'ಸಿದ್ದರಾಮಯ್ಯ ಶಾಲಾ ಮಕ್ಕಳಲ್ಲೂ ಜಾತೀಯತೆಯ ವಿಷಬೀಜ ಬಿತ್ತಿದ್ದರು'

ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ| ರಾಜ್ಯ​ದಲ್ಲಿ ಸ್ಥಿರ ಸರ್ಕಾರ ಖಚಿತ: ಸಂಸದೆ ಶೋಭಾ ಕರದ್ಲಾಂಜೆ ವಿಶ್ವಾಸ| ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸಲಾಗಿದೆ| ಸೋತರೆ ಅವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಪಕ್ಷದ ಹೈಕಮಾಂಡ್‌ ತೀರ್ಮಾನಿಸಲಿದೆ| 

MP Shobha Karandlaje Talks Over Former CM Siddaramaiah

ವಿಜಯಪುರ(ಡಿ.08): ಉಪಚುನಾವಣೆ ಫಲಿತಾಂಶ ಕೆಲವೇ ಗಂಟೆ ಬಾಕಿ ಇದೆ. ಈ ಚುನಾವಣೆಯಲ್ಲಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತ ಪಡೆಯುವ ಭರವಸೆಯಿದ್ದು, ರಾಜ್ಯದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರಬೇಕು ಎಂಬುದು ಜನತೆಯ ಆಶಯವಾಗಿತ್ತು. ರಾಜ್ಯದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವದಲ್ಲಿರಬೇಕು ಎಂಬುದು ರಾಜ್ಯದ ಜನತೆಯ ಅಪೇಕ್ಷೆಯೂ ಆಗಿದೆ. ಈ ಉಪಚುನಾವಣೆಯಲ್ಲಿ ಖಂಡಿತವಾಗಿಯೂ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ. ಬಿಜೆಪಿ ಸರ್ಕಾರ ಮೂರೂವರೇ ವರ್ಷಗಳ ತನ್ನ ಅವಧಿ ಪೂರ್ಣಗೊಳಿಸಲಿದೆ ಎಂದು ಹೇಳಿದರು.

ಸಿದ್ದ​ರಾ​ಮಯ್ಯ ಹೋಗಿ​ಲ್ಲ:

ಈ ಹಿಂದೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಪಕ್ಷದ ಸರ್ಕಾರವೇ ಕೇಂದ್ರದಲ್ಲಿದ್ದ ಕಾರಣದಿಂದಾಗಿ ರೈಲ್ವೆ, ನೀರಾವರಿ ಯೋಜನೆಗಳಲ್ಲಿ ಸಿಂಹಪಾಲು ಪಡೆದುಕೊಳ್ಳುತ್ತಿದ್ದವು. ಆದರೆ ಕರ್ನಾಟಕದಲ್ಲಿ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪ್ರಧಾನಿ ಮೋದಿ ಅವರು ಪಕ್ಷಪಾತ ಮಾಡದೇ ಅನೇಕ ಸಭೆಗಳಿಗೆ ಕರೆದರೂ ಸಿದ್ದರಾಮಯ್ಯ ಹೋಗಲಿಲ್ಲ. ಗ್ಲೋಬಲ್‌ ಇನ್ವೆಸ್ಟರ್‌ ಮೀಟ್‌ನಲ್ಲೂ ಭಾಗವಹಿಸಲಿಲ್ಲ. ಹೀಗಾಗಿ ರಾಜ್ಯಕ್ಕೆ ಅನುದಾನ ಬರಲಿಲ್ಲ. ಉದ್ಯೋಗ ಸೃಷ್ಟಿಯಾಗಲಿಲ್ಲ. ಈಗ ಎಷ್ಟೋ ವರ್ಷಗಳ ನಂತರ ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಸರ್ಕಾರ ಆಡಳಿತದ ಅವಕಾಶ ಬಂದಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿ-ಧರ್ಮ ಒಡೆಯಿತು. ಶಾಲಾ ಮಕ್ಕಳಲ್ಲೂ ಜಾತೀಯತೆಯ ವಿಷಬೀಜ ಬಿತ್ತಿದರು. ಟಿಪ್ಪು ಜಯಂತಿ ಆಚರಣೆ ವಿಷಯ ತಂದು ಸಂಘರ್ಷದ ವಾತಾವರಣ ನಿರ್ಮಿಸಿ​ದ್ದರು. ಆದರೆ ಜನತೆ ಅವರಿಗೆ ತಕ್ಕಪಾಠ ಕಲಿಸಿದರು. ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದನ್ನು ಬಿಟ್ಟು ಮೂರನೇ ಜಾಗಕ್ಕೆ ಬಂದಿದ್ದ ಜೆಡಿಎಸ್‌ ಜೊತೆ ಕೈ ಜೋಡಿಸಿ ಹಿಂಬಾಗಿಲಿನಿಂದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು ಎಂದು ದೂರಿದರು.

ತಕ್ಷಣದ ನೆರವಿಗಾಗಿ ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ತಾಂತ್ರಿಕ ಕಾರಣಗಳಿಂದಾಗಿ ಬೆಳೆ ಪರಿಹಾರ ಸ್ವಲ್ಪ ತಡವಾಗಿರಬಹುದು. ಆದರೆ ತುರ್ತು ಪರಿಹಾರವನ್ನು ಯಾವುದೇ ರೀತಿಯಲ್ಲಿ ಲೆಕ್ಕಾಚಾರ ಹಾಕದೇ ನೀಡಲಾಗಿದೆ. ನೆರೆ ಪರಿಸ್ಥಿತಿಯಿಂದ ತೊಂದರೆಯಾದವರಿಗೆ ಪರಿಹಾರ ಧನ ಬಿಡುಗಡೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ನಡೆದುಕೊಂಡಿದೆ ಎಂದರು.

ಬಚ್ಚೇಗೌಡ ಮೋಸ ಮಾಡಿಲ್ಲ:

ಬಿಜೆಪಿಯು ಬಚ್ಚೇಗೌಡ ಕುಟುಂಬಕ್ಕೆ ಅನೇಕ ಅವಕಾಶ ಕೊಟ್ಟಿದೆ. ದೊಡ್ಡಮಟ್ಟದ ಅವಕಾಶಗಳನ್ನು ಅವರ ಕುಟುಂಬಕ್ಕೆ ನೀಡಿದೆ. ಅವರ ಕುಟುಂಬಕ್ಕೆ ಪಕ್ಷ ಯಾವುದೇ ರೀತಿ ಮೋಸ ಮಾಡಿಲ್ಲ ಎಂದರು.ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸಲಾಗಿದೆ. ಆದರೂ ಸೋತರೆ ಅವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಪಕ್ಷದ ಹೈಕಮಾಂಡ್‌ ತೀರ್ಮಾನಿಸಲಿದೆ ಎಂದರು.

ಈರುಳ್ಳಿ ಬೆಲೆ ಹೆಚ್ಚಳಕ್ಕೆ ನೆರೆ ಬಂದು ಹಾನಿಯಾಗಿದ್ದರಿಂದ ಕೊರತೆಯಾಗಿದೆ. ಈರುಳ್ಳಿ ಬೆಲೆ ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಈರುಳ್ಳಿ ರಫ್ತು ಸಂಪೂರ್ಣ ಬಂದ್‌ ಮಾಡಲಾಗಿದೆ. ಕೆಲ ವರ್ತಕರು ದುರ್ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಬೆಲೆ ಗಗನಕ್ಕೇರುತ್ತಿದೆ. ಈರುಳ್ಳಿ ಸಂಗ್ರಹಿಸಿದ್ದ ಗೋದಾಮುಗಳ ಮೇಲೆ ದಾಳಿ ನಡೆಸಿ ಅಲ್ಲಿದ್ದ ಈರುಳ್ಳಿಯನ್ನು ಮುಟ್ಟುಗೋಲು ಹಾಕುವ ಕಾರ್ಯ ನಡೆಯುತ್ತಿದೆ. ಗೋದಾಮುಗಳಲ್ಲಿ ಸಂಗ್ರಹದಲ್ಲಿರುವ ಈರುಳ್ಳಿ ಹೊರಬಂದರೆ ಬೆಲೆ ಸಹಜ ಸ್ಥಿತಿಗೆ ಮರಳಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜಯಕುಮಾರ ಪಾಟೀಲ, ಆರ್‌.ಎಸ್‌. ಪಾಟೀಲ ಕೂಚಬಾಳ, ರವಿಕಾಂತ ಬಗಲಿ, ದಯಾಸಾಗರ ಪಾಟೀಲ, ವಿವೇಕಾನಂದ ಡಬ್ಬಿ, ಮಲ್ಲಮ್ಮ ಜೋಗೂರ, ಮಳುಗೌಡ ಪಾಟೀಲ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ ಮುಂತಾದವರು ಇದ್ದರು.
 

Latest Videos
Follow Us:
Download App:
  • android
  • ios