Asianet Suvarna News Asianet Suvarna News

ಶಾಸಕ ಶರತ್‌ಗೆ ಸಚಿವ ಎಂಟಿಬಿ ಪಂಥಾಹ್ವಾನ

ತಾಲೂಕಿನ ಅನುಗೊಂಡಹಳ್ಳಿ ಹೋಬಳಿಯ ಮುತ್ಸಂದ್ರದಲ್ಲಿ ಶನಿವಾರ ನಡೆದ ಜಿಲ್ಲಾ​ಧಿಕಾರಿ ನಡೆ, ಹಳ್ಳಿ ಕಡೆಗೆ ಕಾರ್ಯಕ್ರಮದ ನಂತರ ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿದ್ದದ್ದರಿಂದ ವೇದಿಕೆ ಮೇಲಿಂದ ನಿರ್ಗಮಿಸಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ಸ್ಪಷ್ಟಪಡಿಸಿದರು.

MTB Nagaraj Taunts To MLA Sharath Bachchegowda snr
Author
First Published Dec 19, 2022, 6:18 AM IST

 ಹೊಸಕೋಟೆ (ಡಿ. 19):  ತಾಲೂಕಿನ ಅನುಗೊಂಡಹಳ್ಳಿ ಹೋಬಳಿಯ ಮುತ್ಸಂದ್ರದಲ್ಲಿ ಶನಿವಾರ ನಡೆದ ಜಿಲ್ಲಾ​ಧಿಕಾರಿ ನಡೆ, ಹಳ್ಳಿ ಕಡೆಗೆ ಕಾರ್ಯಕ್ರಮದ ನಂತರ ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿದ್ದದ್ದರಿಂದ ವೇದಿಕೆ ಮೇಲಿಂದ ನಿರ್ಗಮಿಸಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ಸ್ಪಷ್ಟಪಡಿಸಿದರು.

ಹಾಗೆ ವೇದಿಕೆಯಿಂದ ನಿರ್ಗಮಿಸಿದ್ದಕ್ಕೆ ಶಾಸಕ (MLA)  ಶರತ್‌ ಬಚ್ಚೇಗೌಡರು ಬಿಜೆಪಿಯವರು (BJP) ಹೇಡಿಗಳು ನಾನು ಮಾತನಾಡುವಾಗ ಎದ್ದು ಹೋಗಿದ್ದಾರೆ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಸುದ್ದಿಗೋಷ್ಠಿಯಲ್ಲಿ ಸಚಿವ ಎಂಟಿಬಿ ನಾಗರಾಜ್‌ ಪ್ರತಿಕ್ರಿಯಿಸಿದರು.

ನನ್ನ ಉಸ್ತುವಾರಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಹಲವಾರು ಕಾರ್ಯಕ್ರಮಗಳ ಪೂರ್ವ ನಿಯೋಜನೆ ಆಗಿದ್ದವು. ಆದ್ದರಿಂದ ನಾನು ಹೊರಡಲು ಮುಂದಾದಾಗ ಶಾಸಕ ಶರತ್‌ ಬಚ್ಚೇಗೌಡ ಅವರು ಅರ್ಧಗಂಟೆ ಇರಿ ನಮ್ಮ ಭಾಷಣ ಕೇಳಿ, ಕೇಳದೇ ಹೋಗುತ್ತಿದ್ದೀರಲ್ಲ ರಣಹೇಡಿಗಳು ಎಂದೆಲ್ಲಾ ಮಾತನಾಡಿದ್ರು. ಆದರೆ ಒಬ್ಬ ಶಾಸಕರಾಗಿ ಅವರಿಗೆ ಅದು ಶೋಭೆ ತರುವುದಲ್ಲ. ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ನಾನು ಸದಾ ಸಿದ್ದ ಎಂದು ಹೇಳಿದರು.

ವರ್ಷಕ್ಕೆ 40 ಕೋಟಿ ತೆರಿಗೆ ಕಟ್ತೇನೆ:

ನಾನು ಉದ್ಯಮಿಯಾಗಿ ಸಾಕಷ್ಟುಸಂಪಾದನೆ ಮಾಡಿದ್ದು, ಪ್ರತಿ ವರ್ಷ 40 ಕೋಟಿ ಆದಾಯ ತೆರಿಗೆ, 6 ಕೋಟಿ ಕಾರ್ಪೊರೇಷನ್‌ ತೆರಿಗೆ, 50 ಕೋಟಿ ಜಿಎಸ್‌ಟಿ ಪಾವತಿ ಮಾಡ್ತೇನೆ. ಜನಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದೆ. ಪ್ರತಿನಿತ್ಯ ಬೆಳಗ್ಗೆ 10-12 ಗಂಟೆವರೆಗೂ 150 ಮಂದಿ ಸಮಸ್ಯೆಗಳನ್ನು ಕಾನೂನುಬದ್ದವಾಗಿ ಪರಿಹರಿಸಿ ಹೋಗುತ್ತೇನೆ. ರಾಜಕೀಯ ಎಷ್ಟೇ ಇದ್ದರೂ ಮತದಾರರ ನಿರ್ಲಕ್ಷ್ಯ ಮಾಡೋದಿಲ್ಲ ಎಂದು ಸಚಿವ ಎಂಟಿಬಿ ಶಾಸಕ ಶರತ್‌ಗೆ ಟಾಂಗ್‌ ಕೊಟ್ಟರು.

ಪ್ರೋಟೋಕಾಲ್‌ ಪಾಲಿಸದ ಶಾಸಕರು:

ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್‌ ವಿಚಾರವಾಗಿ ಗಲಾಟೆ ಮಾಡುವ ಶಾಸಕರು, ಅವರೇ ಪ್ರೋಟೋಕಾಲ್‌ ಫಾಲೋ ಮಾಡುತ್ತಿಲ್ಲ. ಪ್ರತಿಯೊಬ್ಬ ಸಚಿವರು ಒಂದೊಂದು ನೂಡಲ್‌ ಜಿಲ್ಲೆ ಅಂತ ಆಯ್ಕೆ ಮಾಡಿಕೊಳ್ಳಬೇಕು. ನಾನು ಗ್ರಾಮಾಂತರ ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದೇನೆ. ಪ್ರೋಟೋಕಾಲ್‌ ಪ್ರಕಾರ ಇದುವರೆಗೂ ಶಾಸಕರು ಮಾಡಿರುವ ಯಾವೊಂದು ಪೂಜೆಗೂ ನನ್ನನ್ನು ಕರೆದಿಲ್ಲ ನಾನೂ ಕೇಳಿಲ್ಲ. ಆದರೆ ನಾವು ಮಾಡುವ ಪೂಜೆಗಳಿಗೆ ಬಂದು ಪ್ರೋಟೋಕಾಲ್‌ ಅಂತ ಗಲಭೆ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸಿ, ಅಭಿವೃದ್ಧಿಗೆ ಹಿನ್ನಡೆ ಮಾಡುತ್ತಿದ್ದಾರೆ ಎಂದು ಶಾಸಕ ಶರತ್‌ ವಿರುದ್ಧ ಸಚಿವ ಎಂಟಿಬಿ ಕಿಡಿಕಾರಿದರು.

ಸಮಯ ನಿಗದಿ ಮಾಡಿ: ಇಲ್ಲವೆ ರಣಹೇಡಿಗಳೆಂದು ಒಪ್ಪಿಕೊಳ್ಳಿ

‘ಡಿಸಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಮೊದಲೇ ಕಾರ್ಯಕ್ರಮ ನಿಗದಿಯಾದ್ದರಿಂದ ಉಸ್ತುವಾರಿ ಜಿಲ್ಲೆಯ ಕಾರ್ಯಕ್ರಮಕ್ಕೆ ತೆರಳಿದೆ. ಆದರೆ ಶಾಸಕ ಶರತ್‌ ಬಚ್ಚೇಗೌಡರಿಗೆ ಅರ್ಧ ಗಂಟೆಯಲ್ಲ ಅರ್ಧ ದಿನ ಸಮಯ ಕೊಡ್ತೇನೆ. ಅವರೇ ಸ್ಥಳ ಹಾಗೂ ಸಮಯ ನಿಗದಿ ಮಾಡಲಿ. ಅವರ ಸಮಸ್ಯೆ ಏನಿದೆ ದಾಖಲೆ ಸಮೇತ ಬರಲಿ, ನಾವೂ ದಾಖಲೆ ಸಮೇತ ಬರುತ್ತೇವೆ. ಹೊಸಕೋಟೆ ನಗರದ ಜನತೆಯ ಮುಂದೆಯೇ ಚರ್ಚಿಸೋಣ, ಮೊದಲೆರಡು ಗಂಟೆ ಅವರೇ ಮಾತನಾಡಲಿ, ಬಳಿಕ ನಾನು ಮಾತನಾಡುತ್ತೇನೆ, ಮುಂದಿನ ಮೂರು ದಿನಗಳೊಳಗೆ ಸಮಯ ನಿಗದಿ ಮಾಡಲಿ, ಇಲ್ಲದಿದ್ದರೆ ಅವರೇ ರಣಹೇಡಿಗಳೆಂದು ಒಪ್ಪಿಕೊಳ್ಳಲಿ ಎಂದು ಪಂಥಾಹ್ವಾನ ನೀಡಿದರು.

ಭೂ ಕಬಳಿಕೆ ದಾಖಲೆ ಬಿಚ್ಚಿಟ್ಟಎಂಟಿಬಿ

ಸೂಲಿಬೆಲೆ ಹೋಬಳಿ ಶಾಂತನಪುರ ಸರ್ವೇ ನಂ.9 ರ 269 ಎಕರೆಯಲ್ಲಿ ಸುಮಾರು 500 ಕೋಟಿ ಮೌಲ್ಯದ ಜಮೀನನ್ನು ಬಚ್ಚೇಗೌಡರ ತೋಟದಲ್ಲಿ ಕೆಲಸ ಮಾಡುವಂತಹ 40 ಕುಟುಂಬಕ್ಕೆ 4 ಎಕರೆಯಂತೆ ಗ್ರಾಂಟ್‌ ಮಾಡಲಾಗಿದೆ. ಇದಾದ ಎರಡು ವರ್ಷಕ್ಕೇ ಬಚ್ಚೇಗೌಡ ಕುಟುಂಬದವರು ಅಷ್ಟೂಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಎಸಿಬಿ ತನಿಖೆ ನಡೆಸಿದಾಗ ಇವರ ಅಕ್ರಮ ಬಯಲಿಗೆ ಬಂದಿದೆ. ಇಲ್ಲೂ ಸಹ ಹೈಕೋರ್ಚ್‌ಗೆ ಹೋಗಿ ಎಸಿಬಿ ತನಿಖೆ ಆಗಬಾರದು ಎಂದು ಸ್ಟೇ ತಂದಿದ್ದಾರೆ. ಸ್ಟೇ ತರುವ ಬದಲು ಇದು ನಮ್ಮ ಜಮೀನು ಎಂದು ದಾಖಲೆ ನೀಡಿ ಸಾಬೀತು ಪಡೆಸಿಕೊಳ್ಳಬೇಕಿತ್ತು ಎಂದು ದೂರಿದರು. ಬಚ್ಚೇಗೌಡರ ಕುಟುಂಬದವರು ಹಾಗೂ ಅವರ ಹಿಂಬಾಲಕರು ಸರ್ಕಾರಿ ಜಮೀನುಗಳನ್ನು ಗುಳಂ ಮಾಡಿರುವುದು ನಮ್ಮ ಬಳಿ ದಾಖಲೆ ಇದೆ. ಸಮಯ ನೀಡಲಿ ಜನತಾ ನ್ಯಾಯಾಲಯದ ಮುಂದೆ ದಾಖಲೆ ಸಮೇತ ಇಡುತ್ತೇವೆ ಎಂದರು.

Follow Us:
Download App:
  • android
  • ios