ಮಂಗಳೂರು(ಜ.25): ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ 34,562 ದೇವಾಲಯಗಳ ಕೋಟ್ಯಂತರ ರು. ಬೆಲೆಬಾಳುವ ಚರ- ಸ್ಥಿರ ಆಸ್ತಿ, ಅತ್ಯಮೂಲ್ಯ ದಾಖಲೆಗಳ ರಕ್ಷಣೆ ಹಾಗೂ ಪಾರದರ್ಶಕ ನಿರ್ವಹಣೆ ದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇ- ಆಫೀಸ್‌ ವ್ಯವಸ್ಥೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಯ ದೈನಂದಿನ ಕಾರ್ಯಚಟುವಟಿಕೆಗಳು ಸುಗಮವಾಗಿ ನಿರ್ವಹಿಸಲು ಇ- ಆಫೀಸ್‌, ವೆಬ್‌ಬೇಸ್ಡ್‌ ಅಪ್ಲಿಕೇಷನ್‌/ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಲು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಕೊನೆಗೂ ಸಂಚಾರಕ್ಕೆ ಸಿದ್ಧವಾಯ್ತು ಪಂಪ್‌ವೆಲ್‌ ಮೇಲ್ಸೇತುವೆ!

ಕೆಲವು ಕಡೆ ದಾಖಲೆಗಳಲ್ಲಿ ಇರುವ ದೇವಾಲಯಗಳ ಆಸ್ತಿ ವಿವರ ಹಾಗೂ ವಾಸ್ತವ ಸಂಗತಿ ಭಿನ್ನವಾಗಿದ್ದು, ಈ ಸಮಸ್ಯೆಗೆ ಹೊಸ ವ್ಯವಸ್ಥೆಯಿಂದ ಪರಿಹಾರ ದೊರೆಯಲಿದೆ ಎಂದಿದ್ದಾರೆ. ಇದ ಜೊತೆಗೆ ಇ-ಹುಂಡಿ ಯೋಜನೆಯೂ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಯುತ್ತಿದೆ. ಇದಕ್ಕಾಗಿ ಇಲಾಖೆ ಅಧಿಕಾರಿಗಳು ಚೆನ್ನೈಗೆ ತೆರಳಿ ಅಲ್ಲಿರುವ ಇ ಹುಂಡಿಯನ್ನು ನೋಡಿಕೊಂಡು ಬಂದಿದ್ದಾರೆ. ರಾಜ್ಯದಲ್ಲೇ ಅತ್ಯಂತ ಸುಧಾರಿತ ಮಾದರಿಯ ಇ-ಹುಂಡಿ ಇಳವಡಿಸಲು ಉದ್ದೇಶಿಸಲಾಗಿದೆ ಎಂದರು.

ಸಂಸ್ಕೃತ ವೇದ, ಆಗಮ ಶಿಕ್ಷಣ:

ಆರ್ಥಿಕವಾಗಿ ಸಬಲವಾಗಿರುವ ಮತ್ತು ಸ್ಥಳಾವಕಾಶವಿರುವ ದೇವಾಲಯಗಳಲ್ಲಿ ಸಂಸ್ಕೃತ ಮತ್ತು ಆಗಮ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆಗಮ ಶಿಕ್ಷಣವನ್ನು ಐದು ವರ್ಷ ಕಾಲಾವಧಿ ಮಿತಗೊಳಿಸುವ ಮತ್ತು ಒಂದು ವರ್ಷದ ವಿಶೇಷ ಕೋರ್ಸ್‌ಗಳನ್ನು ತೆರೆಯಲು ಒಂದು ಸಮಿತಿ ರಚಿಸಲಾಗಿದೆ. ಇಲಾಖೆ ವ್ಯಾಪ್ತಿಗೆ ಒಳಪಡುವ ‘ಸಿ’ ದರ್ಜೆಯ ಅಧಿಸೂಚಿತ ಸಂಸ್ಥೆಗಳ ಅರ್ಚಕರಿಗೆ ವೇದ ಮತ್ತು ಆಗಮ ಶಾಸ್ತ್ರಗಳ ಶಿಕ್ಷಣವನ್ನು ಇಲಾಖೆಯಿಂದ ಒದಗಿಸುವುದು ಯೋಜನೆಯ ಉದ್ದೇಶ ಎಂದರು.

ಯೋಜನೆ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಧಾರ್ಮಿಕ ಪರಿಷತ್ತು ವೇದ ವಿದ್ವಾಂಸ ಎಸ್‌.ಗೋವಿಂದ ಭಟ್‌, ವಿದ್ವಾಂಸರಾದ ಕೆ. ಸೂರ್ಯನಾರಾಯಣ ಭಟ್‌, ಡಾ.ಮಹರ್ಷಿ ಆನಂದ ಗುರೂಜಿ, ಇಲಾಖೆಯ ಆಯುಕ್ತರ ಕಚೇರಿಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ ಕುಮಾರ್‌ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.

28 ದೇವಾಲಯಗಳಿಗೆ ಸಮಿತಿ:

ವ್ಯವಸ್ಥಾಪನಾ ಸಮಿತಿ ಅವಧಿ ಪೂರ್ಣಗೊಂಡ 28 ದೇವಾಲಯಗಳಿಗೆ ಹೊಸ ಸಮಿತಿ ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲು ಮಾಧ್ಯಮ ಪ್ರಕಟಣೆ ನೀಡಲು ತೀರ್ಮಾನಿಸಲಾಗಿದೆ. ‘ಎ’ ಪ್ರವರ್ಗದ ಅಧಿಸೂಚಿತ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಗಳ ಅವಧಿಯು 2020 ನೇ ಸಾಲಿನ ಮಾಚ್‌ರ್‍ ತಿಂಗಳು ಮುಕ್ತಾಯಗೊಳ್ಳಲಿದೆ ಎಂದರು.

ಸರಳ ವಿವಾಹಕ್ಕೆ ಪ್ರೋತ್ಸಾಹ

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಇಲಾಖೆಯ ಪ್ರೋತ್ಸಾಹಧನ, ಕೊಡುಗೆಗಳ ಜೊತೆಗೆ ನಡೆಸಲು ಉದ್ದೇಶಿಸಿರುವ ಸರಳ ವಿವಾಹವನ್ನು ಪ್ರೋತ್ಸಾಹಿಸುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಂತಹ ಸಾಮೂಹಿಕ ವಿವಾಹಗಳಲ್ಲಿ ಬಡವರ ಜೊತೆ, ಸರಳ ರೀತಿ ಮದುವೆಯಾಗಲು ಬಯಸುವ ಶ್ರೀಮಂತರು ಕೂಡ ವಿವಾಹವಾಗುವ ಮೂಲಕ ಮಾದರಿಯಾಗಬೇಕು. ಯೋಜನೆ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರ ಜೊತೆಗೂ ಚರ್ಚಿಸಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ದೇವಾಲಯಗಳ ದತ್ತು

ದ.ಕ. ಜಿಲ್ಲೆಯಲ್ಲಿ ಎ ದರ್ಜೆಯ ದೇವಸ್ಥಾನದಿಂದ ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿಗೆ ದತ್ತು ಸ್ವೀಕರಿಸುವ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪುತ್ತೂರಿನ ಶಿರಾಡಿ ಅಮ್ಮಾಜೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಬೆಳ್ತಂಗಡಿಯ ತೋಟತ್ತಾಡಿ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ತಾನವನ್ನು ದತ್ತು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ದತ್ತು ತೆಗೆದುಕೊಂಡ ದೇವಸ್ಥಾನಗಳ ಅಭಿವೃದ್ಧಿಗೆ ಹಣ ಬಿಡುಗಡೆಗೆ ಮಿತಿ ಇರಲಿಲ್ಲ. ಈಗ ತಲಾ 50 ಲಕ್ಷ ರು. ಮಂಜೂರುಗೊಳಿಸಲು ಅವಕಾಶವಿದೆ ಎಂದರು.

ಬಾರ್‌ಗಳ ನಾಮಫಲಕದಿಂದ ದೇವರ ಹೆಸರು ಕೈಬಿಡಿ

ಬಾರ್‌ ಹಾಗೂ ಮದ್ಯದಂಗಡಿಗಳ ನಾಮಫಲಕದಲ್ಲಿ ದೇವರ ಹೆಸರು ಹಾಕಿದ್ದರೆ, ಅದನ್ನು ಸ್ವಯಂಪ್ರೇರಿತವಾಗಿ ಅಳಿಸಿಹಾಕುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿನಂತಿಸಿದರು.

ಈ ಕುರಿತಂತೆ ವಿಸೃತ ವರದಿ ಮಂಡಿಸುವಂತೆ ಅಬಕಾರಿ ಹಾಗೂ ಕಾನೂನು ಇಲಾಖೆಗೆ ಸೂಚನೆ ನೀಡಲಾಗಿದೆ. ಆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

  • ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಆದ್ದರಿಂದ ಯಾರು ಸಚಿವರು ಆಗಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ.
  • ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ, ಬಂದರು, ಮೀನುಗಾರಿಕೆ ಸಚಿವ.
  • ಮೌಢ್ಯ ನಿಷೇಧ ಜಾರಿ ಕಾಯ್ದೆ ಜಾರಿಗೊಳಿಸಿದ ಕಾರಣ ಇನ್ನು ಧಾರ್ಮಿಕತೆ ಹೆಸರಿನಲ್ಲಿ ಮೋಸಕ್ಕೆ ಅವಕಾಶ ಇಲ್ಲ. ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಿರುವುದಕ್ಕೆ ಬಿಜೆಪಿ ವಿರೋಧಿಸಿತ್ತು. ಬಳಿಕ ಅಂತಹ ಅಂಶಗಳನ್ನು ತೆಗೆದುಹಾಕಿ ಪ್ರಸ್ತಾವನೆ ಸಲ್ಲಿಸಿರುವುದರಿಂದ ಈಗ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗಿದೆ.
  • ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ