Asianet Suvarna News Asianet Suvarna News

Hoovina Hadagali: ಮೈಲಾರಲಿಂಗೇಶ್ವರ ಜಾತ್ರೆ: ಕುಬೇರನ ದಿಕ್ಕಿನತ್ತ ಹರಿದ ಹಾಲು

*  ಮೈಲಾರಲಿಂಗೇಶ್ವರ ಜಾತ್ರೆಗೆ ಹಾಲು ಉಕ್ಕಿಸಿ ಚಾಲನೆ, ಡೆಂಕಣ ಮರಡಿಗೆ ಗೊರವಯ್ಯ 
*  ಮೈಲಾರ ಜಾತ್ರೆಗೆ ಬರುವ ಭಕ್ತರಿಗೆ ನಿರ್ಬಂಧ
*  ರಥಸಪ್ತಮಿ ದಿನದಿಂದ 11 ದಿನಗಳ ಕಾಲ ಉಪವಾಸ ವ್ರತ ಮಾಡುವ ಗೊರವಯ್ಯ

Mylara Lingeshwara Fair Starts at Hoovina Hadagali in Vijayanagara grg
Author
Bengaluru, First Published Feb 9, 2022, 12:24 PM IST

ಹೂವಿನಹಡಗಲಿ(ಫೆ.09): ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದ(Mylara Lingeshwara Temple) ಆವರಣದಲ್ಲಿ ಫೆ. 8 ರಥ ಸಪ್ತಮಿಯಂದು ಹಾಲು ಉಕ್ಕಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಈ ಬಾರಿ ದೇವಸ್ಥಾನದ ಆವರಣದಲ್ಲಿ ಕಾಯಿಸಿದ ಹಾಲು ಕುಬೇರನ ದಿಕ್ಕಿನೆಡೆ ಹರಿದಿದೆ. ಕಾಯ್ದ ಹಾಲು ಯಾವ ದಿಕ್ಕಿನ ಕಡೆಗೆ ಹರಿಯುತ್ತದೆಯೋ, ಆ ದಿಕ್ಕಿನ ಪ್ರದೇಶದಲ್ಲಿ ಮಳೆ ಬೆಳೆ ಹುಲುಸಾಗಿ ಬೆಳೆಯುತ್ತಿದೆ ಎಂಬ ನಂಬಿಕೆ ಭಕ್ತರದ್ದು, ಕಳೆದ ಬಾರಿ ಹಾಲು ಉತ್ತರ ದಿಕ್ಕಿನ ಕಡೆಗೆ ಹರಿದಿತ್ತು. ಈ ಬಾರಿ ಕುಬೇರ ದಿಕ್ಕಿಗೆ ಹರಿದಿದೆ.

ಕೋವಿಡ್-19(Covid-19) ಹಿನ್ನೆಲೆಯಲ್ಲಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರ(Devotees) ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಭಕ್ತರು ಭಾಗವಹಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ಜತೆಗೆ ಮೈಲಾರ ಗ್ರಾಮಕ್ಕೆ ಬರುವ ಭಕ್ತರನ್ನು ತಡೆಯಲು ತಾಲೂಕಿನ ಹೊಳಲು, ಗುತ್ತಲ, ಕುರುವತ್ತಿ ಮತ್ತು ಡೊಂಬರಹಳ್ಳಿ ಬಳಿ 4 ಕಡೆಗಳಲ್ಲಿ ಚೆಕ್ ಪೋಸ್ಟ್‌ ತೆರೆಯಲಾಗಿದೆ. 

ಗಡ್ಡಧಾರಿ ಸಿಎಂ ಸುಳ್ಳು, ಅದು ರಾಜಕೀಯ ಪ್ರೇರಿತ ಹೇಳಿಕೆ: ಗೊರವಯ್ಯ

ಈಗಾಗಲೇ ಜಿಲ್ಲಾಡಳಿತ ಮೈಲಾರ ಜಾತ್ರೆಗೆ ಬರುವ ಭಕ್ತರಿಗೆ ನಿರ್ಬಂಧ ಹೇರಿದ್ದು, ಜತೆಗೆ 144 ಸೆಕ್ಷೆನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ(Temple) ಆಗಮಿಸಿಲ್ಲ. ದೇವಸ್ಥಾನದ ರಂಗ ಮಂಟಪ ದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಇವರು, ಕಾರ್ಣಿಕ ನುಡಿಯಲು ಗೊರವಪ್ಪ ಏರುವ ಐತಿಹಾಸಿಕ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ಬಾಬುದಾರರು, ಮೈಲಾರ ಗ್ರಾಮದ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಸಂಪ್ರದಾಯದ(Tradition) ಪ್ರಕಾರ ಪೂಜೆ ಸಲ್ಲಿಸಲಾಯಿತು.

ಕಾರ್ಣಿಕ ನುಡಿಯುವ ಗೊರವಯ್ಯ ರಥಸಪ್ತಮಿ ದಿನದಿಂದ 11 ದಿನಗಳ ಕಾಲ ಉಪವಾಸ(Fasting) ವ್ರತ ಮಾಡುತ್ತಾನೆ. ಜತೆಗೆ ಭಂಡಾರದ ನೀರು ಮಾತ್ರ ಸೇವಿಸುತ್ತಾನೆ. ಸ್ವಾಮಿಯ ಪಲ್ಲಕ್ಕಿಯ ಮೌನ ಸವಾರಿ ಉತ್ಸವವು ಡೆಂಕಣ ಮರಡಿಗೆ ತೆರಳಿ 11 ದಿನಗಳ ಕಾಲ ಅಲ್ಲಿಯೇ ಇಡಲಾಗುತ್ತಿದೆ. ನಿತ್ಯ ದೇವಸ್ಥಾನದ ಅರ್ಚಕರು, ಡೆಂಕಣ ಮರಡಿಗೆ ದಿನಕ್ಕೆರಡು ಬಾರಿ ಪೂಜೆ ಸಲ್ಲಿಸುತ್ತಾರೆ. ಸಂಪ್ರದಾಯದಂತೆ ದೇವಸ್ಥಾನದಲ್ಲಿ ಹಾಕಲಾಗಿರುವ ಗಂಟೆಗಳನ್ನು ತೆಗೆಯಲಾಗುತ್ತಿದೆ. ಜತೆಗೆ ದೇವಸ್ಥಾನದಲ್ಲಿ ಯಾವುದೇ ಪೂಜೆ ಜರುಗುವುದಿಲ್ಲ. ಡೆಂಕಣ ಮರಡಿಯನ್ನು ಹಗಲು ರಾತ್ರಿ ಕಾಯುವ ಕಾಯಕದಲ್ಲಿ ಹರಕೆ ತೀರಿಸುವ ಭಕ್ತರಿಗೆ ಅಂಬಲಿ ಮಜ್ಜಿಗೆ, ಬೆಲ್ಲದ ಪಾನಕ ನೀಡಲಾಗುತ್ತಿದೆ. ಇಂದಿನಿಂದ ತಾವು 11 ದಿನಗಳ ಕಾಲ ಉಪವಾಸ ವ್ರತ ಮಾಡುತ್ತೇವೆಂದು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಮಾಹಿತಿ ನೀಡಿದರು.

ಫೆ. 8 ಮಂಗಳವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಹಾಲು ಉಕ್ಕಿಸಲಾಯಿತು. ಈ ಧಾರ್ಮಿಕ ಕಾರ್ಯಕ್ಕೆ ಭಕ್ತರು ಅಕ್ಕಿ, ಬೆಲ್ಲ, ದವಸ, ಧ್ಯಾನಗಳನ್ನು ತಂದು ದೇವರಿಗೆ ಅರ್ಪಿಸುತ್ತಾರೆ. ಆಕಳು ಸಗಣಿಯಿಂದ ಮಾಡಿದ ಕುಳ್ಳುಗಳಿಂದ ದೇವರ ಸನ್ನಿಧಾನದಲ್ಲಿ ಹಾಲು ಕಾಯಿಸಲಾಯಿತು. ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಕೂಗಳತೆ ದೂರದ ಡೆಂಕಣ ಮರಡಿಗೆ, ದೇವಲೋಕದ 7 ಕೋಟಿ ದೇವಾನುದೇವತೆಗಳು ಮಾರು ವೇಷದಲ್ಲಿ ರಥಸಪ್ತಮಿ ದಿನವೇ ಬಂದಿರುತ್ತಾರೆ. 

11 ದಿನಗಳ ಕಾಲ ಡೆಂಕಣ ಮರಡಿ ಪಕ್ಕದಲ್ಲಿರುವ ಅವ್ವನ ಮರಡಿ (ಗಂಗಿಮಾಳಮ್ಮ ಮರಡಿ)ಯಲ್ಲಿ ರಾಕ್ಷಸರೊಂದಿಗೆ ಕದನ ಮಾಡುವ ಮೈಲಾರಲಿಂಗ (ಶಿವ), ಗಂಗಿಮಾಳಮ್ಮ (ಪಾರ್ವತಿ) ಸೇರಿದಂತೆ 7 ಕೋಟಿ ದೇವಾನುದೇವತೆಗಳು, ಪೌರಾಣಿಕ ಹಿನ್ನೆಲೆಯಂತೆ ರಥಸಪ್ತಮಿಯ ದಿನದಂದು ಭಕ್ತರು, ನೈವೇದ್ಯಕ್ಕೆ ತರುವ ಸಜ್ಜೆ ಕಡಬು ಮತ್ತು ಗೊರವಯ್ಯನ ಬಳಿ ಇರುವ ಬಿಲ್ಲು, ಗುರುಗಳ ಕೈಯಲ್ಲಿ ಬತ್ತಳಿಕೆಗಳನ್ನು ಇಟ್ಟುಕೊಂಡು ಪರಸ್ಪರ ಹೊಡೆದಾಡಿಕೊಳ್ಳುವ, ಕಡುಬಿನ ಕಾಳಗ ಕೂಡಾ ಮಂಗಳವಾರ ರಾತ್ರಿ ದೇವಸ್ಥಾನದಿಂದ ಡೆಂಕಣ ಮರಡಿಗೆ ಹೋಗುವ ಸಂದರ್ಭದಲ್ಲಿ ನಡೆಯುತ್ತದೆ. 

ಮುಂದಿನ ಮುಖ್ಯಮಂತ್ರಿ ಡಿಕೆಶಿ: ಗೊರವಯ್ಯ ಭವಿಷ್ಯ

ಈ ಸಂದರ್ಭದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಕಾರ್ಯಕರ್ತರು ಗುರು ವೆಂಕಪ್ಪಯ್ಯ ಒಡೆಯರ್, ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ, ಅರ್ಚಕ ಪ್ರಮೋದ ಭಟ್, ದೇವಸ್ಥಾನದ ಸಹಾಯಕ ಆಯುಕ್ತ ಪ್ರಕಾಶ ರಾವ್, ದೇವಸ್ಥಾನದ ಬಾಬುದಾರರು, ಭಕ್ತರು, ಗ್ರಾಮಸ್ಥರು ಮಾತ್ರ ಉಪಸ್ಥಿತರಿದ್ದರು. 

ಮೈಲಾರಕ್ಕೆ ಬರುವ ಭಕ್ತರನ್ನು ತಡೆಯಲು 4 ಕಡೆಗಳಲ್ಲಿ ಚೆಕ್ ಪೋಸ್ಟ್‌ ರಚಿಸಿ ಭಕ್ತರನ್ನು ತಡೆಯಲಾಗುತ್ತಿದೆ. ದೇವರ(God) ದರ್ಶನಕ್ಕೂ ಅವಕಾಶವಿಲ್ಲ, ಯಾವುದೇ ಅಂಗಡಿ ಮುಗ್ಗಟ್ಟು ಹಾಕಲು ಅವಕಾಶವಿಲ್ಲ. ಜಾತ್ರೆಯಲ್ಲಿ(Fair) ಮೈಲಾರ ಗ್ರಾಮಸ್ಥರು(Villagers) ಹಾಗೂ ದೇವಸ್ಥಾನ ಸಮಿತಿಯವರನ್ನು ಬಿಟ್ಟು ಉಳಿದವರಿಗೆ ಅವಕಾಶ ನೀಡಿಲ್ಲ ಅಂತ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್ ತಿಳಿಸಿದ್ದಾರೆ. 
 

Follow Us:
Download App:
  • android
  • ios