ಬೆಂಗಳೂರು [ಸೆ.02]:  ತನ್ನ ಹಾಗೂ ಕುಟುಂಬದ ಹತ್ಯೆಗೆ ಒಳ ಸಂಚು ನಡೆದಿದ್ದು, ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿಡಿಎ ಸಹಾಯಕ ಕಮಿಷನರ್‌ ಠಾಣೆಗೆ ದೂರು ನೀಡಿದ್ದಾರೆ.

ಬಿಡಿಎ ಸಹಾಯಕ ಕಮಿಷನರ್‌ ಡಾ.ಬಿ.ಸುಧಾ ಅವರು ನೀಡಿದ ದೂರಿನ ಮೇರೆಗೆ ಸಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮತ್ತು ಪ್ರವೀಣ್‌ ಗಡಿಯಾರ್‌ ಎಂಬುವವರ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮೊದಲಿಗೆ ಎನ್‌ಸಿಆರ್‌ (ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದ ಕೊಡಿಗೇಹಳ್ಳಿ ಪೊಲೀಸರು ನ್ಯಾಯಾಲಯದ ನಿದೇರ್ಶನದ ಬಳಿಕ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿತರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಡಿಎ ಸಹಾಯಕ ಕಮಿಷನರ್‌ ಆಗಿರುವ ಸುಧಾ ಅವರು ಕುಟುಂಬ ಸಮೇತ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ. ಪ್ರವೀಣ್‌ ಗಡಿಯಾರ್‌ ಎಂಬುವವನು ತಮ್ಮ ಮತ್ತು ಕುಟುಂಬದವರನ್ನು ಹತ್ಯೆ ಮಾಡಲು ಒಳಸಂಚು ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಆ.3ರಂದು ನನ್ನ ಪತಿ ಸ್ಟ್ರೋಯ್ನಿ  ಜೋಸೆಫ್‌ ಫಾಯ್ಸ್ ಅವರಿಗೆ ಪರಿಚಿತ ಅಜಿತ್‌ ಶೆಟ್ಟಿಅವರು ಕರೆ ಮಾಡಿ, ನಿಮ್ಮ ಕುಟುಂಬದ ಕೊಲೆಗೆ ಸುಪಾರಿ ಕೊಲೆ ಸಂಚು ನಡೆಯುತ್ತಿದೆ. ಪ್ರವೀಣ್‌ ಗಡಿಯಾರ್‌ ಮತ್ತು ಟಿ.ಜೆ.ಅಬ್ರಾಹಂ ಎಂಬುವವರು ಸುಪಾರಿ ನೀಡಿದ್ದಾರೆ ಎಂದು ತಿಳಿಸಿದ್ದರು.

ಅಂದೇ ಪತಿಯನ್ನು ಭೇಟಿಯಾದ ಅಜಿತ್‌ ಶೆಟ್ಟಿಅವರು, ಗಡಿಯಾರ್‌ ಮತ್ತು ಟಿ.ಜೆ.ಅಬ್ರಹಾಂ ಅವರು ತಮ್ಮ ಕುಟುಂಬದ ವಿರುದ್ಧ ನಡೆಸುತ್ತಿರುವ ಕುತಂತ್ರಗಳಿಗೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋ ನೀಡಿದ್ದರು. ಆ.27ರಂದು ಬೆಳಗ್ಗೆ ಸುಮಾರು 9.45ರ ಸುಮಾರಿಗೆ ನಾನು ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕೊಡಿಗೇಹಳ್ಳಿ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಇಬ್ಬರು ಅಪರಿಚಿತರು ಒಂದು ಪಲ್ಸರ್‌ ಬೈಕ್‌ನಲ್ಲಿ ನನ್ನ ಕಾರನ್ನು ಹಿಂಬಾಲಿಸಿಕೊಂಡು ಬಂದರು. ನನ್ನ ವಾಹನದ ಪಕ್ಕದಲ್ಲಿಯೇ ಬಂದ ದುಷ್ಕರ್ಮಿಗಳು ನನ್ನನ್ನು ದುರುಗುಟ್ಟಿನೋಡಿದರು. 

ದುಷ್ಕರ್ಮಿಗಳಿಬ್ಬರು ಹೆಲ್ಮೆಟ್‌ ಧರಿಸಿದ್ದು, ಕೈನಲ್ಲಿ ಬ್ಯಾಗ್‌ ಮತ್ತು ಒಂದು ಬಾಟಲಿ ಹಿಡಿದಿದ್ದರು. ರಸ್ತೆಯಲ್ಲಿ ವಾಹನದ ದಟ್ಟಣೆ ಇದ್ದ ಕಾರಣ ಅಪರಿಚಿತರು ಹೆಬ್ಬಾಳ ಮೇಲ್ಸೇತುವೆವರೆಗೂ ನನ್ನ ಕಾರು ಹಿಂಬಾಲಿಸಿ ಸವೀರ್‍ಸ್‌ ರಸ್ತೆ ಮೂಲಕ ಪರಾರಿಯಾದರು. ನಮ್ಮ ಸುಪಾರಿಗೆ ಪ್ರವೀಣ್‌ ಗಡಿಯಾರ್‌ ಮತ್ತು ಅಬ್ರಹಾಂ ಅವರು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಬಿಡಿಎ ಸಹಾಯಕ ಕಮಿಷನರ್‌ ಸುಧಾ ಅವರು ದೂರಿನಲ್ಲಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.