ಸಂಸದೆ ಶೋಭಾ ಕರಂದ್ಲಾಜೆ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ದೋಸ್ತಿ ಸರಕಾರವನ್ನು ಪ್ರಶ್ನೆ ಮಾಡಿದ್ದು ನಿಮ್ಮ ಇಬ್ಬಗೆಯ ನೀತಿ ಬಗ್ಗೆ ಏನು ಹೇಳುತ್ತೀರಾ? ಎಂದು ಕೇಳಿದ್ದಾರೆ. 

ಗದಗ[ಆ.13] ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಅನೇಕ ಮಕ್ಕಳ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಕ್ರಿಮಿನಲ್ ಅಮಾನ್ಮೆಂಟ್ ಬಿಲ್ 2018 ಕರ್ನಾಟಕದಲ್ಲಿ ಗಟ್ಟಿಗೊಳಿಸಬೇಕು. ಅಪರಾಧಿಗಳಿಗೆ ಕಾನೂನು ಭಯ ಹುಟ್ಟಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿದೆ. ಅಧಿಕಾರದ ಲಾಲಸೆಗೆ ಬೆಂಗಳೂರು ಬಲಿಯಾಗಿದೆ. ಬೆಂಗಳೂರ ಮಹಾನಗರ ಪಾಲಿಕೆಯಲ್ಲಿ‌ ಒಟ್ಟಾಗಿ ಅಧಿಕಾರ ಮಾಡುತ್ತಾ ಇದ್ದೀರಾ. ಆದ್ರೆ ಮಹಾನಗರ ಪಾಲಿಕೆ ನಾಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ದೋಸ್ತಿ ಜಿಲ್ಲೆಯಲ್ಲಿ ಕುಸ್ತಿ. ವಿಧಾನ ಸಭೆಯಲ್ಲೂ ದೋಸ್ತಿ ಗದಗನಲ್ಲೂ ಕುಸ್ತಿ ಇದು‌ ನಿಮ್ಮ‌ ನೀತಿನಾ? ನಿಮ್ಮ‌ದೋಸ್ತಿ ಎಲ್ಲಿವರೆಗೆ ಎಂಬುದನ್ನ ಸ್ಪಷ್ಟಪಡಿಸಬೇಕೆಂದು ಸಂಸದೆ ಶೋಭಾ ಆಗ್ರಹ ಪಡಿಸಿದ್ದಾರೆ.