ಮೈಸೂರು(ಆ.03): ಈವರೆಗೆ ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ನೀರಿನ ಮೀಟರ್‌ ಅಳವಡಿಕೆಯನ್ನು ಈಗ ಸಮೀಪದ ಗ್ರಾಪಂಗಳಿಗೂ ವಿಸ್ತರಿಸಲು ತಾಲೂಕು ಪಂಚಾಯತು ನಿರ್ಧರಿಸಿದೆ.

ಮೈಸೂರಿಗೆ ಸಮೀಪದಲ್ಲಿರುವ ಗ್ರಾಪಂಗಳಾದ ಕೂರ್ಗಳ್ಳಿ, ಹಿನಕಲ್‌ ಮತ್ತು ಬೋಗಾದಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಮೀಟರ್‌ ಅಳವಡಿಸಲು ತೀರ್ಮಾನಿಸಲಾಗಿದೆ.

ಅನಗತ್ಯವಾಗಿ ನೀರು ಪೋಲಾಗುವುದನ್ನು ತಪ್ಪಿಸುವುದು, ಸಮರ್ಪಕ ನೀರು ಪೂರೈಕೆ, ನೀರುಗಂಟಿಗಳಿಂದಾಗುತ್ತಿದ್ದ ಸಮಸ್ಯೆ ನಿವಾರಿಸಲು ತಾಪಂ ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮೂರು ಗ್ರಾಪಂಗಳಲ್ಲಿನ ನೀರಿನ ಸಂಪರ್ಕಕ್ಕೆ ಮೀಟರ್‌ ಅಳವಡಿಸಲು ನಿರ್ಧರಿಸಿದೆ. ಬಳಿಕ ಮುಂದಿನ ಬೇಸಿಗೆ ವೇಳೆಗೆ ಮೈಸೂರು ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ನೀರಿನ ಸಂಪರ್ಕಕ್ಕೂ ಮೀಟರ್‌ ಅಳವಡಿಸಲು ತೀರ್ಮಾನಿಸಲಾಗಿದೆ.

ನೀರಿನ ಮಿತವ್ಯಯವೇ ಪ್ರಮುಖ ಉದ್ದೇಶ:

ಮೈಸೂರು ನಗರಕ್ಕೆ ಕಾವೇರಿ ಮತ್ತು ಕಪಿಲಾ ನದಿಯಿಂದ ನೀರು ಪೂರೈಸಲಾಗುತ್ತಿದೆ. ಆದರೆ ತಾಲೂಕಿನ ಅನೇಕ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದರಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಾಗಿ ನೀರುಗಂಟಿಗಳು ಸರಿಯಾದ ಸಮಯಕ್ಕೆ ನೀರು ಬಿಡದಿರುವುದು, ನೀರು ಅನಗತ್ಯವಾಗಿ ಪೋಲಾಗುತ್ತಿರುವ ಸಂಬಂಧ ಅನೇಕ ದೂರುಗಳಿವೆ. ಇದನ್ನು ಸರಿಪಡಿಸಲು ಮೊದಲಿಗೆ ನೀರು ಪೋಲಾಗದಂತೆ ಕ್ರಮ ಕೈಗೊಳ್ಳುವ ಜೊತೆಗೆ ಮೀಟರ್‌ ಅಳವಡಿಸುವುದರಿಂದ ನೀರಿನ ಮಿತವ್ಯಯಕ್ಕೂ ಅವಕಾಶ ಮಾಡಿಕೊಡುವ ಉದ್ದೇಶವನ್ನೂ ತಾಪಂ ಹೊಂದಿದೆ.

ಈ ಯೋಜನೆಯನ್ನು ಗ್ರಾಪಂನ 14ನೇ ಹಣಕಾಸು ಯೋಜನೆಯಡಿ ಕೈಗೊಳ್ಳುತ್ತಿದ್ದು, ಕೂರ್ಗಳ್ಳಿ ಗ್ರಾಪಂಗೆ ಈಗಾಗಲೇ ಅನುಮತಿ ನೀಡಲಾಗಿದೆ. ಸದ್ಯದಲ್ಲಿಯೇ ಮೀಟರ್‌ ಅಳವಡಿಕೆ ಕಾರ್ಯ ಆರಂಭವಾಗಲಿದೆ. ಪ್ರಸ್ತುತ ತಾಲೂಕಿನಲ್ಲಿ 25 ಬೋರ್‌ವೆಲ್‌ಗಳಿವೆ. ಇದರಿಂದ ಅನೇಕ ಗ್ರಾಮಗಳಿಗೆ ನೀರು ಪೂರೈಸಬಹುದಾಗಿದೆ. ಇನ್ನು ಮೈಸೂರು ನಗರ ಪಾಲಿಕೆಗೆ ನೀರು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ವಾಣಿವಿಲಾಸ ಜಲ ಕಾರ್ಯಾಗಾರವು ಗ್ರಾಮಾಂತರ ಪ್ರದೇಶಕ್ಕೆ 3 ಎಂಎಲ್‌ಡಿ ನೀರು ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ ಈ ಪೈಕಿ ಕೇವಲ ಒಂದು ಎಂಎಲ್‌ಡಿ ನೀರು ಮಾತ್ರ ಬರುತ್ತಿದೆ. ಇಷ್ಟುನೀರಿನ ಸಂಪನ್ಮೂಲದಿಂದ ತಾಲೂಕಿನ ಗ್ರಾಮಗಳಿಗೆ ದಿನ ಬಿಟ್ಟು ದಿನ ನೀರು ಪೂರೈಸಲು ಉದ್ದೇಶಿಸಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಇಲವಾಲ ಹೋಬಳಿ ವ್ಯಾಪ್ತಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸಲು ಉದ್ದೇಶಿಸಿದ್ದು, ಈವರೆಗೂ ಯೋಜನೆಗೆ ಅನುಮೋದನೆ ದೊರಕಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕರಾಗಿ ಜಿ.ಟಿ. ದೇವೇಗೌಡ ಅವರು ಇದ್ದುದ್ದರಿಂದಲೋ ಏನೋ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಯೋಜನೆಗೆ ಮಂಜೂರಾತಿ ದೊರೆಯಲಿಲ್ಲ. ಇನ್ನು ಹಾಲಿ ಸಮ್ಮಿಶ್ರ ಸರ್ಕಾರದಲ್ಲಿ ಜಿ.ಟಿ. ದೇವೇಗೌಡರೇ ಉಸ್ತುವಾರಿ ಸಚಿವರಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದರೆ ಮಾತ್ರ ಅಲೋಕ ಸಂಪರ್ಕಿಸುವ ಯೋಜನೆಯ ಮೂಲಕ ಬಹುಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬಹುದು. ಈ ಯೋಜನೆಗೆ ಆ ಭಾಗದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.

ತುಮಕೂರು: ಅಪರಿಚಿತ ವ್ಯಕ್ತಿಯ ಶವ ಪತ್ತೆ

ಎಲ್‌ಇಡಿ ಸ್ಮಾರ್ಟ್‌ ಬಲ್ಬ್‌ ಅಳವಡಿಕೆ:

ಅತ್ಯಾಧುನಿಕ ಸ್ವಯಂ ನಿಯಂತ್ರಿತ ಸ್ಮಾರ್ಟ್‌ ಎಲ್‌ಇಡಿ ಬಲ್ಬ್‌ಗಳನ್ನು ಬೀದಿ ದೀಪಕ್ಕೆ ಅಳವಡಿಸಲು ತಾಪಂ ತೀರ್ಮಾನಿಸಿದೆ. ನಗರಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಸರಿಯಾಗಿ ಬೀದಿ ದೀಪದ ಸೌಲಭ್ಯ ಇಲ್ಲದಿರುವ ಕುರಿತು ಆಕ್ಷೇಪ ವ್ಯಕ್ತವಾಗುತ್ತಿದೆ. ಆದ್ದರಿಂದ ಸಂಜೆ 6 ಗಂಟೆಗೆ ತಾನೇ ಆನ್‌ ಆಗಿ, ಬೆಳಗ್ಗೆ 6 ಗಂಟೆಗೆ ಆಫ್‌ ಆಗುವಂಥ ಸ್ವಯಂ ನಿಯಂತ್ರಿತ ಸ್ಮಾರ್ಟ್‌ ಎಲ್‌ಇಡಿ ಬಲ್‌್ಬ ಅಳವಡಿಸಲು ತೀರ್ಮಾನಿಸಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ