ಸೆಪ್ಟೆಂಬರ್ 1 ರಿಂದ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿಗೆ ಭೇಟಿ ನೀಡಲು ಆನ್‌ಲೈನ್ ಬುಕಿಂಗ್ ಕಡ್ಡಾಯವಾಗಿದೆ. ಪ್ರವಾಸಿಗರ ಹೆಚ್ಚಳದಿಂದಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಬೆಂಗಳೂರು (ಆ.30): ಬೋರ್ ಆದ್ರೆ ಸಾಕು ಬೈಕ್ ರೈಡ್ ಮಾಡಿ ಸೀದಾ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಟ್ರಿಪ್‌ಗೆ ಹೋಗ್ತಿದ್ದ ಉತ್ಸಾಹಿಗಳಿಗೆ ಈಗ ನಿರಾಸೆ ಕಾದಿದೆ. ಸೋಮವಾರದಿಂದ ನಿಮ್ಮ ಮನಸ್ಸಿಗೆ ಬಂದ ಹಾಗೆ ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿಗೆ ಹೋಗೋಕೆ ಸಾಧ್ಯವಿಲ್ಲ. ಚಾರಣಕ್ಕೆ ಬರುವ ಪ್ರವಾಸಿಗರ ಹುಚ್ಚಾಟ ಹಾಗೂ ಅನಿಯಂತ್ರಿತವಾಗಿ ಬರುತ್ತಿದ್ದ ಜನರಿಂದ ಭಾರೀ ಸಮಸ್ಯೆ ಎದುರಾದ ಬಳಿಕ ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರ ಒಳಹರಿವನ್ನು ನಿಯಂತ್ರಿಸಲು ಪ್ರಾಥಮಿಕವಾಗಿ ಬುಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ. ಸೆಪ್ಟೆಂಬರ್ 1 ರಿಂದ ಇದು ಜಾರಿಗೆ ಬರಲಿದ್ದು, ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿ ಚಾರಣಕ್ಕೆ ಹೋಗಬೇಕಿದ್ದಲ್ಲಿ ಮೊದಲು ಆನ್‌ಲೈನ್ ಬುಕ್ಕಿಂಗ್ ಮಾಡೋದು ಕಡ್ಡಾಯವಾಗಿದೆ.
ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್‌ಗಿರಿಗೆ ಹೋಗುವ ಪ್ರವಾಸಿಗರು ಈಗ ಆನ್‌ಲೈನ್‌ನಲ್ಲಿ ಮುಂಚಿತವಾಗಿ ಸ್ಲಾಟ್ ಬುಕಿಂಗ್ ಮಾಡಬೇಕಾಗುತ್ತದೆ, ಏಕೆಂದರೆ ಹೊಸ ವ್ಯವಸ್ಥೆ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ.
ಆನ್‌ಲೈನ್ ಬುಕ್ಕಿಂಗ್ ಯಾಕೆ ಕಡ್ಡಾಯ?
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಮಾಣಿಕ್ಯಧಾರಾ ಜಲಪಾತಗಳನ್ನು ಒಳಗೊಂಡಿರುವ ಚಂದ್ರದ್ರೋಣ ಗುಡ್ಡಗಾಡು ಪ್ರದೇಶಕ್ಕೆ ವರ್ಷದಿಂದ ವರ್ಷ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ಅಪಾರ ಜನದಟ್ಟಣೆಗೆ ಕಾರಣವಾಗುತ್ತದೆ. ಪ್ರವಾಸಿಗರ ಒಳಹರಿವನ್ನು ನಿಯಂತ್ರಿಸಲು, ಜಿಲ್ಲಾಡಳಿತವು ಬುಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಬುಕ್ಕಿಂಗ್ ಹೇಗೆ ಮಾಡೋದು? ಎಷ್ಟು ಶುಲ್ಕ?
ಜಿಲ್ಲಾ ಅಧಿಕೃತ ವೆಬ್‌ಸೈಟ್ https://chikkamagaluru.nic.in/en/tourism ಮೂಲಕ ಬುಕಿಂಗ್ ಮಾಡಬಹುದು. ಪ್ರವಾಸಿಗರು ಬೈಕ್‌ಗಳಿಗೆ 50 ರೂ., ಕಾರುಗಳಿಗೆ 100 ರೂ., ಮೋಟಾರ್ ವಾಹನಗಳಿಗೆ 150 ರೂ. ಮತ್ತು ಟೆಂಪೋ ಟ್ರಾವೆಲರ್‌ಗಳಿಗೆ 200 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಜೊತೆಗೆ ಆದ್ಯತೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ಪ್ರತಿದಿನ ಎರಡು ವಿಸಿಟಿಂಗ್ ಸ್ಲಾಟ್ ನಿಗದಿಪಡಿಸಲಾಗಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ. ಪ್ರತಿ ಸ್ಲಾಟ್‌ನಲ್ಲಿ 600 ವಾಹನಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಮುಂಚಿತವಾಗಿ ಬುಕ್ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮುಳ್ಳಯ್ಯನಗಿರಿ
ಮುಳ್ಳಯ್ಯನಗಿರಿ ಇಲ್ಲಿನ ಬಾಬಾ ಬುಡನ್ ಗಿರಿ ಬೆಟ್ಟಗಳ ಒಂದು ಭಾಗವಾಗಿದೆ. ಇದು 1930 ಮೀಟರ್ ಎತ್ತರದಲ್ಲಿದೆ ಮತ್ತು ಕರ್ನಾಟಕದ ಅತಿ ಎತ್ತರದ ಶಿಖರ. ಇಷ್ಟು ಎತ್ತರಿಂದ ಸೂರ್ಯಾಸ್ತವನ್ನು ನೋಡುವುದೇ ವಿಶಿಷ್ಟ ಅನುಭವ. ಇದು ಚಿಕ್ಕಮಗಳೂರು ಪಟ್ಟಣದಿಂದ 16 ಕಿ.ಮೀ ದೂರದಲ್ಲಿದ್ದು, ಮುಳ್ಳಯ್ಯನಗಿರಿಗೆ ಚಾಲನೆ ಮಾಡುವುದು ಅಪಾಯದ ಹಾದಿ. ದಾರಿಯಲ್ಲಿ ಸೀತಾಳಯ್ಯನಗಿರಿ ಇದೆ, ಅಲ್ಲಿನ ಶಿವ ದೇವಾಲಯದಲ್ಲಿನ ನೀರು ಹೆಚ್ಚಾಗುವುದಿಲ್ಲ ಅಥವಾ ಕಡಿಮೆಯಾಗುವುದಿಲ್ಲ. ಮುಳ್ಳಯ್ಯನಗಿರಿಗೆ ಹೋಗುವ ರಸ್ತೆ ತುಂಬಾ ಕಿರಿದಾಗಿದ್ದು, ಕಡಿದಾದ ಬಂಡೆಗಳಿಂದ ತುಂಬಿದ್ದು, ಶಿಖರದ ತುದಿಗೆ ರೈಡ್ ಮಾಡಲು ಸಾಧ್ಯವಿಲ್ಲ. ಅರ್ಧದಾರಿಯ ಬಳಿಕ ಬೆಟ್ಟಕ್ಕೆ ನಡೆದುಕೊಂಡೇ ಹೋಗಬೇಕು. ಬೆಟ್ಟದ ತುದಿಯಲ್ಲಿ ಒಂದು ದೇವಾಲಯವಿದೆ. ಬೆಟ್ಟದ ತುದಿಯಿಂದ ಅರಬ್ಬಿ ಸಮುದ್ರವು ಸ್ಪಷ್ಟವಾಗಿ ಗೋಚರಿಸುತ್ತದೆ. ದೇವಾಲಯದ ಆವರಣದಲ್ಲಿರುವ ಸಣ್ಣ ಗುಡ್ಡವು ಕರ್ನಾಟಕದ ಅತಿ ಎತ್ತರದ ಸ್ಥಳವಾಗಿದೆ. ದೇವಾಲಯಕ್ಕೆ ಹೋಗುವ ಕಿರಿದಾದ ರಸ್ತೆಯು ದ್ವಿಮುಖ ಸಂಚಾರವನ್ನು ಅಸಾಧ್ಯವಾಗಿಸುತ್ತದೆ. ಇದು ಕರ್ನಾಟಕದಲ್ಲಿ ಒಂದು ಉತ್ತಮ ಚಾರಣ ಸ್ಥಳವಾಗಿದೆ.
ಬಾಬಾ ಬುಡನ್ ಗಿರಿ ಎಂದೂ ಕರೆಯಲ್ಪಡುವ ದತ್ತ ಪೀಠ:
ಚಿಕ್ಕಮಗಳೂರು ಪಟ್ಟಣದ ಉತ್ತರಕ್ಕೆ ಬಾಬಾ ಬುಡನ್ ಗಿರಿ ಶ್ರೇಣಿ ಅಥವಾ ಚಂದ್ರ ದ್ರೋಣ ಪರ್ವತ ಎಂದು ಪ್ರಾಚೀನ ಕಾಲದಲ್ಲಿ ಕರೆಯಲ್ಪಡುತ್ತಿತ್ತು, ಇದು ಹಿಮಾಲಯ ಮತ್ತು ನೀಲಗಿರಿಗಳ ನಡುವಿನ ಅತಿ ಎತ್ತರದ ಪರ್ವತ ಶಿಖರಗಳಲ್ಲಿ ಒಂದನ್ನು ಹೊಂದಿದೆ. ಈ ಶಿಖರವು 150 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ ಮುಸ್ಲಿಂ ಸಂತ ಬಾಬಾ ಬುಡನ್ ಅವರ ಹೆಸರನ್ನು ಪಡೆದುಕೊಂಡಿದೆ.
