ಶಿವಕುಮಾರ ಮುರಡಿಮಠ

ಧಾರವಾಡ(ಫೆ.05): ದೇಶದ ಗಡಿ ಕಾಯುವ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಮುಧೋಳ ನಾಯಿಗಳು ಇದೀಗ ನಾಡಿನ ಅಮೂಲ್ಯ ಸಂಪತ್ತಾಗಿರುವ ಶ್ರೀಗಂಧದ ಮರಗಳನ್ನು ಕಾಯುವ ರಕ್ಷಣಾ ಕವಚಗಳಾಗಿ ಕಾಯಕ ಮಾಡುತ್ತಿವೆ.

ಶ್ರೀಗಂಧದ ಮರಗಳನ್ನು ಬೆಳೆಸುವುದಕ್ಕಿಂತ ಉಳಿಸಿಕೊಳ್ಳುವುದೇ ದುಸ್ತರ. ಕಾರಣ ಶ್ರೀಗಂಧದ ಮರಗಳ್ಳರ ವಿಪರೀತ ಕಾಟ. ಇಂತಹ ಸಂದರ್ಭದಲ್ಲಿ ಧಾರವಾಡ ಸಮೀಪದ ಗುಂಗರಗಟ್ಟಿಯಲ್ಲಿನ ಸುಮಾರು 50 ಎಕರೆ ಪ್ರದೇಶದಲ್ಲಿನ ಅರಣ್ಯ ಇಲಾಖೆ ವತಿಯಿಂದ ನೆಟ್ಟಿರುವ ಶ್ರೀಗಂಧಗಳನ್ನು ಕಾಯಲು ಮುಧೋಳ ನಾಯಿಗಳನ್ನು ಬಳಸಲಾಗುತ್ತಿದೆ. ಅರಣ್ಯ ಸಿಬ್ಬಂದಿ ಹಗಲು-ರಾತ್ರಿ ನಿದ್ದೆಗೆಟ್ಟು ಕಾಯ್ದರೂ ಸಹ ಶ್ರೀಗಂಧದ ಮರಗಳನ್ನು ಕದ್ದೊಯ್ಯುವ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಕಾವಲುಗಾರರೊಂದಿಗೆ ಮುಧೋಳ ನಾಯಿಗಳನ್ನು ಸಹ ಕಾವಲು ಇಟ್ಟಿರುವರು.

ಈ ಪ್ರದೇಶದಲ್ಲಿ ಅರಣ್ಯ ಇಲಾಖೆ 1998ರಿಂದಲೂ ಶ್ರೀಗಂಧ ಗಿಡಗಳನ್ನು ಬೆಳೆಸುತ್ತಿದೆ. ಆದರೆ ಅವುಗಳ ಪೈಕಿ ಇಲಾಖೆಗೆ ಸಿಗುತ್ತಿದ್ದುದು ಬೆರಳೆಣಿಕೆಯ ಗಿಡಗಳಷ್ಟೇ. ಇದಕ್ಕೆ ಕಾರಣ ಶ್ರೀಗಂಧ ಕಳ್ಳರ ಕೈಚಳಕ. ರಾತ್ರೋರಾತ್ರಿ ಈ ಪ್ರದೇಶಕ್ಕೆ ನುಗ್ಗಿ ಶ್ರೀಗಂಧ ಹೊತ್ತೊಯ್ಯುತ್ತಿದ್ದರು. ಈ ವಿಷಯ ಅಧಿಕಾರಿಗಳಿಗೂ ತಲೆ ನೋವಾಗಿ ಪರಿಣಮಿಸಿತ್ತು. ಸಿಬ್ಬಂದಿ ಹಗಲು-ರಾತ್ರಿ ಎಷ್ಟೇ ನಿಗಾವಹಿಸಿ ಕಾದರೂ ಅವರ ಕಣ್ಣು ತಪ್ಪಿಸಿ ನುಗ್ಗುವ ಕಳ್ಳರು ಕೆಲವೇ ನಿಮಿಷಗಳಲ್ಲಿ ಹತ್ತಾರು ಶ್ರೀಗಂಧದ ಗಿಡಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವಿಷಯ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿತ್ತು. ಹೀಗಾಗಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಶ್ರೀಗಂಧದ ರಕ್ಷಣೆಗೆ ಈ ನಾಯಿ ಕಾವಲು ತಂತ್ರಗಳನ್ನು ರೂಪಿಸಿದ್ದಾರೆ. ತೋಟದ ಸುತ್ತಲೂ ತಂತಿಬೇಲಿ ಇದೆ. ಹಿಂಬದಿ ಏಳು ಅಡಿ ಎತ್ತರದ ಗೋಡೆ ಇದ್ದರೂ ಸಹ ಕಳ್ಳರು ಮಾತ್ರ ಸಲೀಸಾಗಿ ತೋಟಕ್ಕೆ ನುಗ್ಗಿ ಮರಗಳನ್ನು ಕತ್ತರಿಸುವುದು ಕಡಿಮೆಯಾಗಿರಲಿಲ್ಲ. ಆದ್ದರಿಂದ ರಾಜಾ-ರಾಣಿ ಎಂಬ ಮುಧೋಳ ನಾಯಿಗಳನ್ನು ರಕ್ಷಣೆಗೆ ಬಳಸಲಾದ ಪರಿಣಾಮವಾಗಿ ಇದೀಗ ಕಳ್ಳರ ಕಾಟ ಸಂಪೂರ್ಣವಾಗಿ ನಿಂತಿದೆ. 2018ರಲ್ಲಿ ಜಬಲ್‌ಪುರ ಜಿಲ್ಲೆಯ 9 ಜನ ಶ್ರೀಗಂಧ ಕಳ್ಳರನ್ನು ಶೋಧಿಸಿ, ಬಂಧಿಸುವಲ್ಲಿ ಈ ಬೇಟೆ ನಾಯಿಗಳೇ ಮಹತ್ವದ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಪ್ರದೇಶದಲ್ಲಿ ಸಾವಿರಾರು ಶ್ರೀಗಂಧದ ಮರಗಳಿವೆ. ಈ ಮುಂಚೆ ಅವುಗಳ ರಕ್ಷಣೆಯೇ ದುಸ್ತರವಾಗಿತ್ತು. ಕಳ್ಳರನ್ನು ಹಿಡಿಯುವುದು ಸುಲಭವಾಗಿರಲಿಲ್ಲ. ಬೇಟೆ ನಾಯಿಗಳನ್ನು ಬಳಸಿ ಕಳ್ಳತನ ತಡೆಯಲು ಸಾಧ್ಯ ಎಂಬುದನ್ನು ಅರಿತು ರಾಜಾ-ರಾಣಿಯನ್ನು ಸಾಕಲಾಗಿದೆ. ಈಗ ಕಳ್ಳತನ ಪ್ರಮಾಣ ಕಡಿಮೆಯಾಗಿದೆ. ಈ ಪ್ರದೇಶದಲ್ಲಿ ಮತ್ತಷ್ಟುಮುಧೋಳ ನಾಯಿಗಳನ್ನು ರಾತ್ರಿ ಹೊತ್ತು ರಕ್ಷಣೆಗೆ ತಂದು ಬಿಡಲು ಯೋಜನೆ ರೂಪಿಸುತ್ತಿದ್ದಾರೆ. ಒಟ್ಟಿನಲ್ಲಿ ರಾತ್ರೋರಾತ್ರಿ ಗಿಡಗಳನ್ನು ಕತ್ತರಿಸಿಕೊಂಡು ಪರಾರಿಯಾಗುತ್ತಿದ್ದ ಕಳ್ಳರಿಗೆ ಈ ನಾಯಿಗಳು ಬ್ರೇಕ್‌ ಹಾಕಿವೆ ಎನ್ನುತ್ತಾರೆ ಗುಂಗರಗಟ್ಟಿಯ ಅರಣ್ಯ ಇಲಾಖೆ ಸಿಬ್ಬಂದಿ ಶಿವಪ್ಪಾ ಬಳ್ಳೋಡಿ.

ಶ್ರೀಗಂಧ ಅತ್ಯಂತ ಬೆಲೆಯುಳ್ಳ ವಸ್ತು. ಹೀಗಾಗಿ ಎಂತಹ ರಕ್ಷಣೆಯೊಂದಿಗೆ ಶ್ರೀಗಂಧ ಬೆಳೆಸಿದರೂ ಅದನ್ನು ಕದ್ದೊಯ್ಯುವುದು ಸಾಮಾನ್ಯ. ಹೀಗಾಗಿ ಹೆಚ್ಚಿನ ರೈತರು ಶ್ರೀಗಂಧ ಗಿಡಗಳನ್ನು ನೆಡುವುದನ್ನೇ ನಿಲ್ಲಿಸಿದ್ದಾರೆ. ಇದೀಗ ಅರಣ್ಯ ಇಲಾಖೆ ಶ್ರೀಗಂಧದ ಮರಗಳನ್ನು ಕಾಯಲು ಮುಧೋಳ ನಾಯಿಗಳನ್ನು ಬಳಸಿದ್ದು ಸಾಮಾನ್ಯ ರೈತರಿಗೂ ಸಹ ಮಾದರಿಯಾಗಿದ್ದು ಶ್ರೀಗಂಧ ಬೆಳೆಸುವವರು ಸಹ ಈ ರೀತಿಯ ನಾಯಿಗಳನ್ನು ಬಳಸಿ ತಮ್ಮ ಅಮೂಲ್ಯ ಸಂಪತ್ತು ಉಳಿಸಿಕೊಳ್ಳಬಹುದು.

ಈ ಬಗ್ಗೆ ಮಾತನಾಡಿದ ಸಹಾಯಕ ಸಂರಕ್ಷಣಾಧಿಕಾರಿ ಬಿ.ವೈ. ಈಳಿಗೇರ ಅವರು, ಶ್ರೀಗಂಧ ಮರಗಳನ್ನು ರಕ್ಷಿಸಿಕೊಳ್ಳುವುದು ತೀರಾ ಸಮಸ್ಯೆಯಾದ ಕಾರಣ ಮುಧೋಳ ನಾಯಿಗಳನ್ನು 2014ರಿಂದ ಕಾವಲು ಬಿಡಲಾಗಿದೆ. ಅರಣ್ಯ ಇಲಾಖೆ ಜನರಲ್ಲದೇ ಬೇರೆ ಜನರು ಈ ಪ್ರದೇಶಕ್ಕೆ ಬಂದರೆ ಈ ನಾಯಿಗಳು ಪತ್ತೆ ಹಚ್ಚುತ್ತವೆ. ಈ ಮೂಲಕ ಕಳ್ಳರನ್ನು ಹಿಡಿಯಲು ತಮಗೆ ತುಂಬ ಅನುಕೂಲವಾಗಿದೆ ಎಂದು ಹೇಳಿದ್ದಾರೆ.