Mandya : ಸಂಸದೆ ಸುಮಲತಾ ಭಾವಚಿತ್ರ ತೆರವು

ಬಿಜೆಪಿ ಪಕ್ಷಕ್ಕೆ ಸಂಸದೆ ಸುಮಲತಾ ಬಾಹ್ಯ ಬೆಂಬಲ ಘೋಷಣೆ ಮಾಡಿದ ಬೆನ್ನಲ್ಲೇ ತಾಲೂಕಿನ ಬಿದರಕೆರೆ ಗ್ರಾಮದ ಪಿ.ಲಂಕೇಶ್‌ ಬಯಲು ರಂಗಮಂದಿರದಲ್ಲಿದ್ದ ಸುಮಲತಾ ಭಾವಚಿತ್ರವನ್ನು ಗ್ರಾಮದ ಯುವಕರು ತೆರವುಗೊಳಿಸಿದ ಘಟನೆ ನಡೆದಿದೆ.

MP Sumalathas portrait Removed From Rangamandir snr

  ನಾಗಮಂಗಲ :  ಬಿಜೆಪಿ ಪಕ್ಷಕ್ಕೆ ಸಂಸದೆ ಸುಮಲತಾ ಬಾಹ್ಯ ಬೆಂಬಲ ಘೋಷಣೆ ಮಾಡಿದ ಬೆನ್ನಲ್ಲೇ ತಾಲೂಕಿನ ಬಿದರಕೆರೆ ಗ್ರಾಮದ ಪಿ.ಲಂಕೇಶ್‌ ಬಯಲು ರಂಗಮಂದಿರದಲ್ಲಿದ್ದ ಸುಮಲತಾ ಭಾವಚಿತ್ರವನ್ನು ಗ್ರಾಮದ ಯುವಕರು ತೆರವುಗೊಳಿಸಿದ ಘಟನೆ ನಡೆದಿದೆ.

ಗ್ರಾಮದಲ್ಲಿ ಹಿರಿಯ ನಟ ದಿ.ಅಂಬರೀಶ್‌ ಲೋಕಸಭಾ ಸದಸ್ಯರ ಕ್ಷೇತ್ರಾಭಿವೃದ್ಧಿಯ ನಿಧಿಯಿಂದ ಅಂಕಣಕಾರ ಹಾಗೂ ಸಾಹಿತಿ ಬಿ.ಚಂದ್ರೇಗೌಡರು ತಮ್ಮೂರಿಗೆ ಅಂಬರೀಶ್‌ ಮನವೊಲಿಸಿ ಅವರ ಅನುದಾನದಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಿಸಿದ್ದರು. ಅಲ್ಲದೇ, ಅದಕ್ಕೆ ಪಿ.ಲಂಕೇಶ್‌ ಹೆಸರಿಟ್ಟು ಅವರ ಪುತ್ರಿಯಿಂದ ಉದ್ಘಾಟನೆ ಮಾಡಿಸಿದರು.

ತದ ನಂತರ ಮಂಡ್ಯ ಸಂಸದೆ ಸುಮಲತಾ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಅಭ್ಯರ್ಥಿಯಾಗುತ್ತಿದಂತೆ ಇದೇ ಗ್ರಾಮದ ಯುವಕರು ಸುಮಲತಾ ಅವರನ್ನು ಗ್ರಾಮಕ್ಕೆ ಕರೆಸಿ ಗ್ರಾಮದ ಮುಖಂಡರನ್ನು ಒಗ್ಗೂಡಿಸಿ ಅವರ ಸ್ವಾಭಿಮಾನಿ ಬಣಕ್ಕೆ ಬೆಂಬಲ ವ್ಯಕ್ತಪಡಿಸಿ ಅಭಿಮಾನ ತೋರಿದ್ದರು. ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸುತ್ತಿದಂತೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ಸುಮಲತಾ ಅವರ ಭಾವಚಿತ್ರವನ್ನು ಬಯಲು ರಂಗಮಂದಿರದಲ್ಲಿ ಎಲ್ಲ ಸಾಹಿತಿ, ಗಣ್ಯರ ಜತೆ ಅಳವಡಿಸಿದ್ದರು.

ಆದರೆ, ಸುಮಲತಾ ಅಂಬರೀಶ್‌ ಸ್ವಾಭಿಮಾನಿ ಬಣ ಬಿಟ್ಟು ತಾವು ಬಿಜೆಪಿ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ ಬಳಿಕ ಬಿದರಕೆರೆ ಗ್ರಾಮದ ಯುವಕರು ಸಂಸದರ ಮೇಲೆ ಅಕ್ರೋಶ ವ್ಯಕ್ತಪಡಿಸಿ ಅವರ ಭಾವಚಿತ್ರವನ್ನು ರಂಗಮಂದಿರದಿಂದ ತೆಗೆದು ಹಾಕಿರುವುದು ರಾಜಕೀಯ ಪಡಸಾಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ರಂಗಮಂದಿರದಲ್ಲಿ ಭೈರವೈಕ್ಯಶ್ರೀ ಬಾಲಗಂಗಾಧರನಾಥಸ್ವಾಮೀಜಿ, ಪಿ.ಲಂಕೇಶ್‌ ಸೇರಿದಂತೆ ನಾಡಿನ ಶ್ರೇಷ್ಠ ಸಾಹಿತಿಗಳು, ಮುಖ್ಯಮಂತ್ರಿಗಳು, ಡಾ.ರಾಜ್‌ಕುಮಾರ್‌, ಹಿರಿಯ ನಟ ದಿ.ಅಂಬರೀಶ್‌ ಭಾವಚಿತ್ರಗಳ ಜೊತೆಗೆ ಡಾ.ಅಂಬೇಡ್ಕರ್‌, ಭಕ್ತ ಕನಕದಾಸರ ಭಾವಚಿತ್ರಗಳೂ ಸಹ ಈ ರಂಗಮಂದಿರದಲ್ಲಿವೆ. ಗ್ರಾಮದ ಯುವಕರು ಸುಮಲತಾ ಭಾವಚಿತ್ರವನ್ನು ಮಾತ್ರ ತೆಗೆದಿದ್ದಾರೆ.

ಅಂಬರೀಶ್‌ ಸಂಸದರಾಗಿದ್ದ ಅವಧಿಯಲ್ಲಿ ಅವರ ಅನುದಾನದಿಂದ ಬಯಲು ರಂಗಮಂದಿರ ನಿರ್ಮಾಣ ಮಾಡಿ ಅದಕ್ಕೆ ಪಿ.ಲಂಕೇಶ್‌ ಹೆಸರಿಡಲಾಗಿತ್ತು. ಜೊತೆಗೆ ಹಲವು ಗಣ್ಯರ ಭಾವಚಿತ್ರವನ್ನು ಅವಳಡಿಸಲಾಗಿತ್ತು. ಸುಮಲತಾ ಅವರು ಚುನಾವಣೆಗೆ ನಿಂತಾಗ ಅವರಿಗೆ ಅಭಿಮಾನ ತೋರಿ ಅವರ ಭಾವಚಿತ್ರವನ್ನು ಹಾಕಲಾಗಿತ್ತು. ಆದರೆ, ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೆ ಯುವಕರು ಅಕ್ರೋಶಗೊಂಡು ನಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಭಾವಚಿತ್ರವನ್ನು ತೆರವುಗೊಳಿಸಿದ್ದಾರೆ.

-ಬಿ.ಚಂದ್ರೇಗೌಡ, ಅಂಕಣಕಾರ ಹಾಗೂ ಸಾಹಿತಿ, ಬಿದರಕೆರೆ

ಸುಮಲತಾ ಬೆಂಬಲದಿಂದ ಬಿಜೆಪಿಗೆ ಶಕ್ತಿ

ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಮಂಡ್ಯದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊದಲಿನಿಂದಲೂ ಸುಮಲತಾ ಅವರು ಪ್ರಧಾನಿ ಮೋದಿಯವರ ಕಾರ್ಯಕ್ರಮ ಬೆಂಬಲಿಸುತ್ತಾ ಬಂದಿದ್ದರು. ಹೀಗಾಗಿ ಅವರ ಕ್ಷೇತ್ರ ಹಾಗೂ ರಾಜ್ಯಕ್ಕೆ ಕೇಂದ್ರ ಸರ್ಕಾರದ ರೈಲ್ವೆ, ಹೆದ್ದಾರಿಗಳು, ರಸ್ತೆಗಳು ಹಾಗೂ ಮಹಿಳೆಯರಿಗೆ, ರೈತರಿಗೆ, ಜನಸಾಮಾನ್ಯರಿಗೆ ನೀಡಿದ ಕಾರ್ಯಕ್ರಮಗಳಿಗೆ ಲೋಕಸಭೆಯಲ್ಲಿ ಅವರು ಬೆಂಬಲ ನೀಡುತ್ತಿದ್ದರು. 

ಈಗ ಅವರು ಬಹಿರಂಗವಾಗಿ ಬಿಜೆಪಿಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ಸುಮಲತಾ ಅವರ ನಡೆಯನ್ನು ನಾನು ಸ್ವಾಗತಿಸುತ್ತೇನೆ ಎಂದರು. ಇದೇ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಕೂಡ ಸುಮಲತಾ ನಡೆಯನ್ನು ಸ್ವಾಗತಿಸಿದ್ದಾರೆ. ಸುಮಲತಾ ಅವರ ಬಿಜೆಪಿ ಸೇರ್ಪಡೆಗೆ ಕಾನೂನು ತೊಡಕುಗಳಿವೆ. ಅವರು ಪಕ್ಷಕ್ಕೆ ಬೆಂಬಲ ಘೋಷಿಸಿದ್ದನ್ನು ಸ್ವಾಗತಿಸುತ್ತೇನೆ. ಅವರ ಬೆಂಬಲದಿಂದ ಪಕ್ಷಕ್ಕೆ ಮಂಡ್ಯದಲ್ಲಿ ದೊಡ್ಡ ಶಕ್ತಿ ಬಂದಂತಾಗಲಿದೆ. ಅನೇಕ ದಿನಗಳಿಂದ ನಾವು ಈ ಬೆಳವಣಿಗೆ ಎದುರು ನೋಡುತ್ತಿದ್ದೆವು ಎಂದು ತಿಳಿಸಿದರು.

Latest Videos
Follow Us:
Download App:
  • android
  • ios