Muda Scam: 8ನೇ ವರ್ಷದಲ್ಲಿ ಭೂಮಿ ಕಳೆದುಕೊಂಡ ಮಾಲೀಕನಿಂದ 68ನೇ ವರ್ಷದಲ್ಲಿ ಸೈಟ್‌ಗೆ ಅರ್ಜಿ!
ಸಿಎಂ ಸಿದ್ಧರಾಮಯ್ಯ ಅವರಿಗೆ ಮುಡಾ ಹಗರಣ ತಲೆನೋವು ತಂದಿರುವ ನಡುವೆ, ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿರುವ ಮುಡಾದಲ್ಲಿ ಒಂದೊಂದೇ ಕಳ್ಳಾಟಗಳು ಹೊರಬರುತ್ತಿವೆ.
ಮೈಸೂರು (ಆ.22): ಮುಡಾ ಬ್ರಹ್ಮಾಂಡ ಭ್ರಷ್ಟಾಚಾರಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಬಗೆದಷ್ಟೂ ಮುಡಾ ಅಧಿಕಾರಿಗಳ ಕಳ್ಳಾಟ ಹೊರಬರುತ್ತಿವೆ. ಇಲ್ಲದ ವ್ಯಕ್ತಿ ಸೃಷ್ಟಿಸಿ ಬದಲಿ ನಿವೇಶನವನ್ನು ಮುಡಾ ಅಧಿಕಾರಿಗಳು ಪಡೆದಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಅಧಿಕಾರಿಗಳ ಪ್ರಕಾರ 8ನೇ ವಯಸ್ಸಿನಲ್ಲೇ ಮಾಲೀಕ ಭೂಮಿ ಕಳೆದುಕೊಂಡಿದ್ದಾರೆ. ಆದರೆ, ಅದೇ ವ್ಯಕ್ತಿ ತನ್ನ 68ನೇ ವರ್ಷದಲ್ಲಿ ಆತ ಮುಡಾದಲ್ಲಿ ಬದಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಮುಡಾದಲ್ಲಿ ಅಧಿಕಾರಿಗಳ ಗೋಲ್‌ಮಾಲ್‌ಗೆ ಮತ್ತೊಂದು ದಾಖಲೆ ಸಾಕ್ಷಿ ಸಿಕ್ಕಿದೆ. ಮೈಸೂರಿನ ಅಬ್ದುಲ್ ವಾಹಿದ್ ಎಂಬುವರಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು. 1962ರಲ್ಲಿ ಅಬ್ದುಲ್ ವಾಹಿದ್ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರು. ಇತನಿಗೆ ಸೇರಿದ ಬೆಲವತ್ತ ಗ್ರಾಮದ ಸರ್ವೆ ನಂ21 ರಲ್ಲಿ 4.39 ಎಕರೆ ಭೂಮಿಯನ್ನು ಮುಡಾ ವಶಪಡಿಸಿಕೊಂಡಿತ್ತು. ಹೀಗಾಗಿ ಅಬ್ದುಲ್ ವಾಹಿದ್ ಹೆಸರಿನಲ್ಲಿ ಬದಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಬದಲಿ ನಿವೇಶನಕ್ಕಾಗಿ ಅಬ್ದುಲ್ ವಾಹಿದ್ ಹೆಸರಿನ ವ್ಯಕ್ತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಈ ಹಂತದಲ್ಲಿ ನ್ಯಾಯಾಧೀಶರು 7-8 ವಯಸ್ಸಿನ ವ್ಯಕ್ತಿ RTC ಹೊಂದಿರಲು ಹೇಗೆ ಸಾಧ್ಯ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಸರ್ಕಾರ ಇದರ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಲಿ, ಮುಡಾ ಆಗಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ನ್ಯಾಯಮೂರ್ತಿಗಳು ಬದಲಾಗುತ್ತಿದ್ದಂತೆ ರಿಟ್ ಅರ್ಜಿಯನ್ನು ವ್ಯಕ್ತಿ ವಾಪಾಸ್ ಪಡೆದುಕೊಂಡಿದ್ದಾನೆ. ಕಳೆದ ವರ್ಷದ ಫೆಬ್ರವರಿ 28 ರಂದು ಮುಡಾದಿಂದಲೇ ಆದೇಶ ಮಾಡಿಸಿಕೊಂಡು 55,260 ಚದರ ಅಡಿ ಬದಲಿ ನಿವೇಶನವನ್ನೂ ಕೂಡ ವ್ಯಕ್ತಿ ಪಡೆದುಕೊಂಡಿದ್ದಾನೆ. ನ್ಯಾಯಾಲಯ ತನಿಖೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದರೂ, ಈ ಪ್ರಕರಣದಲ್ಲಿ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ.
ಪ್ರಕರಣದಲ್ಲಿ ಮೂಡಿರುವ ಅನುಮಾನಗಳು ಏನೆಂದರೆ, ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದರೂ ಅಧಿಕಾರಿಗಳು ಏಕೆ ಇದನ್ನು ತನಿಖೆ ಮಾಡುವ ಗೋಜಿಗೆ ಹೋಗಲಿಲ್ಲ ಎನ್ನುವುದು. ಒಬ್ಬ ವ್ಯಕ್ತಿಗೆ 7-8 ನೇ ವಯಸ್ಸಿನಲ್ಲೆ RTC ಇರಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಎದುರಾಗಿದೆ. RTC ಇದ್ದರೂ ಸಹ 68ನೇ ವಯಸ್ಸಿನವರೆಗೆ ಯಾಕಾಗಿ ಪರಿಹಾರ ಪಡೆದಿಲ್ಲ/ ಪರಿಹಾರಕ್ಕೆ ಅರ್ಜಿ ಹಾಕಿಲ್ಲ ಎನ್ನುವ ಮತ್ತೊಂದು ಪ್ರಶ್ನೆಯೂ ಎದುರಾಗಿದೆ.
ಏನಿದು ಮುಡಾ ಹಗರಣ? ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಗಾಳಕ್ಕೆ ಸಿಕ್ಕಿಬಿದ್ದಿದ್ದು ಹೇಗೆ?
ಆಧಾರ್ ಕಾರ್ಡ್ ನಲ್ಲಿ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಅಂತ ವಿಳಾಸ ಹಾಕಲಾಗಿದೆ. ಆದರೆ, ಉದಯಗಿರಿ ಪೋಸ್ಟ್ ಎಂದು ನಮೂದಾಗಿದ್ದರೂ ಯಾಕಾಗಿ ಪರಿಶೀಲನೆ ಮಾಡಿಲ್ಲ. ಉಬೇದುಲ್ಲ, ಸೈಯದ್ ಅನ್ನುವ ವ್ಯಕ್ತಿಗಳೆ ಬದಲಿ ನಿವೇಶನ ವಿಟ್ನೆಸ್ ಸಹಿ ಹಾಕಿರುವುದು ಏಕೆ ಎನ್ನುವ ಪ್ರಶ್ನೆಗಳೂ ಎದ್ದಿವೆ.
MUDA Scam: ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ನಂತರ ಮುಂದೇನು?