ಕೊರೋನಾ ವ್ಯಾಕ್ಸಿನ್ ಬಗ್ಗೆ ಭಯಬೇಡ: ಸಂಸದ ಜಾಧವ್
ಲಸಿಕೆ ತಯಾರಿಸುವಲ್ಲಿ ಶ್ರಮಿಸಿದ ಎಲ್ಲ ವಿಜ್ಞಾನಿಗಳು, ವೈದ್ಯರು ಹಾಗೂ ಲಸಿಕೆ ಶೀಘ್ರವೇ ಲಭ್ಯವಾಗುವಂತೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ| ಕೊರೋನಾ ಲಸಿಕೆ ಬಂದಿರುವುದು ಜಿಲ್ಲೆಗೆ ಸಡಗರ ತಂದಿದೆ| ಈ ಲಸಿಕೆ ಮೊದಲು ವೈದ್ಯ ಸಿಬ್ಬಂದಿಗೆ ನೀಡಿ, ಬಳಿಕ ಕೆಲ ದಿನಗಳ ನಂತರದಲ್ಲಿ ಎಲ್ಲರಿಗೂ ಲಭ್ಯ|
ಕಲಬುರಗಿ(ಜ.17): ನೂರಕ್ಕೆ ನೂರರಷ್ಟು ಕೊರೋನಾ ಲಸಿಕೆ ಯಶಸ್ವಿಯಾಗುತ್ತದೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರು ವಿಶ್ವಾಸದಿಂದ ನುಡಿದರು.
ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಶನಿವಾರ ಕಲಬುರಗಿಯ ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಲಸಿಕೆ ತಯಾರಿಸುವಲ್ಲಿ ಶ್ರಮಿಸಿದ ಎಲ್ಲ ವಿಜ್ಞಾನಿಗಳು, ವೈದ್ಯರು ಹಾಗೂ ಲಸಿಕೆ ಶೀಘ್ರವೇ ಲಭ್ಯವಾಗುವಂತೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆ..!
ಕೊರೋನಾ ಲಸಿಕೆ ಯಾವಾಗ ಬರುತ್ತೆ ಎಂದು ಜಿಲ್ಲೆಯ ಜನರೂ ಕಾಯುತ್ತಿದ್ದರು. ಇದೀಗ ಲಸಿಕೆ ಬಂದಿರುವುದು ಜಿಲ್ಲೆಗೆ ಸಡಗರ ತಂದಿದೆ ಎಂದರು. ಈ ಲಸಿಕೆ ಮೊದಲು ವೈದ್ಯ ಸಿಬ್ಬಂದಿಗೆ ನೀಡಿ , ಬಳಿಕ ಕೆಲ ದಿನಗಳ ನಂತರದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.
ಲಸಿಕೆ ಪಡೆಯುವುದರಿಂದ ಸಣ್ಣ-ಪುಟ್ಟಅಡ್ಡಪರಿಣಾಮಗಳು ಆಗಬಹುದು. ಇದರಿಂದ ಯಾರೂ ಭಯಪಡಬೇಕಾಗಿಲ್ಲ. ಲಸಿಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಅಲ್ಲದೇ, ಈ ವರೆಗೂ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಿದ ಮಾಧ್ಯಮ ಸಿಬ್ಬಂದಿ ಬಗ್ಗೆಯೂ ಈ ಸಂದರ್ಭದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಕೆಆರ್‌ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ್ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮತ್ತಿತರರು ಇದ್ದರು.