ಹುಬ್ಬಳ್ಳಿ(ಜ.25): ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ವತಿಯಿಂದ ನಗರದ ಹಳೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. 

ಧರ್ಮಗುರು ಮಕಮುಲ್ಲ ಮೌಲಾನಾ ನೇತೃತ್ವದಲ್ಲಿ ಅಲ್ಲಾಹುವಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸುವ ಮನಸ್ಸು ಕೇಂದ್ರ ಸರ್ಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿದರು.ಇಲ್ಲಿ ಎಲ್ಲರೂ ಸಮಾನತೆಯಿಂದ ಜೀವಿಸುತ್ತಿದ್ದೇವೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸ್ಥೆ ಅಧ್ಯಕ್ಷ ಯೂಸೂಫ್ ಸವಣೂರು, ದೇಶದಲ್ಲಿ ಎಲ್ಲ ಧರ್ಮಿಯರು ಒಗ್ಗಟ್ಟಾಗಿ ಬಾಳುತ್ತಿದ್ದೇವೆ. ಪೌರತ್ವ ಕಾಯ್ದೆಯಿಂದ ದೇಶ ಇಬ್ಭಾಗ ಮಾಡಲು ಹೊರಟಿರುವುದು ಖಂಡನೀಯ. ಕೇಂದ್ರ ಸರ್ಕಾರ ಕಾಯ್ದೆ ಕೈ ಬಿಡಬೇಕು ಎಂದು ಹೇಳಿದರು. ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು ಮಾತನಾಡಿ, ಮುಸ್ಲಿಂ ಸಮುದಾಯವನ್ನು ಮಾತ್ರ ಹೊರಗಿಟ್ಟು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ದೇಶಾದ್ಯಂತ ಮುಸ್ಲಿಂ ಸಮುದಾಯದವರು ಆತಂಕದಲ್ಲಿದ್ದಾರೆ. ಸಮಾನತೆ ಸಾರಬೇಕಾದ ರಾಷ್ಟ್ರದಲ್ಲಿ ಒಡೆದಾಳುವ ನೀತಿ ಜಾರಿಯಾಗುತ್ತಿದೆ. ಭೀತಿ ಹುಟ್ಟಿಸಿರುವ ಕಾಯ್ದೆ ರದ್ದು ಪಡಿಸುವ ಮನಸ್ಸು ಅಲ್ಲಾಹು ಕೇಂದ್ರ ಸರ್ಕಾರಕ್ಕೆ ನೀಡಲಿ ಎಂದು ನಾವು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು. 

ಧರ್ಮಗುರು ಮೌಲಾನಾ ಮಸ್ತಾಕ್ ನಜ್ಮಿ, ಮುಖಂಡರಾದ ಎ.ಎಂ. ಹಿಂಡಸಗೇರಿ, ಅಲ್ತಾಫ್ ಹಳ್ಳೂರು, ಬಶೀರ್ ಅಹ್ಮದ್ ಗುಡಮಾಲೆ, ಬಶೀರ್ ಹಳ್ಳೂರು, ದದಾ ಹಮಿತ್ ಖೈರಾತಿ ಸೇರಿದಂತೆ ಮತ್ತಿತರರು ಇದ್ದರು.