ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಮುಲಾಯಂ ಸಿಂಗ್‌ ಯಾದವ್‌ ಅವರಿಗೂ ಮೈಸೂರಿಗೂ ನಂಟಿತ್ತು. ಪುತ್ರ ಅಖಿಲೇಶ್‌ ಎಂಜಿನಿಯರಿಂಗ್‌ ಓದಿದ್ದು ಎಸ್‌ಜೆಸಿಇಯಲ್ಲಿ. ಇಲ್ಲಿನ ಯಾದವರ ಸಂಘದ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರು. ನೆರವು ನೀಡಿದ್ದರು.

ಅಂಶಿ ಪ್ರಸನ್ನಕುಮಾರ್‌

ಮೈಸೂರು (ಅ.11): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಮುಲಾಯಂ ಸಿಂಗ್‌ ಯಾದವ್‌ ಅವರಿಗೂ ಮೈಸೂರಿಗೂ ನಂಟಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಬಾರಿ ಭೇಟಿ ನೀಡಿದ್ದರು. ಅವರ ಪುತ್ರ ಅಖಿಲೇಶ್‌ ಯಾದವ್‌ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಅಧೀನದ ಶ್ರೀ ಜಯಚಾಮರಾಜೇಂದ್ರ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ (ಎಸ್‌ಜೆಸಿಇ) ವಿದ್ಯಾರ್ಥಿಯಾಗಿದ್ದರು. ನಂತರ ಅಖಿಲೇಶ್‌ ಕೂಡ ತಂದೆಯ ಹಾದಿಯಲ್ಲಿಯೇ ರಾಜಕಾರಣ ಪ್ರವೇಶಿಸಿದರು. ಮೊದಲು ಸಂಸದರಾದರು. ಅವರ ಪತ್ನಿ ಡಿಂಪಲ್‌ ಕೂಡ ಸಂಸದರಾದರು. ಅಖಿಲೇಶ್‌ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಆದರು. ಈಗ ಸಮಾಜವಾದಿ ಪಕ್ಷವನ್ನು ಅವರೇ ಮುನ್ನಡೆಸುತ್ತಿದ್ದಾರೆ. ಜನತಾ ಪರಿವಾರಕ್ಕೆ ಸೇರಿದ್ದ ಮುಲಾಯಂ ಅವರಿಗೂ ಕರ್ನಾಟಕದ ಎಚ್‌.ಡಿ. ದೇವೇಗೌಡರಿಗೂ ಸುಮಧುರ ಬಾಂಧವ್ಯವಿತ್ತು. ಹೀಗಾಗಿ ಕರ್ನಾಟಕದ ಬಗ್ಗೆ ಅವರಿಗೆ ವಿಶೇಷ ಒಲವಿತ್ತು. 1996 ರಲ್ಲಿ ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಮುಲಾಯಂ ಅವರು ರಕ್ಷಣಾ ಸಚಿವರಾಗಿದ್ದರು. ಸಾಮಾನ್ಯವಾಗಿ ಮುಲಾಯಂ ಅವರು ಮೈಸೂರಿಗೆ ಬಂದಾಗಲೆಲ್ಲಾ ನಜರ್‌ಬಾದ್‌ನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಪ್ರತಿಬಾರಿಯೂ ಪತ್ರಕರ್ತರನ್ನು ಭೇಟಿ ಮಾಡುತ್ತಿದ್ದರು. ‘ನಾನೊಬ್ಬ ಸಾಮಾನ್ಯ ಶಿಕ್ಷಕ. ಈಗ ಉತ್ತರ ಪ್ರದೇಶ ಸಿಎಂ ಆಗಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಎಚ್‌.ಡಿ. ದೇವೇಗೌಡ, ವಿ.ಪಿ. ಸಿಂಗ್‌, ರಾಮವಿಲಾಸ್‌ ಪಾಸ್ವಾನ್‌, ಶರದ್‌ಯಾದವ್‌ರಿಂದ ಹಿಡಿದು ಜನತಾ ಪರಿವಾರದ ವಿಭಜನೆ, ಒಗ್ಗೂಡುವಿಕೆಯಿಂದ, ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ, ಬಿಜೆಪಿಯ ರಾಜಕಾರಣದವರೆಗೂ ಪ್ರಶ್ನೋತ್ತರಗಳು ಸಾಗುತ್ತಿದ್ದವು. ಎಲ್ಲದಕ್ಕೂ ಸಾವಕಾಶವಾಗಿಯೇ ಉತ್ತರ ನೀಡುತ್ತಿದ್ದರು.

ಯಾದವರ ಸಂಘದ ಕಟ್ಟಡ ನಿರ್ಮಾಣಕ್ಕೆ ನೆರವು: ತಮ್ಮ ಮಗ ಅಖಿಲೇಶ್‌ ಮೈಸೂರಿನಲ್ಲಿ ಓದುತ್ತಿದ್ದ ಕಾರಣಕ್ಕೆ ಪದೇ ಪದೇ ಮುಲಾಯಂ ಮೈಸೂರಿಗೆ ಬರತ್ತಿದ್ದಾಗ ಸ್ಥಳೀಯ ಯಾದವ ಸಂಘದ ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿದ್ದರು. ಅಲ್ಲದೇ ಉತ್ತರ ಪ್ರದೇಶದ ಯಾದವರು, ಮೈಸೂರಿನ ಯಾದವರು ಎಲ್ಲಾ ಒಂದೇ ಎಂಬುದನ್ನು ಗಮನಕ್ಕೆ ತಂದು, ಕಟ್ಟಿಡ ನಿರ್ಮಾಣಕ್ಕೆ ನೆರವು ಕೋರಿದ್ದರು. ಆ ಕಾಲಕ್ಕೆ ಮುಲಾಯಂ ಅವರು ಐದು ಲಕ್ಷ ರು. ನೆರವು ನೀಡಿದ್ದರು.