ಕೇಂದ್ರ ಪುರಸ್ಕೃತ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸಂಸದ ಯದುವೀರ್ ಒಡೆಯರ್ ಅಧಿಕಾರಿಗಳಿಗೆ ಸೂಚನೆ!
ಸಮರ್ಪಕವಾಗಿ ಕಾಲಮಿತಿಯಲ್ಲಿ ಪ್ರಗತಿ ಸಾಧಿಸುವಂತೆ ಕೊಡಗು-ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜು.12): ಜಲಜೀವನ್ ಮಿಷನ್, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಪ್ರಧಾನಮಂತ್ರಿ ಆವಾಜ್ ಯೋಜನೆ, ಸ್ವಚ್ಛ ಭಾರತ್ ಮಿಷನ್, ಎನ್ಆರ್ಎಲ್ಎಂ, ಸಂಜೀವಿನಿ, ಲೀಡ್ ಬ್ಯಾಂಕ್ ವತಿಯಿಂದ ಹಲವು ಕಾರ್ಯಕ್ರಮಗಳು ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳು ವಿವಿಧ ಇಲಾಖೆಗಳಲ್ಲಿ ಜಾರಿಗೊಂಡಿದ್ದು, ಇವುಗಳನ್ನು ಸಮರ್ಪಕವಾಗಿ ಕಾಲಮಿತಿಯಲ್ಲಿ ಪ್ರಗತಿ ಸಾಧಿಸುವಂತೆ ಕೊಡಗು-ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಪ್ರತೀ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕು. ನದಿ ಮೂಲ ಸೇರಿದಂತೆ ಮತ್ತಿತರ ಜಲ ಮೂಲಗಳಿಂದ ಕಡ್ಡಾಯವಾಗಿ ನಲ್ಲಿ ನೀರು ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು, ಒಂಟಿಯಂಗಡಿ ಮತ್ತಿತರ ಕಡೆಗಳಲ್ಲಿ ನಲ್ಲಿ ನೀರು ಸಂಪರ್ಕ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ ಎಂದು ದೂರಿದರು. ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಎಂಜಿನಿಯರ್ಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು.
ಡೆಂಗ್ಯೂ ಜ್ವರದಿಂದ ತತ್ತರಿಸಿರುವ ಚಿಕ್ಕಮಗಳೂರಿನಲ್ಲಿ ವೈರಲ್ ಫೀವರ್: ಇದು ಹೇಗೆ ಸಾಧ್ಯ ಅನ್ನೋದು ಯಕ್ಷಪ್ರಶ್ನೆ
ಅದನ್ನು ಬಿಟ್ಟು ಸ್ಥಳಕ್ಕೆ ಭೇಟಿ ನೀಡದೆ ಮಾಹಿತಿ ನೀಡುವುದು ಸರಿಯಿಲ್ಲ ಎಂದು ಸುಜಾಕುಶಾಲಪ್ಪ ಅವರು ತಾಕೀತು ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಸ್ತೆ ಬದಿ ಗಿಡಗಂಟೆಗಳು ಬೆಳೆದಿದೆ. ವಿರಾಜಪೇಟೆ-ಮಾಕುಟ್ಟ, ಬಾಳೆಲೆ-ಕಾರ್ಮಾಡು ರಸ್ತೆ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳು ಗುಂಡಿಮಯವಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಜೊತೆಗೆ ಮರದ ದಿಮ್ಮಿಗಳನ್ನು ರಸ್ತೆ ಬದಿಯೇ ಇಟ್ಟುಕೊಂಡು ಸಾಗಿಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿಯೇ ಒತ್ತಾಯಿಸಿದರು.
ರಸ್ತೆ ಬದಿ ಬೆಳೆದಿರುವ ಗಿಡಗಂಟೆಗಳನ್ನು ಕಡಿಯಬೇಕು. ಜೊತೆಗೆ ಗುಂಡಿಯನ್ನು ಮುಚ್ಚುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳಿಗೆ ಸೂಚನೆ ನೀಡಿದರು. ಟಿಂಬರ್ ಲಾರಿಗಳು ರಾಜಾರೋಷವಾಗಿ ರಸ್ತೆ ಬದಿ ನಿಲ್ಲಿಸಿಕೊಂಡು ಓಡಾಡುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮವಹಿಸುತ್ತಿಲ್ಲ ಎಂದು ಸುಜಾಕುಶಾಲಪ್ಪ ಅವರು ಸಿಟ್ಟಾದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಈ ಹಿಂದೆಯೇ ಮರದ ದಿಮ್ಮಿಗಳನ್ನು ಕಟಾವಣೆ ಮಾಡುವವರು ಸಣ್ಣ ವಾಹನಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಭಾಗಮಂಡಲ-ಕರಿಕೆ ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದ ಸಂಸದರು, ಈ ಮಾರ್ಗದ ರಸ್ತೆಯನ್ನು ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗೆ ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಇಇ ಸಿದ್ದೇಗೌಡ ಅವರು ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ ಅಭಿವೃದ್ಧಿಗಾಗಿ 12 ಕೋಟಿ ರೂ. ಅನುಮೋದನೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು. ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು-ಕುಶಾಲನಗರ ಚತುಷ್ಪಥ ರಸ್ತೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿ ಮಾತನಾಡಿ ಈ ಯೋಜನೆ ಯಾವ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದರು.
ಬಿಜೆಪಿಗರು ಸುಳ್ಳಿನ ಪಿತಾಮಹರು, ಅವರ ತಲೆಯಲ್ಲಿ ಮಿದುಳು ಇಲ್ಲ: ಸಚಿವ ರಾಮಲಿಂಗಾರೆಡ್ಡಿ
ಈ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭೂಸ್ವಾಧೀನ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದ್ದು, ಕೆಲವು ಪ್ರಕರಣಕ್ಕೆ ಪರಿಹಾರ ವಿತರಣೆಗೆ ಬಾಕಿ ಇದೆ. ಅರಣ್ಯ ಇಲಾಖೆಯಿಂದ ಅನುಮತಿ ಸಹ ದೊರೆಯಬೇಕಿದೆ ಎಂದು ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ವತಿಯಿಂದ 63 ಹೊಸ ಟವರ್ಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಇದರಲ್ಲಿ 30 ಕ್ಕೂ ಹೆಚ್ಚು ಟವರ್ ನಿರ್ಮಾಣ ಮಾಡಲಾಗಿದೆ. ನಾಗರಹೊಳೆ ಸೇರಿದಂತೆ ವಿವಿಧ ಪ್ರದೇಶ ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ ಬಾಕಿ ಇದೆ ಎಂದು ಬಿಎಸ್ಎನ್ಎಲ್ ವ್ಯವಸ್ಥಾಪಕರು ಮಾಹಿತಿ ನೀಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಇದ್ದರು.