ಯತ್ನಾಳ್ ದುರಂಹಕಾರಿ, ಸ್ವಯಂಘೋಷಿತ ನಾಯಕ ಎಂದ ಬಿಜೆಪಿ ನಾಯಕ
ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವುದರಿಂದ ಯತ್ನಾಳ್ ವ್ಯಕ್ತಿತ್ವಕ್ಕೆ ಧಕ್ಕೆ| ಯತ್ನಾಳ್ ಮನಸ್ಥಿತಿ ಸರಿ ಇದ್ದಂತಿಲ್ಲ| ಯತ್ನಾಳ್ ಕಾಂಗ್ರೆಸ್ಸಿನ ಜೊತೆಗೂ ಹೋಗಬಹುದು| ವಿನಾಕಾರಣ ವಿಜಯೇಂದ್ರ ಹೆಸರಿನ ಪ್ರಸ್ತಾಪ ಬೇಡ: ಯತ್ನಾಳ್‌ಗೆ ರೇಣು ಕಿವಿಮಾತು|
ದಾವಣಗೆರೆ(ಏ.05): ಬಸನಗೌಡ ಪಾಟೀಲ್ ಯತ್ನಾಳ್ ದುರಂತ ನಾಯಕನಾಗಿದ್ದು, ದುರಂಹಕಾರಿ, ಸ್ವಯಂ ಘೋಷಿತ ನಾಯಕ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತಂತೆ ಯತ್ನಾಳ್ ದಿನಕ್ಕೊಂದು ಅರಿವೇ ಹಾವು ಬಿಡುತ್ತಿದ್ದು, ಅದು ಬಹಳ ದಿನ ಇರುವುದೂ ಇಲ್ಲ. ಇಂತಹ ಅರಿವೆ ಹಾವುಗಳೆಲ್ಲ ಟುಸ್ ಅನ್ನುತ್ತವಷ್ಟೇ ಎಂದರು.
'ಯಾರೂ ರಾಜೀನಾಮೆ ಕೊಡಲ್ಲ, ನಾವೆಲ್ಲ ಒಂದಾಗಿ ಹೊರಟಿದ್ದೇವೆ'
ಯತ್ನಾಳ್‌ಗೆ ಉಚ್ಛಾಟಿಸಲು 65ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿಕೊಟ್ಟಿದ್ದು, ಅದನ್ನು ರಾಷ್ಟ್ರೀಯ ನಾಯಕರಿಗೆ ತಲುಪಿಸುತ್ತೇವೆ. ಸಹಿ ಮಾಡಿದ ಪತ್ರ ನನ್ನಲ್ಲೇ ಇದೆ. ವಿಜಯೇಂದ್ರ ಬಗ್ಗೆ ಯತ್ನಾಳ್ ಆರೋಪಿಸುತ್ತಿದ್ದು, ವಿಜಯೇಂದ್ರ ಅಂತಹ ತಪ್ಪಾದರೂ ಏನು ಮಾಡಿದ್ದಾರೆ? ವಿನಾಕಾರಣ ವಿಜಯೇಂದ್ರ ಹೆಸರಿನ ಪ್ರಸ್ತಾಪ ಬೇಡ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಜೊತೆಗೆ ವಿಜಯೇಂದ್ರ ಯಾಕೆ ಹೋಗ್ತಾರೆ? ಯತ್ನಾಳ್ ಮನಸ್ಥಿತಿ ಸರಿ ಇದ್ದಂತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಯತ್ನಾಳೇ ಹೊಂದಾಣಿಕೆ ಮಾಡಿಕೊಂಡಿರಬಹುದು. ಇದೇ ಯತ್ನಾಳ್ ಕಾಂಗ್ರೆಸ್ಸಿನ ಜೊತೆಗೂ ಹೋಗಬಹುದು. ಹೀಗೆ ಕಾಂಗ್ರೆಸ್ಸಿನ ಏಜೆಂಟರಂತೆ ಕೆಲಸ ಮಾಡಿದರೆ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆಂಬುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.