆ ಯಾವ ರೀತಿಯಲ್ಲು ಸ್ಪಂದಿಸುತ್ತಿಲ್ಲ‌. ಇದರಿಂದ ಬಿಜೆಪಿ ಕೃಷ್ಣರಾಜ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಕೊಡಿ ಎಂದು ಮನವಿ‌ ಮಾಡಿದ್ದಾರೆ.

Pralhad Joshi: ನಾನು ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಉದ್ಭವಿಸಲ್ಲ: ಪ್ರಲ್ಹಾದ್ ಜೋಶಿ

ಸಮುದಾಯದ ಸಭೆಯಲ್ಲಿ ಒಕ್ಕೂರಲ ತೀರ್ಮಾನ: ಈಗಾಗಲೇ ನಮ್ಮ ಬ್ರಾಹ್ಮಣ ಸಮುದಾಯದ ಎಲ್ಲಾ ಮುಖಂಡರ ಸಭೆ ನಡೆಸಿದ್ದೆವು. ಅಲ್ಲಿ ಒಕ್ಕೊರಲಿನಿಂದ ಹೇಳಿದ ಅಭಿಪ್ರಾಯವನ್ನ ಇಲ್ಲಿ ನಾವು ಹೇಳುತ್ತಿದ್ದೇವೆ. ಇದು ಕೇವಲ ನಮ್ಮ ಅಭಿಪ್ರಾಯವಲ್ಲ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರು ಸಹಾಯ ಕೇಳಿದರೆ, ಶಾಸಕ ರಾಮದಾಸ್ ಕಚೇರಿಯಲ್ಲಿರುವ ಧರ್ಮೇತ್ತರರೊಬ್ಬರಿಂದ ಕರೆ ಮಾಡಿಸಿ ಅಂತ ಪೊಲೀಸರೆ ಹೇಳುವ ಪರಿಸ್ಥಿತಿ ಬಂದಿದೆ. ಜಿಲ್ಲಾ ಬ್ರಾಹ್ಮಣರ ಸಂಘದ ನಗರ ಅಧ್ಯಕ್ಷ ಡಿ.ಟಿ.ಪ್ರಕಾಶ್, ಜಿಲ್ಲಾಧ್ಯಕ್ಷ ನಟರಾಜ್ ಜೋಯಿಸ್, ಬ್ರಾಹ್ಮಣ ಮುಖಂಡ ಕೆ.ರಘುರಾಂ ವಾಜಪೇಯಿ ಅವರು ರಾಮದಾಸ್‌ಗೆ ಬಿಜೆಪಿ ಟಿಕೆಟ್‌ ನೀಡದಂತೆ ಒತ್ತಾಯ ಮಾಡಿದ್ದಾರೆ.

ಸಜ್ಜನ ಬ್ರಾಹ್ಮಣರಿಗೆ ಟಿಕೆಟ್‌ ಕೊಡಲು ಒತ್ತಾಯ: ಶಾಸಕ ರಾಮದಾಸ್‌ಗೆ ಸ್ವಜಾತಿ ವಿರೋಧ: ಶಾಸಕ ಎಸ್.ಎ. ರಾಮದಾಸ್‌ ಅವರಿಗೆ ತಮ್ಮ ಸ್ವಜಾತಿ ಅವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. ಶಾಸಕರು ಸಮುದಾಯದ ಮನವಿಗೆ ಸ್ಪಂದಿಸುತ್ತಿಲ್ಲ. ಸಮಾಜದವರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಆದರ್ಶ, ಯೋಗ್ಯ, ಸಜ್ಜನ, ಗೆಲ್ಲುವ ಜನಪ್ರಿಯ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಬಿಜೆಪಿಗೆ ರಾಮದಾಸ್ ಅನಿವಾರ್ಯವಾದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಥಾನಮಾನ ನೀಡುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಬ್ರಾಹ್ಮಣ ಮುಖಂಡರಾದ ವಂಗೀಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಮುಖಂಡ ಕೆ.ರಘುರಾಂ, ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ.ಲಕ್ಷ್ಮಿ, ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಶ್ರೀನಿವಾಸ್ ಬೆಂಬಲ ನೀಡಿದ್ದಾರೆ. 

25 ಕ್ಷೇತ್ರಗಳಲ್ಲಿ ನಮಗೆ ಟಿಕೆಟ್‌ ನೀಡಿ: ಬ್ರಾಹ್ಮಣ ಮಹಾಸಭಾ ಆಗ್ರಹ

ಮೂರೂ ಪಕ್ಷಗಳು ಬ್ರಾಹ್ಮಣರಿಗೆ ಟಿಕೆಟ್‌ ಕೊಡಿ: ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 75 ಸಾವಿರ ಬ್ರಾಹ್ಮಣ ಮತದಾರರಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ಬಹುಸಂಖ್ಯಾತರು ಆಗಿರುವ ಬ್ರಾಹ್ಮಣ ಅಭ್ಯರ್ಥಿಗಳಿಗೆ ಬಿಜೆಪಿಯ ಮಾದರಿಯಂತೆಯೇ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು. ಆಗ ಆ ಮೂವರಲ್ಲಿ ಯೋಗ್ಯವಾದ ಅಭ್ಯರ್ಥಿಯನ್ನು ನಮ್ಮ ಸಮುದಾಯದವರು ಆಯ್ಕೆ ಮಾಡುತ್ತೇವೆ ಎಂದು ಬ್ರಾಹ್ಮಣ ಸಮುದಾಯದ ಮುಖಂಡ ನಟರಾಜ ಜೋಯಿಸ್ ಹೇಳಿದ್ದಾರೆ.