ವಿಜಯಪುರ(ಡಿ.25): ತಾಲೂಕಿನ ಶಿವಣಗಿ ಗ್ರಾಮದ ಬಳಿ ಸರ್ಕಾರಿ ಬಸ್‌ ಹಾಗೂ ಓಮಿನಿ ವಾಹನ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಿ ಆಸ್ಪತ್ರೆಗೆ ಸೇರಿಸುವ ಮೂಲಕ ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ ಜಾಧವ್‌ ಮಾನವೀಯತೆ ಮೆರೆದಿದ್ದಾರೆ.

ವಿಜಯಪುರ ತಾಲೂಕಿನ ಶಿವಣಗಿ ಬಳಿ ರಾಷ್ಟ್ರೀಯ ಹೆದ್ದಾರಿ- 218ರಲ್ಲಿ ಓಮಿನಿ ವಾಹನಕ್ಕೆ ಸರ್ಕಾರಿ ಬಸ್‌ ಡಿಕ್ಕಿಯಾದ ಪರಿಣಾಮ ಓಮಿನಿ ವಾಹನದಲ್ಲಿದ್ದ ಐವರು ಗಾಯಗೊಂಡಿದ್ದರು. ಅದೇ ಸಮಯದಲ್ಲಿ ಕಲಬುರಗಿ ಸಂಸದ ಉಮೇಶ ಜಾಧವ್‌ ಕಲಬುರಗಿಯಿಂದ ವಿಜಯಪುರ ಕಡೆಗೆ ಬರುತ್ತಿದ್ದರು. ಕಣ್ಣೆದುರಿನಲ್ಲೇ ಅಪಘಾತ ಸಂಭವಿಸಿ ಜನರು ಗೋಳಾಡುತ್ತಿರುವುದನ್ನು ಕಂಡು ಮರುಗಿ ತಮ್ಮ ವಾಹನದಿಂದ ಕೆಳಗಿಳಿದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. 

 

ಕುಡಿದ ಅಮಲಿನಲ್ಲೇ 40 ಕಿಮೀ ಸಾರಿಗೆ ಬಸ್‌ ಚಾಲನೆ..!

ಕೂಡಲೇ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಗಾಯಗೊಂಡರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲದೇ, ಓಮಿನಿ ವಾಹನದಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಹೊರಗಡೆ ತೆಗೆದು ಪ್ರಾಣ ರಕ್ಷಣೆ ಮಾಡಿದ್ದಾರೆ. ನಂತರ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.