ವಿಜಯಪುರ ಏರ್‌ಪೋರ್ಟ್ ಸಿದ್ಧತೆಗೆ ಕೇಂದ್ರ ಸಚಿವರ ಜತೆ ಜಿಗಜಿಣಗಿ ಚರ್ಚೆ
ವಿಜಯಪುರ ವಿಮಾನ ನಿಲ್ದಾಣ ಸಿದ್ಧತೆಯಲ್ಲಿ ಹಿನ್ನೆಡೆಯಾಗದಂತೆ ತ್ವರಿತ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ ಜಿಗಜಿಣಗಿ| ಈ ಕುರಿತು ಯಡಿಯೂರಪ್ಪ ಅವರೊಂದಿಗೂ ಮಾತುಕತೆ| ಅಗತ್ಯ ಕಾಗದಪತ್ರ ಸಮೇತ ಶೀಘ್ರದಲ್ಲಿ ಕೇಂದ್ರ ವಿಮಾನಯಾನ ಇಲಾಖೆಗೆ ಶಿಫಾರಸು ಪತ್ರ ಸಲ್ಲಿಸುವಂತೆ ಸಚಿವರಿಗೆ ಸೂಚನೆ|
ವಿಜಯಪುರ(ಡಿ.06): ವಿಜಯಪುರ ವಿಮಾನ ನಿಲ್ದಾಣ ಸ್ಥಾಪನೆ ಪ್ರಗತಿ ಕುರಿತು ಸಂಸದ ರಮೇಶ ಜಿಗಜಿಣಗಿ ಗುರುವಾರ ದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಹರದೀಪಸಿಂಗ್ ಪುರಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಯಾವುದೇ ಪರಿಸ್ಥಿತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಿದ್ಧತೆಯಲ್ಲಿ ಹಿನ್ನೆಡೆಯಾಗದಂತೆ ತ್ವರಿತ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸಚಿವರಿಗೆ ಸಂಸದ ರಮೇಶ ಜಿಗಜಿಣಗಿ ಅವರು ಮನವಿ ಮಾಡಿದ್ದಾರೆ. ಸಚಿವರ ಮುಂದೆ ಎಲ್ಲ ದಾಖಲೆಗಳನ್ನು ನೀಡಿ ಅನುಮತಿ ಕೊಡುವಂತೆ ಒತ್ತಾಯಿಸಿದರು. ಈ ಕುರಿತು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೂ ಮಾತನಾಡಿ, ವಿಜಯಪುರ ವಿಮಾನ ನಿಲ್ದಾಣಕ್ಕೆ ಅಗತ್ಯ ಕಾಗದಪತ್ರ ಸಮೇತ ಶೀಘ್ರದಲ್ಲಿ ಕೇಂದ್ರ ವಿಮಾನಯಾನ ಇಲಾಖೆಗೆ ಶಿಫಾರಸು ಪತ್ರ ಸಲ್ಲಿಸುವಂತೆ ಹೇಳುವುದಾಗಿಯೂ ಸಚಿವರಿಗೆ ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದಷ್ಟು ಬೇಗ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿ ಕಾಮಗಾರಿ ಪ್ರಾರಂಭಕ್ಕೆ ಅನುಕೂಲ ಮಾಡಿಕೊಡುವಂತೆಯೂ ಕೇಳಿಕೊಂಡಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಅವರ ಮನವಿಗೆ ಸ್ಪಂದಿಸಿದ ಸಚಿವ ಹರದೀಪಸಿಂಗ್, ವಿಜಯಪುರ ವಿಮಾನ ನಿಲ್ದಾಣ ವಿಷಯ ನಮ್ಮ ತುರ್ತು ಪರಿಶೀಲನೆಯಲ್ಲಿದೆ. ರಾಜ್ಯ ಸರ್ಕಾರದ ಜೊತೆ ನಮ್ಮ ಅಧಿಕಾರಿಗಳು ಸಂಪರ್ಕಲ್ಲಿದ್ದು ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಕೆಲಸ ನಡೆಸಿದ್ದಾರೆ. ಎರಡೂ ಸರ್ಕಾರಗಳು ಈ ವಿಷಯದಲ್ಲಿ ಆಸಕ್ತಿ ತೋರಿಸುತ್ತಿವೆ. ಶೀಘ್ರವಾಗಿ ಅನುಮತಿ ಕೊಡಲು ಉತ್ಸುಕರಾಗಿರುವುದಾಗಿ ತಿಳಿಸಿದರು.