Asianet Suvarna News Asianet Suvarna News

ರಾಮನಗರದಲ್ಲೇ ನನ್ನ ಮಣ್ಣಾಗುವುದು: ಎಚ್ಡಿಕೆ

ಕೆಲವರು ನಾವು ಹಾಸನದವರು ಎಂದು ಹೇಳಿ ಟೀಕೆ ಮಾಡುತ್ತಾರೆ. ನನ್ನ ಜೀವ ಹೋದರೆ, ರಾಮನಗರದ ಜಿಲ್ಲೆ ಬಿಡದಿಯ ಕೇತಿಗಾನಹಳ್ಳಿಯಲ್ಲೇ ಮಣ್ಣಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ನೀಡಿದರು.

My  Ending Days will be in Ramnagar   HDK snr
Author
First Published Mar 13, 2023, 6:32 AM IST

 ಹಾರೋಹಳ್ಳಿ : ಕೆಲವರು ನಾವು ಹಾಸನದವರು ಎಂದು ಹೇಳಿ ಟೀಕೆ ಮಾಡುತ್ತಾರೆ. ನನ್ನ ಜೀವ ಹೋದರೆ, ರಾಮನಗರದ ಜಿಲ್ಲೆ ಬಿಡದಿಯ ಕೇತಿಗಾನಹಳ್ಳಿಯಲ್ಲೇ ಮಣ್ಣಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ನೀಡಿದರು.

ಹಾರೋಹಳ್ಳಿ ನೂತನ ತಾಲೂಕು ರಚನೆ ಹಿನ್ನೆಲೆಯಲ್ಲಿ ಸಿದ್ದಾಪುರ ಬಳಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಸಿಎಂ ಸ್ಥಾನಮುಖ್ಯವಲ್ಲ ರಾಮನಗರದ ಜನತೆಯ ನೆಮ್ಮದಿ ಮುಖ್ಯವಾಗಿತ್ತು. ಆದರೂ ಜಿಲ್ಲೆಯ ಮಣ್ಣಿನ ಶಕ್ತಿ ನನ್ನನ್ನು ಎರಡು ಬಾರಿ ಮುಖ್ಯಮಂತ್ರಿಯಾಗುವಂತೆ ಮಾಡಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಸಾಕಷ್ಟುಕೆಲಸ ಮಾಡಿದ್ದೇನೆ. ಹಗಲು ರಾತ್ರಿ ಅವಿರತವಾಗಿ ದುಡಿದ್ದೀನೆ. ರಾಮನಗರ, ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿ ಹೋದರೆ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ನಾನು ಋುಣಿಯಾಗಿದ್ದೇನೆ. ನನಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ಸರ್ಟಿಫಿಕೇಟ್‌ ಬೇಕಿಲ್ಲ. ಜನರ ಸರ್ಟಿಫಿಕೇಟ್‌ ಮುಖ್ಯ ಎಂದರು.

ಮಾಧ್ಯಮದವರು ಜೆಡಿಎಸ್‌ 40 ಸ್ಥಾನ ಗೆಲ್ಲಬಹುದು ಎಂದು ತೋರಿಸುತ್ತಿದ್ದಾರೆ. ಆದರೆ ನಾನು 125 ಸ್ಥಾನಗಳಲ್ಲಿ ಗೆಲ್ಲುಲು ಹೋರಾಡುತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಭಾರಿ ಬಹುಮತದೊಂದಿಗೆ ಮಂಜುನಾಥ್‌ ಅವರನ್ನು ಗೆಲ್ಲಿಸಿದ್ದೀರಿ. ಬಿಜೆಪಿಯವರು 30 ಕೋಟಿ ಆಮಿಷ ಒಡ್ಡಿದರೂ ಮಂಜಣ್ಣ ಅವರ ಆಮಿಷಕ್ಕೆ ಬಲಿಯಾಗಲಿಲ್ಲ ಎಂದರು.

ನನ್ನ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ವಸತಿ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದೇನೆ. ನನ್ನ ಜನತೆ ಕಷ್ಟಪಡಬಾರದೆಂದು ಹಾರೋಹಳ್ಳಿಯನ್ನು ತಾಲೂಕಾಗಿ ಘೋಷಿಸಿದ್ದೆ. ಆದರೆ ನನಗೆ ಹೆಸರು ಬರಬಾರದೆಂಬ ಕಾರಣಕ್ಕೆ ಕೆಲ ವಿರೋಧಿಗಳು ತಡೆಯೊಡ್ಡಿದರು. ಅದರೆ ಇದೆಲ್ಲವನ್ನು ಮೆಟ್ಟಿನಿಂತು ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಮಾಡಿದ್ದೇನೆ. ನಿಮ್ಮ ಹಾರೈಕೆಯೇ ನನ್ನ ದೊಡ್ಡ ಶಕ್ತಿ. ಕನಕಪುರದ ಅಭ್ಯರ್ಥಿ ವಿಚಾರವಾಗಿ 4 ಅಭ್ಯರ್ಥಿಗಳ ಸರ್ವೆ ನಡೆಸಿದ್ದೇನೆ. ಇನ್ನೆರಡು ದಿನದಲ್ಲಿ ಅಂತಿಮವಾಗಲಿದೆ. ಕಬ್ಬಾಳಯ್ಯ, ಬಾಲನರಸಿಂಹಯ್ಯ, ನಾಗರಾಜು, ಶಿವಕುಮಾರ ಹೆಸರು ಪರಿಶೀಲನೆಯಲ್ಲಿದೆ. ನಾನೇ ಕನಕಪುರದ ಅಭ್ಯರ್ಥಿ ಎಂದು ಕನಕಪುರದ ಕಾರ್ಯಕರ್ತರಿಗೆ ಶಕ್ತಿ ತುಂಬಿ ಎಂದು ಮನವಿ ಮಾಡಿದರು.

ಮಂಡ್ಯದಲ್ಲಿ ಎಲ್ಲಾ ಒಂದಾಗಿ ಸೋಲಿಸಿದರು:

ನಿಖಿಲ್‌ ಕುಮಾರಸ್ವಾಮಿಗೆ ಮಂಡ್ಯ ಜನತೆ ಪ್ರೀತಿ ತೋರಿಸಿದರು. ಆದ್ದರಿಂದಲೇ ಅವರನ್ನು ಲೋಕಸಭೆ ಚುನಾವಣೆಗೆ ಮಂಡ್ಯದಿಂದ ನಿಲ್ಲಿಸಲಾಯಿತು. ಆದರೆ ಕಾಂಗ್ರೆಸ್‌, ಬಿಜೆಪಿ, ರೈತ ಸಂಘ ಎಲ್ಲರೂ ಸೇರಿ ನಿಖಿಲ್‌ ಅವರನ್ನು ಸೋಲಿಸಿದರು. ಅಲ್ಲಿ ನಾವು ಸೋತಿಲ್ಲ ನಮ್ಮ ಬೆಳವಣಿಗೆ ಸಹಿಸದೆ ಜನರ ದಿಕ್ಕು ತಪ್ಪಿಸಿ ಸೋಲಿಸಿದರು. ಈ ಬಾರಿ ನಿಖಿಲ್‌ ಹೆದರಬೇಕಾದ ಅವಶ್ಯಕತೆ ಇಲ್ಲ. ರಾಮನಗರ ಜಿಲ್ಲೆಯ ಜನ ಪ್ರೀತಿ ವಿಶ್ವಾಸಕ್ಕೆ ತಲೆ ಬಾಗುತ್ತೀರಿ. ಇದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ರಾಜ್ಯದ ಎಲ್ಲ ಕಡೆ ಒತ್ತಡ ಇದೆ. ನಿಖಿಲ್‌ ಅವರನ್ನು ಕಳುಹಿಸಿ ಎಂದು ಕೇಳುತ್ತಿದ್ದಾರೆ. ಬೇರೆಡೆ ನಿಖಿಲ್‌ ಪ್ರಚಾರದ ಅವಶ್ಯಕತೆಯಿದೆ ಎಂದರು.

ನಿಮ್ಮ ಮಡಿಲಿಗೆ ಮಗನ ಹಾಕುವೆ:

ನಿಮ್ಮ ಮಡಿಲಿಗೆ ನನ್ನ ಮಗನನ್ನು ಹಾಕಿದ್ದೇನೆ. ನಮ್ಮ ಕುಟುಂಬದ ಬಳ್ಳಿ ಕಾಪಾಡುವವರು ನೀವೇ. ನಿಖಿಲ್‌ಗೆ ದೇವೇಗೌಡರ ಹಾದಿಯಲ್ಲಿ ನಡೆದು, ಹೃದಯದಿಂದ ಕೆಲಸ ಮಾಡಲು ಸಲಹೆ ನೀಡಿದ್ದೇನೆ. ಅವನ ರಾಜಕೀಯ ಜೀವನ ನಿಮ್ಮ ಕೈಯಲ್ಲಿದೆ ಎಂದರು.

ಸಾಯೋವರೆಗೂ ಇಲ್ಲೆ ಇರ್ತೀನಿ:

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ನಾನು ನವ ರಾಮನಗರ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟಿದ್ದೇದ್ದು, ನನ್ನ ತಾತ, ತಂದೆ, ತಾಯಿಗೆ ಸಹಕಾರ ನೀಡಿದ ರೀತಿ ನನಗೂ ಸಹಕಾರ ನೀಡಿ. ನಾನು ಸಾಯುವವರೆಗೂ ಈ ಕ್ಷೇತ್ರ ಬಿಟ್ಟು ಹೋಗಲ್ಲ. ಕೆಂಗಲ್‌ ಹನುಮಂತಯ್ಯ, ದೇವೇಗೌಡ, ಕುಮಾರಣ್ಣ ಸೇರಿದಂತೆ 3 ಮುಖ್ಯಮಂತ್ರಿ ನೀಡಿದ ಮಣ್ಣಿದು. ಎರಡು ಬಾರಿ ಸಿಎಂ ಆದ ಕುಮಾರಸ್ವಾಮಿ, ರಾಜ್ಯ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟುಕೊಡುಗೆ ನೀಡಿದ್ದಾರೆ. 2007ರಲ್ಲಿ ರಾಮನಗರ ಜಿಲ್ಲೆಯಾಗಿ ಘೋಷಣೆ ಮಾಡಿ, ಸಣ್ಣಪುಟ್ಟಕೆಲಸಗಳಿಗೂ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿದರು. ವಿರೋಧ ಪಕ್ಷದವರು ಲಘುವಾಗಿ ಚರ್ಚಿಸುತ್ತಾರೆ. ಆದರೆ, ನಾನೆಂದೂ ಯಾರ ವಿರುದ್ಧವೂ ಹಗುರವಾಗಿ ಮಾತನಾಡಿಲ್ಲ ಎಂದರು. ಶಾಸಕರಾದ ಅನಿತಾ ಕುಮಾರಸ್ವಾಮಿ, ಶಾಸಕ ಎ.ಮಂಜುನಾಥ್‌ ಹಾಜರಿದ್ದರು. ಅಭಿನಂದನಾ ಸಮಾರಂಭದ ಅಂಗವಾಗಿ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.

Follow Us:
Download App:
  • android
  • ios