ಒಂಟಿ ಮನೆಗಳಲ್ಲಿ ‘ಜೊಡಿ ಕೊಲೆ’ ಮಾರ್ದನಿ : ಬೆಚ್ಚಿಬಿದ್ದ ಮಲೆನಾಡು

ಮಲೆನಾಡಿನ ಒಂಟಿ ಮನೆಗಳಲ್ಲಿ ಜೋಡಿ ಕೊಲೆಗಳು ಮಾರ್ಧನಿಸುತ್ತಿದ್ದು ಇದು ಇಲ್ಲಿನ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. 

Murder Cases Rise In Malenadu Region snr

 ವರದಿ : ಗೋಪಾಲ್‌ ಯಡಗೆರೆ

  ಶಿವಮೊಗ್ಗ (ಅ.15):  ಇತ್ತೀಚೆಗೆ ಸಾಗರ ತಾಲೂಕಿನಲ್ಲಿ ನಡೆದ ಜೋಡಿ ಕೊಲೆ, ಮೇಗರವಳ್ಳಿಯಲ್ಲಿ ನಡೆದ ದರೋಡೆ ಯತ್ನ ಇಂತಹ ಘಟನೆಗಳ ಬೆನ್ನಲ್ಲೇ ಮಲೆನಾಡಿನ ಒಂಟಿ ಮನೆಗಳಲ್ಲಿ ಆತಂಕದ ಮಂಕು ಕವಿಯತೊಡಗಿದೆ.

ದರೋಡೆ ಮಾತ್ರವಲ್ಲದೆ, ಹತ್ಯೆಯ ಘಟನೆಗಳೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡಿನ ಒಂಟಿ ಮನೆಗಳು ಸುರಕ್ಷಿತವಲ್ಲ ಎಂಬ ಭಾವ ಸೃಷ್ಟಿಯಾಗತೊಡಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಕಾಡೊಳಗಿಂದ ನುಗ್ಗಿ ಬರುವ ಒಂದೊಂದು ಸಣ್ಣ ಸದ್ದೂ ಮನೆಯೊಳಗೆ ಮಲಗಿರುವವರ ಮನಸ್ಸಿನಲ್ಲಿ ಇನ್ನಿಲ್ಲದ ಭಯ ತರುತ್ತಿದೆ. ನಿಶ್ಯಬ್ದದೊಳಗಿನ ಯಾವುದೋ ಶಬ್ದ ಕೂಡ ತಮ್ಮ ಮನೆಯ ಬಾಗಿಲು ಬಡಿದಂತೆ ಭಾಸವಾಗುತ್ತಿದೆ. ಮನೆಯ ಕೊಟ್ಟಿಗೆಯಲ್ಲಿನ ದನ ಕರುಗಳ ಗೊರಸುಗಳ ಶಬ್ದಕ್ಕೆ ಇನ್ನಾವುದೋ ಅರ್ಥ ಹುಟ್ಟುತ್ತಿದೆ.

"

ಇದರ ಬೆನ್ನಲ್ಲೇ ಒಂಟಿ ಮನೆಗಳನ್ನು ತೊರೆದು ಪೇಟೆಗಳಲ್ಲಿ ಮನೆ ಮಾಡುವ ಚಿಂತನೆ ಒಂಟಿ ಮನೆಗಳಲ್ಲಿ ಆರಂಭಗೊಂಡಿದೆ. ಮನೆ ಸ್ಥಳಾಂತರ ಒಂದು ಚಿಕ್ಕ ಸಂಗತಿಯಾಗುವುದಿಲ್ಲ. ಅದು ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ತೋಟಗಳು ಹಾಳು ಬೀಳುತ್ತವೆ. ಗದ್ದೆಗಳಲ್ಲಿ ಬತ್ತದ ಪೈರು ಒಣಗಲು ಕಾರಣವಾಗುತ್ತದೆ. ಮಲೆನಾಡಿನ ಕಾಡಂಚಿನಲ್ಲಿ ಜನ ಸಂಖ್ಯೆ ಕಡಿಮೆಯಾದಷ್ಟುಇನ್ನಾವುದೋ ಕ್ರಿಮಿನಲ್‌ ಚಟುವಟಿಕೆಗಳು ಸದ್ದಿಲ್ಲದೆ ಅಲ್ಲಿ ರೂಪು ತಳೆಯುತ್ತವೆ.

ನರ್ಸ್‌ಗೆ ಬೆಂಕಿ ಹಚ್ಚಿದ ಮಾಜಿ ಗೆಳೆಯ ತಾನು ಬೆಂದು ಸತ್ತ!

ದಾಳಿ, ದರೋಡೆಗಳ ಹೆಚ್ಚಳ:

ಆರೇಳು ತಿಂಗಳ ಹಿಂದೆ ಕೊಪ್ಪ ಸಮೀಪದ ಗುಡ್ಡೇತೋಟದಲ್ಲಿ ಒಂಟಿ ಮನೆಯ ಮೇಲೆ ದಾಳಿ ನಡೆಸಿದ ತಂಡ ಮನೆಯಲ್ಲಿದ್ದವರನ್ನು ಹಗ್ಗದಲ್ಲಿ ಕಟ್ಟಿಹಾಕಿ ಮನೆಯಲ್ಲಿ ಇದ್ದ ನಗ ನಾಣ್ಯ ದೋಚಿತ್ತು. ಎರಡು ದಿನಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ ದರೋಡೆಕೋರರ ತಂಡವನ್ನು ಮನೆಯ ಯಜಮಾನ ಕೋವಿ ತೋರಿಸಿ ಓಡಿಸಿದ್ದಾರೆ. ಇದಲ್ಲದೆ, ರಸ್ತೆಗಳಲ್ಲಿ ಸಂಚರಿಸುವಾಗ ಹಲ್ಲೆ ನಡೆಸಿ ಇದ್ದ ಹಣ, ಮೊಬೈಲ್‌, ಬಂಗಾರ ದೋಚುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒಂಟಿ ಮನಗಳಲ್ಲ, ಒಂಟಿ ವ್ಯಕ್ತಿಗಳ ಮೇಲೆ ಹಾಡಹಾಗಲೇ ದಾಳಿ ನಡೆಯುತ್ತಿದೆ.

ಒಂಟಿ ಮನೆಗಳು ಸಹಜವಿಲ್ಲಿ:

ಮಲೆನಾಡೆಂದರೆ ಹಾಗೆ, ಅಲ್ಲಿ ಗುಂಪು ಮನೆಗಳಿರುವುದಿಲ್ಲಿ. ಅವರವರ ತೋಟದ ಬದಿಯಲ್ಲಿಯೋ, ಗದ್ದೆಯ ಮೇಲ್ಭಾಗದಲ್ಲಿಯೋ ಮನೆ ನಿರ್ಮಿಸಿಕೊಳ್ಳುತ್ತಾರೆ. ಮನೆ, ಕೊಟ್ಟಿಗೆ ಎಲ್ಲವೂ ಇರುತ್ತದೆ. ಹಲವು ದಶಕಗಳ ಹಿಂದೆ ಈ ರೀತಿಯ ಒಂಟಿ ಮನೆಯ ಅಕ್ಕಪಕ್ಕದಲ್ಲಿ ಆಳುಕಾಳುಗಳ ಮನೆಯೂ ಇರುತ್ತಿದ್ದವು. ಒಟ್ಟಾರೆ ಒಬ್ಬರಿಗೊಬ್ಬರು ಆಸರೆಯಾಗಿ ಭಯವಿಲ್ಲದೆ ಇರುತ್ತಿದ್ದರು. ಆದರೀಗ ಕೂಲಿ ಕಾರ್ಮಿಕರು ಪ್ರತ್ಯೇಕ ಕಾಲೋನಿ ಮಾಡಿಕೊಂಡು ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹತ್ತಿರದಲ್ಲಿ ಮನೆಗಳು ಬಹಳ ಕಡಿಮೆ. ಕೂಗಿದರೂ ಕೇಳದಷ್ಟುದೂರದಲ್ಲಿ ಇನ್ನೊಂದು ಮನೆ.

ವಿದ್ಯುತ್‌-ಮೊಬೈಲ್‌ ಸಮಸ್ಯೆ:

ಇದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಮತ್ತು ಮೊಬೈಲ್‌ ಸಿಗ್ನಲ್‌ಗಳ ಸಮಸ್ಯೆ ತೀವ್ರವಾಗಿದೆ. ವಿದ್ಯುತ್‌ ಅನ್ನು ನಂಬುವಂತೆಯೇ ಇಲ್ಲ. ಕಾರ್ಗತ್ತಲಲ್ಲಿ ದೀಪದ ಬುಡ್ಡಿ ಬೆಳಕೇ ಆಧಾರ. ಲ್ಯಾಂಡ್‌ ಫೋನ್‌ ಕತೆ ಎಂದೋ ಮುಗಿದು ಹೋಗಿದೆ. ಮೊಬೈಲ್‌ಗಳಿಗೆ ಸಿಗ್ನಲ್‌ಗಳೇ ಇಲ್ಲದೆ ಅವು ಭೂಷಣದ ವಸ್ತುವಾಗಿ ಮಾರ್ಪಟ್ಟಿದೆ. ಅಪಾಯದ ಸಂದರ್ಭದಲ್ಲಿ ಇವುಗಳಿಂದ ಟಾಚ್‌ರ್‍ ಬೆಳಕಿಸಲು ಮಾತ್ರ ಸಾಧ್ಯ. ಅದೂ ಕರೆಂಟ್‌ ಇದ್ದು ಚಾಜ್‌ರ್‍ ಆಗಿದ್ದರೆ ಮಾತ್ರ. ಇಂತಹ ಸನ್ನಿವೇಶಗಳು ಕಳ್ಳರು ಕಾಕರು, ದರೋಡೆಕೋರರಿಗೆ ಅತ್ಯಂತ ಪ್ರಶಸ್ತವಾಗಿದೆ.

ಮಳೆಗಾಲದಲ್ಲಂತೂ ಧೋ ಎಂದು ಸುರಿಯುವ ಮಳೆಗೆ ಮನೆಯ ಅಂಗಳದಲ್ಲಿ ನಿಂತವರ ಧ್ವನಿಯೇ ಕೇಳದೆ ಇರುವಂತಹ ಸ್ಥಿತಿ ಇರುವಾಗ ಅಪಾಯದಲ್ಲಿ ಯಾರನ್ನು ಕೂಗಿ ಕರೆಯಲು ಸಾಧ್ಯ?

ವೃದ್ಧರೇ ಹೆಚ್ಚು:

ಇವೆಲ್ಲ ಒಂಡೆಡೆಯಾದರೆ ಮಲೆನಾಡಿನ ಒಂಟಿ ಮನೆಗಳಲ್ಲಿ ಯುವಕರು ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಅವರೆಲ್ಲ ಬೆಂಗಳೂರು ಸೇರಿ ಯಾವುದೋ ಕಾಲವಾಗಿದೆ. ಬಹುತೇಕ ಕಡೆಗಳಲ್ಲಿ ವೃದ್ಧ ದಂಪತಿಗಳು ಮಾತ್ರ ಇದ್ದಾರೆ. ಅತ್ತ ಜಮೀನು ಬಿಟ್ಟು ಬರಲೂ ಆಗದೆ, ನಗರವನ್ನು ಒಗ್ಗಿಸಿಕೊಳ್ಳಲು ಸಾಧ್ಯವಾಗದೆ, ಭಯದ ನೆರಳಲ್ಲಿ ನಿರಂತರವಾಗಿ ಬದುಕುವಂತಹ ಸ್ಥಿತಿ ಏರ್ಪಟ್ಟಿದೆ.

ಒಂಟಿ ಮನೆಗಳ ನರಳಿಕೆಯ ಧ್ವನಿ ಬೆಂಗಳೂರು ಸೇರುವುದಿಲ್ಲ ಎಂದಲ್ಲ. ಈ ಸಂಕಟಕ್ಕೆ ಸ್ಪಂದಿಸದ ಅನಿವಾರ್ಯತೆಯಲ್ಲಿ ಅಲ್ಲಿಗೆ ಹೋಗಿರುವ ಯುವ ಜನತೆ ಸಿಲುಕಿದ್ದಾರೆ. ಉದ್ಯೋಗ ಬಿಟ್ಟು ಕೃಷಿ ಅರಸಿ ಮನೆಗೆ ಮರಳಲು ಅವರಿಗೆ ಮನಸ್ಸಾಗುತ್ತಿಲ್ಲ. ಇತ್ತ ಒಂಟಿ ಮನೆಗಳಲ್ಲಿನ ತಮ್ಮ ಪೋಷಕರ ನೆನಪು ಪ್ರತಿ ರಾತ್ರಿ ನಿದ್ದೆ ಬಾರದಂತೆ ಕಾಡುತ್ತಲೇ ಇದೆ.

ಕಳೆದೊಂದು ವಾರದಿಂದ ಈ ಭಾಗದಲ್ಲಿನ ಒಂಟಿ ಮನೆಗಳ ಜನ ಪಟ್ಟಣಕ್ಕೆ, ನಗರಕ್ಕೆ ವಲಸೆ ಬರುವ ಮಾತನಾಡುತ್ತಿದ್ದಾರೆ. ಬಾಡಿಗೆ ಮನೆಗಳ ಹುಡುಕಾಟದಲ್ಲಿ ಕೆಲವರು ತೊಡಗಿದ್ದಾರೆ. ಮುಂದೇನು ಎಂದು ಗೊತ್ತಿಲ್ಲದೆ ಕೊರಗುತ್ತಿದ್ದಾರೆ.

Latest Videos
Follow Us:
Download App:
  • android
  • ios