Asianet Suvarna News Asianet Suvarna News

30ರಿಂದ ನಗರದಲ್ಲಿ ಮಾವು ಮೇಳ: ಲಾಲ್‌ಬಾಗ್‌, ಮೆಟ್ರೋ ನಿಲ್ದಾಣಗಳಲ್ಲಿ ಮಾರಾಟ

30ರಿಂದ ನಗರದಲ್ಲಿ ಮಾವು ಮೇಳ| ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್, ಮೆಟ್ರೋ ನಿಲ್ದಾಣಗಳಲ್ಲಿ ಮಾವು ಮಾರಾಟ| 

Msvu Mela a Special Mango Festival in Bengaluru City Starts From May 30th
Author
Bangalore, First Published May 14, 2019, 11:40 AM IST

ಬೆಂಗಳೂರು[ಮೇ.14]: ಹತ್ತಾರು ಬಗೆಯ, ರಾಸಾಯನಿಕ ಬಳಸದೇ ಸಹಜವಾಗಿ ಮಾಗಿದ, ಹಣ್ಣುಗಳ ರಾಜ ಮಾವಿನ ಹಣ್ಣನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ಜನರಿಗೆ ನೆರವಾಗಿ ಒದಗಿಸಲು ಮೇ 30ರಿಂದ ನಗರದ ವಿವಿಧ ಕಡೆಗಳಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆಮಂಡಳಿ ಮಾವು ಮೇಳ ಆಯೋಜಿಸಿದೆ.

ನಗರದ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್ ಹಾಗೂ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಮಾವು ಮಳಿಗೆಗಳನ್ನು ತೆರೆಯಲಾಗುವುದು. ಜೊತೆಗೆ ಎಲೆಕ್ಟ್ರಾನ್‌ ಸಿಟಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿನ ಐಟಿ ಕಂಪೆನಿಗಳಿಗೆ ಮಾವು ಮಳಿಗೆ ಪ್ರಾರಂಭಿಸುವಂತೆ ಮನವಿ ನೀಡುತ್ತಿವೆ. ರೈತರೊಂದಿಗೆ ಚರ್ಚೆ ನಡೆಸಿ ಬೇಡಿಕೆ ಇರುವಲ್ಲಿ ಮಳಿಗೆ ಪ್ರಾರಂಭಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ಸಿ.ಜೆ. ನಾಗರಾಜ್‌ ಹೇಳಿದರು.

ಪ್ರತಿದಿನ ದರ ಪರಿಷ್ಕರಣೆ:

ಮಾವಿನ ಹಣ್ಣುಗಳಿಗೆ ರಾಸಾಯನಿಕಗಳನ್ನು ಬಳಸಿ ಮಾಗಿಸಿದ ಹಣ್ಣುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಹಣ್ಣಿನ ಪ್ರಮಾಣ ಹಾಗೂ ಗುಣಮಟ್ಟದ ಆಧಾರದ ಮೇಲೆ ಎರಡು ದಿನಕ್ಕೊಮ್ಮೆ ದರ ನಿಗದಿ ಪಡಿಸಲು ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ತಡವಾಗಿ ಮೇಳ ಆಯೋಜನೆ:

ಸೇಂಧೂರ, ಬಾದಾಮಿ, ಆಂಧ್ರದ ಬೆನೆಷನ್‌ ಬಿಟ್ಟರೆ ಬೇರೆ ಹಣ್ಣುಗಳು ಇನ್ನೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಪ್ರಸಕ್ತ ವರ್ಷದ ಮಳೆಯ ಕೊರತೆಯಿಂದಾಗಿ ಈ ಬಾರಿ ಮಾವಿನ ಫಸಲು ತಡವಾಗಿ ಬಂದಿದೆ. ಆದೇ ಕಾರಣದಿಂದ ಮೇಳ ಆಯೋಜನೆ ವಿಳಂಬವಾಯಿತು. ಆದರೆ ರಾಮನಗರ ಭಾಗದಲ್ಲಿ ಈಗಾಗಲೇ ಉತ್ತಮ ಬೆಳೆ ಬಂದ ಪರಿಣಾಮ ಜಿಲ್ಲಾ ಮಟ್ಟದಲ್ಲೇ ಮೇಳಗಳನ್ನು ಮಾಡುತ್ತಿದ್ದಾರೆ. ಲಾಲ್‌ಬಾಗ್‌ನಲ್ಲಿ ನಡೆಯುವ ಮೇಳಕ್ಕೆ ಕೋಲಾರ ಮತ್ತಿತರ ಭಾಗಗಳ ಹಣ್ಣುಗಳು ಬರಬೇಕು. ನೀಲಂ, ತೋತಾಪುರಿ, ಮಲಗೋವಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ ಮತ್ತಿತರ ತಳಿಯ ಮಾವುಗಳು ಇದೀಗ ಆರಂಭವಾಗಿದೆ. ಮುಂದಿನ ವಾರದ ನಂತರ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲಿವೆ ಎಂದರು.

ಸಾವಿರ ಟನ್‌ ನಿರೀಕ್ಷೆ:

ಕಳೆದ ವರ್ಷ ಮಂಡಳಿಯಿಂದ ಆಯೋಜಿಸಿದ್ದ ಮೇಳದಲ್ಲಿ 950ಕ್ಕೂ ಹೆಚ್ಚು ಟನ್‌ ಮಾವು ಮಾರಾಟವಾಗಿತ್ತು. ಪ್ರಸಕ್ತ ವರ್ಷದಲ್ಲಿ ಲಾಲ್‌ಬಾಗ್‌ನಲ್ಲಿ 80 ಮಳಿಗೆಗಳು ಪ್ರಾರಂಭವಾಗುತ್ತಿವೆ. ಹೆಚ್ಚು ಮಳಿಗೆಗಳ ಪ್ರಾರಂಭಕ್ಕೆ ಬೇಡಿಕೆ ಬಂದಿದ್ದು, ಈ ವರ್ಷ ಸಾವಿರ ಟನ್‌ ಮಾವು ಮಾರಾಟವಾಗುವ ನಿರೀಕ್ಷೆಯಿದೆ ಎಂದು ನಾಗರಾಜ್‌ ಹೇಳಿದರು.

Follow Us:
Download App:
  • android
  • ios