Asianet Suvarna News Asianet Suvarna News

'ಬಸವಣ್ಣನವರೇ ನಮ್ಮ ನಾಯಕರು ಎಂದು ಒಪ್ಪಿಕೊಂಡ್ರೆ ಗುದ್ದಾಟವೇ ಇರಲ್ಲ’

ಅಸಂಖ್ಯ ಪ್ರಮಥರ ಗಣಮೇಳ ಯಶಸ್ವಿಯಾಗಿ ಪೂರೈಸಿದ್ದಕ್ಕೆ ಮುರುಘಾಶ್ರೀಗಳಿಗೆ ಸನ್ಮಾನ| ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ| ಲಿಂಗಾಯತ ಆಗುವುದು ಸುಲಭ| ಬಸವಾಯತ ಆಗುವುದು ಸವಾಲಿನ ಕೆಲಸ|

Murugharajendra Shri Talks Over Lord Basavanna
Author
Bengaluru, First Published Feb 27, 2020, 10:23 AM IST

ಬೆಂಗಳೂರು(ಫೆ.27): ಎಲ್ಲ ಮಠಾಧೀಶರು ಬಸವಣ್ಣನವರೇ ನಮ್ಮ ನಾಯಕರು ಎಂದು ಒಪ್ಪಿಕೊಂಡಲ್ಲಿ ಗುರು-ಜಗದ್ಗುರುಗಳಲ್ಲಿ ನಡುವೆ ಯಾವುದೇ ಗುದ್ದಾಟ ಇರುವುದಿಲ್ಲ ಎಂದು ಚಿತ್ರದುರ್ಗ ಬೃಹನ್ಮಠ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದಲ್ಲಿನ ಎಲ್ಲ ಧಾರ್ಮಿಕ ಗುರುಗಳು ಸೇರಿಕೊಂಡು, ಒಬ್ಬ ಗುರುವನ್ನು ಯಾಕೆ ಆಯ್ಕೆ ಮಾಡಿಕೊಳ್ಳಬಾರದು ಎಂಬುದು ಹಲವು ರಾಜಕೀಯ ಮುಖಂಡರ ಪ್ರಶ್ನೆ ಮಾಡುತ್ತಾರೆ. ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇದೇ ಪ್ರಶ್ನೆಯನ್ನು ನನ್ನ ಮುಂದಿಟ್ಟರು. ಆಗ ನಾನು ಬಸವಣ್ಣನೇ ನಮ್ಮೆಲ್ಲರ ನಾಯಕ ಎಂದು ಪ್ರತಿಕ್ರಿಯಿಸಿದೆ. ಉಳಿದೆಲ್ಲ ಗುರುಗಳು, ಜಗದ್ಗುರುಗಳ ಇದನ್ನು ಒಪ್ಪಿಕೊಂಡುಬಿಟ್ಟರೆ ಯಾವ ಗುದ್ದಾಟ ಇರುವುದಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲಿಂಗಾಯತ ಆಗುವುದು ಸುಲಭ. ಆದರೆ, ಬಸವಾಯತ ಆಗುವುದು ಸವಾಲಿನ ಕೆಲಸ. ಎಷ್ಟೋ ಜನ ಕೊರಳಲ್ಲಿ ಲಿಂಗ ಕಟ್ಟಿಕೊಂಡಿರುತ್ತಾರೆ. ಆದರೆ, ಬಸವಣ್ಣನನ್ನು ಮರೆತಿರುತ್ತಾರೆ. ಇದು ಪರಿಪೂರ್ಣ ಆಗದು. ಲಿಂಗದೊಂದಿಗೆ ಬಸವಣ್ಣನವರನ್ನೂ ಕಟ್ಟಿಕೊಳ್ಳುವ ಕೆಲಸ ಆಗಬೇಕು. ಅಂದರೆ, ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ ಎಂದರು.

ಬಿಜೆಪಿ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿ, ಪ್ರಮಥರ ಗಣಮೇಳದ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಮುಖಂಡರನ್ನು ಒಗ್ಗೂಡಿಸುವ ಮೂಲಕ ಮುರುಘಾ ಶರಣರು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಣಮೇಳದ ಅವಶ್ಯಕತೆ ಇತ್ತು. ಒಂದು ಕುಟುಂಬ ಎಂದಾಕ್ಷಣ ಅದರಲ್ಲಿ, ಹಲವಾರು ಭಿನ್ನರಾಗಗಳು, ಸಮಸ್ಯೆಗಳು ಇರುವುದು ಸಹಜ. ಅದೆಲ್ಲವೂ ತೊಡೆದುಹಾಕುವ ಪ್ರಯತ್ನ ಮೇಳದಿಂದಾಗಿದೆ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 
ವಿಧಾನ ಪರಿಷತ್‌ ಮಾಜಿ ಸದಸ್ಯ ಇ.ಕೃಷ್ಣಪ್ಪ, ಸಮತಾ ಸೈನಿಕ ದಳದ ಅಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ, ಲೇಖಕ ಮುಕುಂದರಾಜ್‌, ಲಂಡನ್‌ ಮಾಜಿ ಮೇಯರ್‌ ನೀರಜ್‌ ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios