ಹೊಯ್ಸಳ ಫೌಂಡೇಷನ್‌ ಡಯಾಲಿಸಿಸ್‌ ಕೇಂದ್ರದಲ್ಲಿ ನಾಮ​ಫ​ಲಕ ಉದ್ಘಾ​ಟನೆ, ಶ್ರೀ ಶಾರದಮ್ಮ, ಶ್ರೀ ಮೋಟಾರ್‌ ಮಂಜಪ್ಪ ಸ್ಮಾರಕ ಡಯಾಲಿಸಿಸ್‌ ವಿಭಾಗದ ನಾಮಫಲಕ. ಜ.12ರಂದು ಬೆಂಗ​ಳೂ​ರಲ್ಲಿ ಗುಜ​ರಾತ್‌ ಮಾದರಿ ಡಯಾ​ಲಿ​ಸಿಸ್‌ ಆಸ್ಪತ್ರೆ ಉದ್ಘಾ​ಟ​ನೆ: ಸಂಸದ ತೇಜಸ್ವಿ ಸೂರ್ಯ 

ಶಿವಮೊಗ್ಗ(ಜ.09):  ಕೆಲವರು 80ರ ವಯಸ್ಸಿನಲ್ಲೂ 18ರ ತರುಣರಂತೆ ಉತ್ಸಾಹದಿಂದ ಓಡಾಡುತ್ತಾರೆ. ಮತ್ತೆ ಕೆಲ​ವ​ರು 18ರ ಯುವಕರು ಮುದುಕರಿಗಿಂತ ನಿರುತ್ಸಾಹಿಗಳಾಗಿರುತ್ತಾರೆ. ವೇಣುಗೋಪಾಲ್‌ ಅವರು ಇಳಿವಯಸ್ಸಿನಲ್ಲಿಯೂ ಹೊಯ್ಸಳ ಫೌಂಡೇಷನ್‌ ಡಯಾಲಿಸಿಸ್‌ ಕೇಂದ್ರಕ್ಕೆ 35 ಲಕ್ಷ ಶಾಶ್ವತ ನಿಧಿ ನೀಡಿ, ನಮ್ಮಲ್ಲಿ ಉತ್ಸಾಹ ತುಂಬಿದ್ದಾರೆ ಎಂದು ದಕ್ಷಿಣ ಬೆಂಗಳೂರು ಲೋಕ​ಸಭಾ ಕ್ಷೇತ್ರ ಸದಸ್ಯ ತೇಜಸ್ವಿ ಸೂರ್ಯ ಹೇಳಿದರು.

ಇಲ್ಲಿನ ಕುವೆಂಪು ನಗರದಲ್ಲಿರುವ ಹೊಯ್ಸಳ ಫೌಂಡೇಷನ್‌ ಡಯಾಲಿಸಿಸ್‌ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಾರದಮ್ಮ ಮತ್ತು ಶ್ರೀ ಮೋಟಾರ್‌ ಮಂಜಪ್ಪ ಸ್ಮಾರಕ ಡಯಾಲಿಸಿಸ್‌ ವಿಭಾಗದ ನಾಮಫಲಕ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.

ಗುಜರಾತ್‌ನಲ್ಲಿ ಪ್ರಧಾನಿ 550 ಬೆಡ್‌ನ ಉಚಿತ ಡಯಾಲಿಸಿಸ್‌ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ. ನಾನು ಕೂಡ ಗುಜರಾತ್‌ಗೆ ಹೋಗಿ ವ್ಯವಸ್ಥೆ ನೋಡಿ ಬಂದಿದ್ದೇನೆ. ಅದೇ ಮಾದರಿಯಲ್ಲಿ ಬೆಂಗಳೂರು ದಕ್ಚಿಣ ಕ್ಷೇತ್ರದಲ್ಲಿ ಸಂಸದರ ಅನುದಾನದಲ್ಲಿ ಕೆಎಸ್‌ಆರ್‌ಟಿಸಿಗೆ ಸೇರಿದ ಹಳೆಯ ಕಟ್ಟಡವನ್ನು ನವೀಕರಣ ಮಾಡಿ, ಡಯಾಲಿಸಿಸ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಇದು ಜ.12ಕ್ಕೆ ಉದ್ಘಾಟನೆ ಆಗಲಿದೆ. ಇಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ. ಇಲ್ಲಿ ಯಾವುದೇ ಬಿಲ್ಕಿಂಗ್‌ ಡೆಸ್‌್ಕ ಇರುವುದಿಲ್ಲ ಎಂದು ಹೇಳಿದರು.

SHIVAMOGGA NEWS: ಮರಗಳ ಮಾರಣಹೋಮ: ಗ್ರಾಮಸ್ಥರಲ್ಲಿ ಹೊತ್ತಿದ ಹೋರಾಟದ ಕಿಚ್ಚು

ನನ್ನ ಈ ಕಾರ್ಯಕ್ಕೆ ಶಿವಮೊಗ್ಗದ ಕೇಂದ್ರವೂ ಪ್ರೇರಣೆ ಆಗಿದೆ. ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಉತ್ಸಾಹದಿಂದ ಇರುತ್ತೇವೆ. ಹೃದಯ ವೈಶಾಲ್ಯತೆಯ ಕಾರ್ಯಕ್ರಮ, ಸಣ್ಣ ಕಾರ್ಯಕ್ರಮ ಎಂದು ಅನಿಸಬಹುದು ಸಂಖ್ಯೆಯಲ್ಲಿ ಸಣ್ಣದಾದರೂ ಮೌಲ್ಯದಲ್ಲಿ ದೊಡ್ಡ ಕಾರ್ಯಕ್ರಮ. ತುಂಬ ಜನರಿಗೆ ದಾನ ಮಾಡುವ ಮನಸ್ಸಿರುತ್ತದೆ. ಆದರೆ, ಅದರ ಅವಶ್ಯಕತೆ ಇರುವವರಿಗೆ ತಲುಪಿಸುವಲ್ಲಿ ಹಿನ್ನಡೆಯಾಗಿದೆ ಎಂದರು.

ಹೊಯ್ಸಳ ಫೌಂಡೇಷನ್‌ ಅನೇಕ ಸಮಾಜ ಮುಖಿ ಕೆಲಸ ಮಾಡುತ್ತಿದೆ. ಕೊರೋನಾ ಸಂದರ್ಭದಲ್ಲೂ ಮೆಗ್ಗಾನ್‌ ಆಸ್ಪತ್ರೆಯ ಡಯಾಲಿಸಿಸ್‌ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದೆ. ಡಯಾಲಿಸಿಸ್‌ ಸಮಸ್ಯೆ ಆರ್ಥಿಕವಾಗಿ ಹಿಂದುಳಿದವರಿಗೆ ಯಾಕೆ ಕಾಡುತ್ತಿದೆ ಎಂಬುದೇ ಪ್ರಶ್ನೆಯಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಈ ಕಾಯಿಲೆ ಬಂದಾಗ ಶರೀರಿಕವಾಗಿಯೂ ಆರ್ಥಿಕವಾಗಿಯೂ ಜರ್ಜರಿತರಾಗುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಯ್ಸಳ ಫೌಂಡೇಷನ್‌ ಅಧ್ಯಕ್ಷ ಎಂ.ಶಂಕರ್‌, ಜಿಲ್ಲಾ ಬ್ರಾಹ್ಮಣ ಮಹಾಸಭಾದ ನಟರಾಜ್‌ ಭಾಗವತ್‌, ಹೊಯ್ಸಳ ಬ್ರಾಹ್ಮಣ ಸಂಘದ ಪ್ರಭಾಕರ್‌, ಹೊಯ್ಸಳ ಫೌಂಡೇಷನ್‌ ಗೌರವಾಧ್ಯಕ್ಷ ಹಾಗೂ ಶಾಶ್ವತ ನಿಧಿ ದಾನಿಗಳಾದ ಎಂ.ವೇಣುಗೋಪಾಲ್‌, ಪತ್ನಿ ಶ್ರೀದೇವಿ ವೇಣುಗೋಪಾಲ್‌, ಡಾ.ರಾಮಕೃಷ್ಣ, ಡಾ.ಸ್ವರ್ಣ ರಾಮಕೃಷ್ಣ, ಸಂಸ್ಥೆಯ ಮೆಡಿಕಲ್‌ ಆಫೀಸರ್‌ ಕೇಶವಮೂರ್ತಿ ಮತ್ತಿತರರು ಇದ್ದರು.