Asianet Suvarna News Asianet Suvarna News

ಧಾರವಾಡ: ಸಂಭ್ರಮದ ಮುರುಘಾಮಠ ರಥೋತ್ಸವ, ಸಾವಿರಾರು ಭಕ್ತರು ಭಾಗಿ

ಸಂಭ್ರಮದ ಮುರುಘಾಮಠದ ರಥೋತ್ಸವ ಪಥದ ಉದ್ದಕ್ಕೂ ಹರ ಹರ ಮಹದೇವ ಜೈಕಾರ |  ವಿವಿಧ ಕಲಾತಂಡಗಳು ಭಾಗಿ| ಶ್ರೀಮಠದ ಹಿಂಬದಿ ಆವರಣದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಅನ್ನ ಸಂತರ್ಪಣೆ|

Murughamatha Fair Held at Dharwad
Author
Bengaluru, First Published Jan 31, 2020, 7:41 AM IST
  • Facebook
  • Twitter
  • Whatsapp

ಧಾರವಾಡ[ಜ.31]: ನಗರದ ಮುರುಘಾಮಠದಲ್ಲಿ ಮದಥಣಿ ಮುರುಘೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಅತ್ಯಂತ ವೈಭವದಿಂದ ಜರುಗಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರ ಹರ್ಷೋದ್ಗಾರ, ಜೈಕಾರದ ನಡುವೆ ಅಲಂಕೃತ ರಥವನ್ನು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹಾಗೂ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಎಳೆದು ಚಾಲನೆ ನೀಡಿದರು. 

ಮಠದಿಂದ ಆರಂಭವಾದ ರಥೋತ್ಸವವನ್ನು ಮದಿಹಾಳ ಕ್ರಾಸ್‌ದಲ್ಲಿರುವ ಶಾಖಾ ಮೂರು ಸಾವಿರ ಮಠದವರೆಗೆ ಸಾವಿರಾರು ಜನರು ಎಳೆದರು. ಡೊಳ್ಳು, ಭಜನೆ, ಝಾಂಜ್ ಮೇಳ, ಬ್ಯಾಂಡ್‌ಸೆಟ್ ವಿವಿಧ ವಾದ್ಯ ಮೇಳಗಳು ರಥೋತ್ಸವಕ್ಕೆ ಮೆರುಗು ತಂದವು. ಕಳೆದ ಒಂದು ವಾರದಿಂದ ಆರಂಭಗೊಂಡಿದ್ದ ಮುರುಘಾಮಠದ ಜಾತ್ರಾ ಮಹೋತ್ಸವಕ್ಕೆ ಗುರುವಾರ ರಥೋತ್ಸವದ ಮೂಲಕ ತೆರೆ ಬಿತ್ತು. ಪ್ರವಾಹೋಪಾದಿಯಲ್ಲಿ ಬಂದಿದ್ದ ಭಕ್ತರು ರಥದತ್ತ ನಿಂಬೆಹಣ್ಣು, ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಮನದ ಹರಕೆಯನ್ನು ಈಡೇರಿಸುವಂತೆ ಹರ... ಹರ... ಮಹಾದೇವ... ಎಂದು ಘೋಷಣೆ ಕೂಗುತ್ತಾ ರಥಕ್ಕೆ ಕಟ್ಟಿದ ಹಗ್ಗವನ್ನು ಎಳೆದಿದ್ದು ವಿಶೇಷವಾಗಿತ್ತು. 

ಮಠದ ಆವರಣದಿಂದ ಸಂಜೆ ವೇಳೆಗೆ ಆರಂಭಗೊಂಡ ಮೆರವಣಿಗೆ ಬಸ್ ಡಿಪೊ ಸರ್ಕಲ್ ವರೆಗೆ ತೆರಳಿ ನಂತರ ಮರಳಿ ಮಠದ ಆವರಣಕ್ಕೆ ಬಂದಿತು. ರಸ್ತೆ ಪಕ್ಕದ ಮನೆಗಳ ಮಹಡಿಗಳಿಂದಲೇ ಕೆಲವರು ಉತ್ತತ್ತಿ ತೂರಿದರು. ರಥದ ಹತ್ತಿರ ಬಿದ್ದ ನಿಂಬೆಹಣ್ಣು ಹಾಗೂ ಉತ್ತತ್ತಿ ಆಯ್ದುಕೊಳ್ಳಲು ಯತ್ನಿಸುತ್ತಿದ್ದ ಹುಡುಗರನ್ನು ತಡೆಯಲು ಪೊಲೀಸರು ಶ್ರಮಿಸಬೇಕಾಯಿತು. ಪೊಲೀಸರೊಂದಿಗೆ ಮಠದ ಕೆಲ ಭಕ್ತರೂ ಸಹ ರಥಗಳ ಗಾಲಿಯ ಹತ್ತಿರ ಜನರು ಬರದಂತೆ ತಡೆಯುವ ಕಾರ್ಯದಲ್ಲಿ ನಿರತರಾಗಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಾನಪದ ಮೇಳ, ವೀರಗಾಸೆ, ನಂದಿಕೋಲು ಕುಣಿತ ಪ್ರದರ್ಶನ ನಡೆಯಿತು. ಹಲವಾರು ಭಜನಾ ಮಂಡ ಳಿಗಳ ವತಿಯಿಂದ ಭಜನಾ ಪ್ರದರ್ಶನ ಜರುಗಿತು. ಮುಂಜಾಗೃತವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ ರಥೋತ್ಸವ ಜರುಗುವ ಹಿನ್ನಲೆಯಲ್ಲಿ ಆ ಭಾಗದಲ್ಲಿ ಸಂಚರಿಸಬೇಕಿದ್ದ ವಾಹನ ಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಅಲ್ಲದೇ ಬೆಳಗ್ಗೆ ಬನ್ನಿಕೊಪ್ಪ ಹಿರೇಮಠ ಡಾ. ಸುಜ್ಞಾನದೇವ ಶಿವಾಚಾರ್ಯರಿಂದ 250 ಭಕ್ತರಿಗೆ ಲಿಂಗದೀಕ್ಷೆ ಕಾರ್ಯಕ್ರಮ ನೆರವೇರಿತು. ವಿರಕ್ತಮಠ ಲಿಂಗನಾಯಕನಹಳ್ಳಿ ಚನ್ನವೀರ ಶ್ರೀಗಳ ಹಾಗೂ ಸೊಲ್ಲಾಪುರ ಸ್ವಾಮಿನಾಥ ಶ್ರೀಗಳ ಸಾನ್ನಿಧ್ಯದಲ್ಲಿ, ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು, ಕಲ್ಮಠದ ಅಭಿನವಪ್ರಭು ಶ್ರೀಗಳು, ನದಿಇಂಗಳಗಾಂವ ಸಿದ್ಧಲಿಂಗ ಶ್ರೀಗಳ ಸಮ್ಮುಖದಲ್ಲಿ ಲಿಂಗದೀಕ್ಷೆ ನಡೆಯಿತು. 

ಧಾರವಾಡ ಮತ್ತು ಸವದತ್ತಿ ತಾಲೂಕಿನ ಹಳ್ಳಿಗರು ಟ್ರ್ಯಾಕ್ಟರ್‌ಗಳಿಗೆ ಕೊಲ್ಲಾರಿ ಕಟ್ಟಿಕೊಂಡು ಬಂದಿದ್ದು ವಿಶೇಷವಾಗಿತ್ತು. ಶ್ರೀಮಠದ ಹಿಂಬದಿ ಆವರಣದಲ್ಲಿ ಬೆಳಗ್ಗೆಯಿಂದ ರಾತ್ರಿಯ ವರೆಗೂ ಅನ್ನ ಸಂತರ್ಪಣೆ ನೆರವೇರಿತು. ರಥೋತ್ಸವದಲ್ಲಿ ಕಲ್ಮಠ ಮಹಾಂತ ಶ್ರೀಗಳು, ಶಿರಾಳಕೊಪ್ಪದ ವಿರಕ್ತಮಠ ಸಿದ್ದೇಶ್ವರ ಶ್ರೀಗಳು, ಹೊಸರಿತ್ತಿ ಗುದ್ದೀಶ್ವರ ಶ್ರೀಗಳು, ಉಗರಗೋಳ ಮಹಾಂತ ಶ್ರೀಗಳು, ಅಥಣಿ ಮರುಳಸಿದ್ಧ ಮಹಾಸ್ವಾಮಿ, ಬಟಕುರ್ಕಿ ಬಸವಲಿಂಗ ಶ್ರೀಗಳು, ಶಿಗ್ಗಾಂವಿ ಸಂಗನಬಸವ ಶ್ರೀಗಳು, ಹಾವೇರಿ ಬಸವಶಾಂತಲಿಂಗ ಶ್ರೀಗಳು ಇದ್ದರು.

ದರಿದ್ರರನ್ನು ಸಿರಿವಂತಗೊಳಿಸುವ ಶಕ್ತಿ ಭಾರತೀಯ ಪರಂಪರೆಗಿದೆ

ದರಿದ್ರರನ್ನು ಶ್ರೀಮಂತರನ್ನಾಗಿ, ದಡ್ಡರನ್ನು ದೊಡ್ಡ ವರನ್ನಾಗಿ, ಭಿಕ್ಷುಕರನ್ನು ಲಕ್ಷಾಧಿಪತಿಯನ್ನಾಗಿ ಬೆಳೆಸುವ ಶಕ್ತಿ ಭಾರತೀಯ ಪರಂಪರೆಯಲ್ಲಿ ಬೆಳದಿದೆ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಇಲ್ಲಿನ ಪ್ರತಿಷ್ಟಿತ ಮುರುಘಾಮಠದಲ್ಲಿ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಮೃತ್ಯುಂಜಯ- ಮಹಾಂತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಯಕ ಶಕ್ತಿಯೊಂದಿದ್ದರೆ ಸಾಕು ಎಂತಹವರನ್ನು ಸಹ ಸಮೃದ್ಧಿಯ ಕಡೆಗೆ ಒಯ್ಯಬಹುದು. ಮನುಷ್ಯನ ಬದುಕಿಗೆ ಕಾಯಕ ಅಗತ್ಯ. ಕಾಯದಿಂದ ಮಾತ್ರ ಬದುಕಿನಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು. ದೇಹಕ್ಕೆ ಕಾಯಿಲೆ ಬರದಂತೆ ಕಾಪಾಡುವುದೇ ಕಾಯಕ. ಕಾಯಕ ಸಿದ್ದಾಂತದಲ್ಲಿ ದಾಸೋಹ ಸಿದ್ದಾಂತ ಇದೆ. ಇವುಗಳ ನಡುವೆ ಇರುವುದೇ ಶರಣ, ಶ್ರೀಮಂತ ಸಂಸ್ಕೃತಿ. ಕಾಯಕ ಸಂಸ್ಕೃತಿ ಇದ್ದರೆ ಬೇಡುವ ಬದಲಾಗಿ ನೀಡುವ ಸಂಸ್ಕೃತಿ ಬರುತ್ತದೆ. ಬೆಳಗ್ಗೆಯಿಂದ ಸಂಜೆಯ ವರೆಗೆ ಪೂಜೆ ಮಾಡುತ್ತಾ ಕುಳಿತರೆ ಕಾಯಿಲೆಗೆ ಎಡೆಮಾಡಿ ಕೊಟ್ಟಂತೆ. ಬದಲಾಗಿ ಕಾಯಕ ಮಾಡಿ ಬದುಕಿನ ಪ್ರಕಾಶ ಬೆಳಗಿಸಿಕೊಳ್ಳಬೇಕು ಎಂದರು. 

ಮೃತ್ಯುಂಜಯ- ಮಹಾಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಆರ್‌ಎಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ, ಮೃತ್ಯುಂಜಯ ಶ್ರೀಗಳು ಮಠದಲ್ಲಿನ ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಒಂದೇ ಬಾರಿಗೆ 101 ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಮುರುಘಾಮಠ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡಿದೆ. ಪೋಷಕರು ಮಕ್ಕಳಿಗೆ ಕಾಯಕದ ಅರಿವು ಮೂಡಿಸಬೇಕು. ಪ್ರತಿಯೊಬ್ಬರಲ್ಲಿ ಸಾಧನೆಯ ಹಂಬಲ ಇರಬೇಕು. ಈ ವೇಳೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಅವುಗಳಿಗೆ ಗಮನ ಹರಿಸದೇ ಗುರಿ ತಲುಪಬೇಕು ಎಂದರು. 

ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಮುರುಘಾಮಠದ ಇತಿಹಾಸ ನಾಡಿಗೆ ಮಾದರಿ ಯಾಗಿದೆ. ಮೃತ್ಯುಂಜಯ ಹಾಗೂ ಮಹಾಂತಪ್ಪಗಳ ಸೇವೆ ಸ್ಮರಣೀಯ ಎಂದರು. 

Follow Us:
Download App:
  • android
  • ios