ಹೊಸಕೋಟೆ(ನ.23): ತಾಲೂಕಿನ ತಿರುಮಲ ಶೆಟ್ಟಿಹಳ್ಳಿ ಬಳಿ ಇರುವ ಫ್ಲಿಪ್‌ಕಾರ್ಟ್‌ ಕಂಪನಿಯಿಂದ 250 ನೌಕರರನ್ನು ಏಕಾಏಕಿ ವಜಾಗೊಳಿಸಿದ ಹಿನ್ನೆಲೆ ನೌಕರರಿಗೆ ನ್ಯಾಯಕೊಡಿಸಲು ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ನೌಕರರ ಬೆನ್ನಿಗೆ ನಿಂತಿದ್ದಾರೆ.

ಕಂಪನಿ ಕೆಲಸದಿಂದ ಏಕಾಏಕಿ ವಜಾಗೊಳಿಸಿದ ಹಿನ್ನೆಲೆ ಎಂಟಿಬಿ ನಾಗರಾಜ್‌ ಅವರ ನೆರವು ಕೇಳಿದ ನೌಕರರಿಗೆ ನ್ಯಾಯ ಕೊಡಿಸಲು ಮುಂದಾಗಿರುವ ಅವರು ಕಂಪನಿ ಹಾಗೂ ಪೊಲೀಸರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಒಮ್ಮೆ ಈ ಕಂಪನಿ ನೌಕರರನ್ನು ವಜಾಗೊಳಿಸಿದ್ದ ಸಂಧರ್ಭದಲ್ಲಿ ನಾನೇ ಖುದ್ದಾಗಿ ಕಂಪನಿ ಬಳಿಗೆ ತೆರಳಿ ನ್ಯಾಯ ಒದಗಿಸಿದ್ದೆ. ಆದರೆ, ಈಗ ಮತ್ತೊಮ್ಮೆ ಕಂಪನಿ ಅದೇ ಖ್ಯಾತೆಯನ್ನು ತೆಗೆದಿದೆ. ಇವರು ಹಣ ಮಾಡಿಕೊಳ್ಳಲು ಸ್ಥಳೀಯ ರೈತರ ಭೂಮಿ ಬೇಕು. ಆದರೆ, ಸ್ಥಳೀಯ ರೈತರ ಮಕ್ಕಳಿಗೆ ಮಾತ್ರ ಕೆಲಸ ಕೊಡಲ್ಲ. ಈ ರೀತಿಯ ಧೋರಣೆಯನ್ನು ನಾನು ಎಂದಿಗೂ ಸಹಿಸಲ್ಲ. ಕಂಪನಿಯವರು ಕೂಡಲೆ ಎಚ್ಚೆತ್ತುಕೊಂಡು ನೌಕರರಿಗೆ ಕಾನೂನು ರೀತಿಯ ನ್ಯಾಯ ಕೊಡಬೇಕು. ಇಲ್ಲದಿದ್ದಲ್ಲಿ ಕಂಪನಿ ಮುಂದೆ ನಾನೇ ಪ್ರತಿಭಟನೆಗೆ ಕೂರತ್ತೇನೆ ಎಂದರು.

'ವಿಶ್ವನಾಥ, MTB ನಾಗರಾಜ್‌ ತ್ಯಾಗ ಮಾಡಿ ಬಂದವರು, ಇಬ್ಬರಿಗೂ ಸಚಿವ ಸ್ಥಾನ ಸಿಗಲಿ'

ಸಿಪಿಐಗೆ ತರಾಟೆ:

ಸಮಸ್ಯೆ ಬಗೆಹರಿಸಲು ತೆರಳಿದ್ದ ಸಿಪಿಐ ಕೆಂಪೇಗೌಡ ಅವರು ಕಂಪನಿಯವರಿಗೆ ಭದ್ರತೆ ಒದಗಿಸಿ, ನೌಕರರನ್ನು ಹೊರಗೆ ಕಳುಹಿಸಿದ್ದಾರೆ ಎಂದು ನೌಕರರು ದೂರು ನೀಡಿದ ಹಿನ್ನೆಲೆ ವೃತ್ತ ನಿರೀಕ್ಷಕರಿಗೆ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡ ಎಂಟಿಬಿ ನಾಗರಾಜ್‌, ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ ಅದನ್ನು ಬಿಟ್ಟು ಕಂಪನಿಯವರಿಗೆ ಭದ್ರತೆ ನೀಡಿದರೆ ಪೊಲೀಸರಿಗೆ ಗ್ರಹಾಚಾರ ಬಿಡಿಸುತ್ತೇನೆ. ಅನ್ಯಾಯವನ್ನು ನಾನು ಎಂದಿಗೂ ಸಹಿಸಲ್ಲ. ಕಂಪನಿ ಹಾಗೂ ಗುತ್ತಿಗೆದಾರರನ್ನು ಕರೆಯಿಸಿ ಕಾನೂನು ರೀತಿ ನೌಕರರಿಗೆ ಸಹಾಯ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.