ಮೈಸೂರು (ಸೆ.30):  ಮೈಸೂರಿನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ ಸೇರಿದಂತೆ ಕಚೇರಿಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಹೊಸ ಜಿಲ್ಲಾಧಿಕಾರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ರೋಹಿಣಿ ಸಿಂಧೂರಿ ಅವರು ಅಧಿಕಾರ ಸ್ವೀಕರಿಸುವ ಮುನ್ನ ಪತಿ ಸುಧೀರ್‌ ರೆಡ್ಡಿ ಅವರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ವಿರೋಧದ ನಡುವೆಯೂ ಅಮ್ಮನ ದರ್ಶನ ಪಡೆದು ಅಧಿಕಾರ ಸ್ವೀಕರಿಸಿದ ರೋಹಿಣಿ ಸಿಂಧೂರಿ

ಈ ಹಿಂದಿನ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಅವರು ವರ್ಗಾವಣೆಯಾದ ಬಳಿಕ ಕಳೆದ ಆ.29 ರಂದು ಬಿ.ಶರತ್‌ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದಾದ ಒಂದೇ ತಿಂಗಳಿನಲ್ಲಿ ಬಿ.ಶರತ್‌ ಅವರನ್ನು ವರ್ಗಾಯಿಸಿ, ರೋಹಿಣಿ ಸಿಂಧೂರಿ ಅವರನ್ನು ಜಿಲ್ಲಾಧಿಕಾರಿಯಾಗಿ ಸರ್ಕಾರ ಸೋಮವಾರ ನಿಯೋಜಿಸಿದ್ದು, ಅವರು ಮಂಗಳವಾರ ಮೈಸೂರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.

ಕೊರೋನಾ ನಿಯಂತ್ರಣ, ದಸರಾ ಸವಾಲಿನ ಕೆಲಸ

ಅಧಿಕಾರ ಸ್ವೀಕರಿಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಮತ್ತು ಮುಂಬರುವ ದಸರಾ ಮಹೋತ್ಸವ ಸವಾಲಿನ ಕೆಲಸವಾಗಿದೆ ಎಂದರು.

ಬೆಂಗಳೂರಿನ ನಂತರ ಮೈಸೂರು ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕೊರೋನಾ ನಿಯಂತ್ರಣ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಈಗ ತಾನೇ ಅಧಿಕಾರ ವಹಿಸಿಕೊಂಡಿದ್ದು, ಅಧಿಕಾರಿಗಳ ಸಭೆ ಕರೆದು ಕೊರೋನಾ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಮುಂಬರುವ ದಸರಾ ಮಹೋತ್ಸವ ಆಚರಣೆ ನನಗೆ ಸವಾಲಿನ ಕೆಲಸವಾಗಿದೆ. ಕೋವಿಡ್‌ ಸಂದರ್ಭದಲ್ಲಿ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು ದಸರಾ ಆಚರಿಸಲಾಗುತ್ತದೆ ಎಂದು ಹೇಳಿದರು.

ಹಾಸನದ ಶ್ರವಣಬೆಳಗೊಳದಲ್ಲಿ ಮಹಾ ಮಸ್ತಕಾಭಿಷೇಕ ನಡೆಸಿದ ಅನುಭವವಿದೆ. ಅಲ್ಲಿ 10 ದಿನಗಳಲ್ಲಿ 5 ಲಕ್ಷ ಜನ ಸೇರಿದ್ದರು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದರ ಅನುಭವದ ಆಧಾರದ ಮೇಲೆ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವ ವಿಶ್ವಾಸವಿದೆ. ಮೈಸೂರು ನನಗೇನೂ ಹೊಸದಲ್ಲ. ನಾನು ಮೈಸೂರಿನಲ್ಲೇ ತರಬೇತಿ ಪಡೆದಿದ್ದೇನೆ. ಮೈಸೂರು ಜಿಲ್ಲೆಯ ಬಗ್ಗೆ ಸಾಕಷ್ಟುಪರಿಚಯವಿದೆ ಎಂದು ತಿಳಿಸಿದರು.