ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಗುಡ್ ನ್ಯೂಸ್
- ಮೈಸೂರು - ಬೆಂಗಳೂರು ನಡುವೆ ಪ್ರಗತಿಯಲ್ಲಿರುವ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
- ಮುಂದಿನ ದಸರಾ ಮಹೋತ್ಸವದೊಳಗೆ ಪೂರ್ಣಗೊಳ್ಳಲಿದೆ
- ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಹೇಳಿಕೆ
ಮೈಸೂರು (ಆ.19): ಮೈಸೂರು - ಬೆಂಗಳೂರು ನಡುವೆ ಪ್ರಗತಿಯಲ್ಲಿರುವ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಮುಂದಿನ ದಸರಾ ಮಹೋತ್ಸವದೊಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರ ದಸರಾ ಮಹೋತ್ಸವದೊಳಗೆ ಮೈಸೂರು- ಬೆಂಗಳೂರು ನಡುವಿನ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಗದಿತ ಅವಧಿಗಿಂತ ಮೊದಲೇ ಪೂರ್ಣವಾಗಲಿದೆ. ಈಗಾಗಲೇ ಶೇ. 81ರಷ್ಟುಕಾಮಗಾರಿ ಆಗಿದೆ. ಬರುವ ಜನವರಿ ವೇಳೆಗೆ ಬೈಪಾಸ್ ಕಾಮಗಾರಿ ಸಂಪೂರ್ಣ ಆಗಲಿದೆ. ಇಡೀ ದೇಶದಲ್ಲೇ ನಿಗದಿತ ಅವಧಿಗಿಂದ ಮೊದಲೇ ಮುಗಿಯುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇದಾಗಲಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಂಗಳೂರು- ಮೈಸೂರು ನಡುವಿನ ಪ್ರಯಾಣದ ಅಂತರ ಕೇವಲ ಒಂದೂವರೆ ಗಂಟೆಗೆ ಇಳಿಕೆ ಆಗಲಿದೆ. ಅದಕ್ಕಿಂತಲೂ ಕಡಿಮೆ ಸಮಯದಲ್ಲೂ ಕ್ರಮಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.
ದಶಪಥ ಯೋಜನೆ ಬಗ್ಗೆ ಅನುಮಾನ ಇದ್ರೆ ತಜ್ಞರನ್ನು ಕರೆತಂದು ಪರಿಶೀಲಿಸಲಿ: ಪ್ರತಾಪ್ ಸಿಂಹ
ಮೈಸೂರು- ನಂಜನಗೂಡು ನಡುವೆ ಆರು ಪಥದ ರಸ್ತೆ ನಿರ್ಮಾಣ ಆಗಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಇದಕ್ಕೆ ಸದ್ಯದಲ್ಲಿಯೇ ಅನುಮೋದನೆ ದೊರೆಯಲಿದೆ. ಅಂತೆಯೇ ಮೈಸೂರಿನಿಂದ- ಟಿ. ನರಸೀಪುರದವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಆಗಲಿದೆ. ಕೊಡಗು ಬೆಂಗಳೂರು ನಡುವೆ ಸುಸಜ್ಜಿತ ರಸ್ತೆ ನಿರ್ಮಿಸಲಾಗುವುದು. ಬರುವ 2022ರ ಮಾಚ್‌ರ್‍ನಲ್ಲಿ ಬೆಂಗಳೂರು- ಕೊಡಗು ನಡುವಿನ ಸುಸಜ್ಜಿತ ರಸ್ತೆ ಕಾಮಗಾರಿ ಆರಂಭವಾಗಲಿದ್ದು, 2024ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು- ಕೊಡಗು ನಡುವಿನ ಪ್ರಯಾಣದ ಸಮಯ ಮೂರೂವರೆ ಗಂಟೆಗೆ ಇಳಿಕೆ ಆಗಲಿದೆ ಎಂದು ಅವರು ತಿಳಿಸಿದರು.
ಆಷ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಹೆಚ್ಚಾಗಿದೆ. ಭಾರತೀಯರಿಗೆ ಸಿಎಎ ಕಾಯ್ದೆಯನ್ನು ಏಕೆ ಜಾರಿಗೆ ತರಲಾಯಿತು ಎಂಬುದು ಈಗ ಅರ್ಥವಾಗಬೇಕು. ಮೋದಿ ಅವರು ಪರಿಸ್ಥಿತಿಯನ್ನು ಮೊದಲೇ ಅರ್ಥ ಮಾಡಿಕೊಂಡು ಸಿಎಎ ಕಾಯ್ದೆಯನ್ನು ಜಾರಿಗೊಳಿಸಿದರು.
ಪ್ರತಿಯೊಬ್ಬ ಭಾರತೀಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಇವತ್ತು ಆಷ್ಘಾನಿಸ್ತಾನದ ಸುತ್ತಮುತ್ತ ಹಲವಾರು ಮುಸ್ಲಿಂ ರಾಷ್ಟ್ರಗಳಿದ್ದರೂ ಅವರನ್ನು ಕರೆಸಿಕೊಳ್ಳುತ್ತಿಲ್ಲ. ಷರಿಯಾ, ತಾಲಿಬಾನ್, ಮಾನವ ವಿರೋಧಿ ಎಂಬುದು ಈಗ ಸಾಭೀತಾಗಿದೆ. ಕೇವಲ ಆಷ್ಘಾನಿಸ್ತಾನದ ಮನಸ್ಥಿತಿಯ ಜನರಿಲ್ಲ. ಭಾರತದಲ್ಲೂ ಅದೇ ಮನಸ್ಥಿತಿಯ ಜನರಿದ್ದಾರೆ. ಸಿಎಎ ಜಾರಿಗೆ ತಂದದ್ದು ಆಷ್ಘಾನಿಸ್ತಾನದ ಕಾರಣಕ್ಕಾಗಿ ಮಾತ್ರವಲ್ಲ. ಇತರ ಕಡೆಗಳಲ್ಲಿ ಈ ರೀತಿಯ ಅನಾಹುತಗಳಾಗಬಹುದು. ಎಲ್ಲರೂ ಸೇರಿ ಇದನ್ನು ಎದುರಿಸಬೇಕಾಗಿದೆ. ಆಷ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆ ಮುಸ್ಲಿಂ ರಾಷ್ಟ್ರಕ್ಕೂ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಅವರು ಹೇಳಿದರು.