Asianet Suvarna News Asianet Suvarna News
breaking news image

ರುದ್ರಾಕ್ಷಿಮಠಕ್ಕೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ: ಸ್ವಾಮೀಜಿ ಆಶೀರ್ವಾದ ಪಡೆದ ಸಂಸದೆ!

ಸಂಸದೆಯಾದ ಬಳಿಕ ಪ್ರಿಯಾಂಕಾ ಜಾರಕಿಹೊಳಿ ಅವರು ಜಿಲ್ಲೆಯ ವಿವಿಧ ಮಠಗಳಿಗಳಿಗೆ ಭೇಟಿ ನೀಡುತ್ತಿದ್ದು, ಬೆಳಗಾವಿಯ ನೆಹರು ನಗರದ ನಾಗನೂರು ರುದ್ರಾಕ್ಷಿಮಠಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ, ಡಾ.ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಾದ ಪಡೆದರು. 
 

MP priyanka jarkiholi visits rudrakshi mutt at belagavi gvd
Author
First Published Jul 10, 2024, 10:33 PM IST

ಬೆಳಗಾವಿ (ಜು.10): ಸಂಸದೆಯಾದ ಬಳಿಕ ಪ್ರಿಯಾಂಕಾ ಜಾರಕಿಹೊಳಿ ಅವರು ಜಿಲ್ಲೆಯ ವಿವಿಧ ಮಠಗಳಿಗಳಿಗೆ ಭೇಟಿ ನೀಡುತ್ತಿದ್ದು, ಬೆಳಗಾವಿಯ ನೆಹರು ನಗರದ ನಾಗನೂರು ರುದ್ರಾಕ್ಷಿಮಠಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಭೇಟಿ ನೀಡಿ, ಡಾ.ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಾದ ಪಡೆದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿ, ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಾಗನೂರು ಮಠಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಆಶೀರ್ವದಿಸಿ, ಸತ್ಕರಿಸಿದರು.

ಇದೇ ವೇಳೆ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಸುಮಾರು 30 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿರುವ ಗ್ರಂಥಾಲಯವನ್ನು ಸಂಸದೆ ಪ್ರಿಯಾಂಕಾ ವೀಕ್ಷಿಸಿ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದರು. 12ನೇ ಶತಮಾನದಲ್ಲಿ ತಾಳೆಗರೆಯಲ್ಲಿ ಬರೆದ ವಚನ ವೀಕ್ಷಿಸಿದರು. ಬಳಿಕ ನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕ‌ರ್, ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಾಹಾರಾಜ್‌, ಜಗಜ್ಯೋತಿ ಬಸವೇಶ್ವರ, ಸಂಭಾಜಿ ಮಹಾರಾಜ, ಮಹರ್ಷಿ ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

ಭಾರೀ ಮಳೆಗೆ ಮನೆ ಹಾನಿಯಾದ್ರೆ ಗ್ರಾಮಾಡಳಿತ ತಕ್ಷಣಕ್ಕೆ ಸ್ಪಂದಿಸಲಿ: ಶಾಸಕ ಗೋಪಾಲಕೃಷ್ಣ ಬೇಳೂರು

ದೆಹಲಿಯ ಸಂಸತ್‌ ಭವನದಲ್ಲಿ ಲೋಕಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಹಾಪುರುಷರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ವೇಳೆ ವಾಲ್ಮೀಕಿ ಸಮಾಜದ ಗುರುಗಳು, ಸಮಾಜದ ಮುಖಂಡರು ಸಂಸದೆಗೆ ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅವರು, ತಂದೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿ, ಮೂರ್ತಿ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಪೀರನವಾಡಿ ಹಜರತ್ ಶಾ ಅನ್ಸಾರಿ ಆರ್.ಎಚ್. ದರ್ಗಾಗೆ ಪ್ರಿಯಾಂಕಾ ಭೇಟಿ ನೀಡಿ ಪಾರ್ಥಿಸಿದರು. ಇದೇ ವೇಳೆ ಮುಸ್ಲಿಂ ಸಮಾಜದ ಮುಖಂಡರು ಶಾಲು ಹೊದಿಸಿ ಸತ್ಕರಿಸಿದರು. ಸತೀಶ್‌ ಶುಗರ್ಸ್‌ ನಿರ್ದೇಶಕ, ಯುವ ನಾಯಕ ರಾಹುಲ್‌ ಜಾರಕಿಹೊಳಿ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ. ಮುಖಂಡರಾದ ರಾಜೇಂದ್ರ ಪಾಟೀಲ, ಸಿದ್ದಿಕ್ ಅಂಕಲಗಿ, ಬಸವರಾಜ ಶೇಂಗಾವಿ, ಅರ್ಜುನ ನಾಯಕವಾಡಿ, ಮಲಗೌಡ ಪಾಟೀಲ, ಸುರೇಶ ಗವನ್ನವರ, ಆಯಿಷಾ ಸನದಿ ಸೇರಿದಂತೆ ನೂರಾರು ಕಾರ್ಯಕರ್ತರು ಇತರರು ಇದ್ದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ: ಸಂಸದ ಗೋವಿಂದ ಕಾರಜೋಳ

ಚಿಕ್ಕೋಡಿ ಜಿಲ್ಲೆ ಬಗ್ಗೆ ಸಿಎಂ ಜೊತೆಗೆ ಚರ್ಚೆ: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸುವ ಸಂಬಂಧ ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ಆ ಭಾಗದ ಜನರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದಾರೆ. ಈಗ ಜಿಲ್ಲಾ ರಚನೆಗೆ ಪೂರಕವಾದ ವಾತಾವರಣವಿದೆ ಎಂದು ಹೇಳಿದರು. ಲೋಕಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬೆಳಗಾವಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಹಾತ್ಮರ ಪ್ರತಿಮೆಗಳಿಗೆ ಗೌರವ ಸಲ್ಲಿಸಿದ್ದೇನೆ. ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಹೀಗಾಗಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕ‌ರ್ ಅವರು ಬರೆದ ಸಂವಿಧಾನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ತಂದೆ, ಸಚಿವರಾದ ಸತೀಶ್‌ ಜಾರಕಿಹೊಳಿ ಅವರೂ ಸಂವಿಧಾನ ಹೆಸರಿನಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ, ಅವರ ಮಾರ್ಗದಲ್ಲಿ ನಾನು ಸಾಗುತ್ತಿದ್ದೇನೆ ಎಂದರು.

Latest Videos
Follow Us:
Download App:
  • android
  • ios