ಮೈಸೂರು, (ಮೇ 25): ತನ್ನ ಗೆಳತಿಯೊಂದಿಗೆ ತೆಗೆದುಕೊಂಡಿದ್ದ ನಗ್ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಮಲ್ಲೂಪುರನಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕು ಮಲ್ಲೂಪುರ ಗ್ರಾಮದ ನಿವಾಸಿ ಗಿರೀಶ್ ಆತ್ಮಹತ್ಯೆಗೆ ಶರಣಾದ ಯುವಕ. ಟಿವಿಎಸ್ ನಲ್ಲಿ ಉದ್ಯೋಗಿಯಾಗಿದ್ದ ಗಿರೀಶ್, ಕಾರ್ಯ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. 

ಈ ಇಬ್ಬರು ಪ್ರೇಮಿಗಳು ತಾವೇ ತಮ್ಮ ಮೊಬೈಲ್ ನಲ್ಲಿ  ನಗ್ನವಾಗಿ ಸೆಲ್ಫಿಗಳನ್ನು ಹಿಡಿದುಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯೊಂದಿಗಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿ ವೈರಲ್ ಆಗುತ್ತಿದ್ದಂತೆ, ಹೆದರಿದ ಗಿರೀಶ್ ಮಾತ್ರೆ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. 

ಹೊಟ್ಟೆ ನೋವಿನಿಂದ  ಗಿರೀಶ್ ಸಾವನ್ನಪ್ಪಿರುವುದಾಗಿ ಮೃತ ಗಿರೀಶನ ಪಾಲಕರು ತಿಳಿಸಿದ್ದಾರೆ. ಗಿರೀಶ್ ಸಾವಿನ ನಂತರ ಕಾರ್ಯ ಗ್ರಾಮದಿಂದ ಯುವತಿಯೂ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.