ಮೈಸೂರು(ನ.27):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ. ಪಂಚೆಯನ್ನು ಹುಷಾರಾಗಿ ತೆಗಿಯಬೇಕು. ನಿಗಮ ಮಂಡಳಿ ಆಯ್ಕೆ ವಿಚಾರದಲ್ಲಿ ನನಗೆ ಅತೃಪ್ತಿ ಇದೆ ಎಂದು ಬಿಜೆಪಿ ಸಂಸದ, ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಕೆಲವೊಮ್ಮೆ ಎಲ್ಲರನ್ನು ಬದಲಾವಣೆ ಮಾಡಿಸಿ ಬಿಡುತ್ತದೆ. ಮುಖ್ಯಮಂತ್ರಿ ಹಿಂದಿಗಿಂತ ಬದಲಾಗಿದ್ದಾರೆ ಅಂತಾನೂ ಹೇಳೋಕಾಗೋಲ್ಲ. ಬದಲಾಗಿಲ್ಲ ಅಂತಾನೂ ಹೇಳೋಕಾಗೋಲ್ಲ. ಮುಖ್ಯಮಂತ್ರಿ ಸ್ಥಾನ ಅಂದುಕೊಂಡಷ್ಟು ಸುಲಭವೂ ಅಲ್ಲ. ಅಧಿಕಾರ ನಡೆಸೋದು ಬಹಳ ಕಠಿಣ ಕೆಲಸ ಎಂದರು.

ವಿಜಯನಗರ ಪ್ರತ್ಯೇಕ ಜಿಲ್ಲೆ ಕಂಪಲ್ಸರಿ ಆಗಲೇಬೇಕು: ಸಚಿವ ಶ್ರೀರಾಮುಲು

ನಿಗಮ ಮಂಡಳಿ ಆಯ್ಕೆ ವಿಚಾರದಲ್ಲಿ ನನಗೆ ಅತೃಪ್ತಿ ಇದೆ. ಇನ್ನು ಉತ್ತಮವಾಗಿ ನೇಮಕಾತಿ ಮಾಡಬಹುದಿತ್ತು. ಎಲ್ಲರ ಸಲಹೆ ಪಡೆದು ಮಾಡಬಹುದಿತ್ತು ಅನ್ನೋದು ನನ್ನ ಅಭಿಪ್ರಾಯ. ಮುಖ್ಯಮಂತಿಗಳಿಗೆ ಕಾರ್ಯದೊತ್ತಡ ಇದ್ದೇ ಇರುತ್ತೆ, ಆದರೆ, ಯಡಿಯೂರಪ್ಪ ಅವರಿಗೆ ಬುದ್ಧಿವಂತಿಕೆ, ತಾಳ್ಮೆ ಬೇಕು. ಸಿದ್ದರಾಮಯ್ಯಗೆ ಬುದ್ಧಿವಂತಿಕೆ ಇರಲಿಲ್ಲ. ಹಾಗಾಗಿ ಅಧಿಕಾರ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.