ಬಿಟ್‌ ಕಾಯಿನ್‌ ಹಗರಣದಲ್ಲಿ ಮುಖ್ಯಮಂತ್ರಿಗಳ ತಲೆದಂಡವಾಗುತ್ತದೆ ಎಂದಿದ್ದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯವಾಗಿ ತಿರುಗೇಟು

ಮೈಸೂರು (ನ.12): ಬಿಟ್‌ ಕಾಯಿನ್‌ (Bit Coin) ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಲೆದಂಡವಾಗುತ್ತದೆ ಎಂದಿದ್ದ ಕಾಂಗ್ರೆಸ್‌ (Congress) ಶಾಸಕ ಪ್ರಿಯಾಂಕ್‌ ಖರ್ಗೆಗೆ (Priyank kharge) ಸಂಸದ ಪ್ರತಾಪ್‌ ಸಿಂಹ (prathap simha) ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಸದಾ ಶಿವನಗರದಲ್ಲಿ ನಾಲ್ಕು ಭವ್ಯ ಬಂಗಲೇ, ಒಂದೇ ನಂಬರ್‌ನ ಕಾರು (ಇದ್ದರೂ). ನಾನು ನಿರ್ಗತಿಕ, ಶೋಷಣೆ ಒಳಗಾದವರು ಎಂದು ಹೇಳಿಕೊಳ್ಳುವವರಿಗೆ ಹೆಚ್ಚಿನ ಮನ್ನಣೆ ನೀಡುವ ಅಗತ್ಯ ಇಲ್ಲ ಎಂದಿದ್ದಾರೆ. ಪ್ರಿಯಾಂಕ್‌ ಖರ್ಗೆಗೆ ಮೆಚ್ಯುರಿಟಿ ಇದೆಯೋ ಇಲ್ಲವೋ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ, ನಾನು ಹೇಳುವುದಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಸಿದ್ದರಾಮಯ್ಯನವರು (siddaramaiah) ಮಹಾನ್‌ ಆರ್ಥಿಕ ತಜ್ಞರು. ಬಿಟ್‌ ಕಾಯಿನ್‌ (bit Coin) ಎಂದರೇನು?, ಅದು ಹೇಗೆ ವ್ಯವಹಾರ ಆಗುತ್ತೆ?. ಅದನ್ನ ನಮ್ಮಂತಹವರಿಗೆ ವಿವರಿಸಲಿ, ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮಗಿದೆ ಎಂದಿದ್ದಾರೆ.

ಬಿಟ್‌ ಕಾಯಿನ್‌ ವಿಚಾರದಲ್ಲಿ ಕಾಂಗ್ರೆಸ್‌ ಮಾಧ್ಯಮಗಳ ಮೂಲಕ ನಿರೀಕ್ಷಣಾ ಜಾಮೀನು ಹಾಕುತ್ತಿದೆ. ಈ ಪ್ರಕರಣದಲ್ಲಿ ಗಂಭೀರವಾಗಿ ತನಿಖೆ ಮಾಡಿದರೆ. ಕಾಂಗ್ರೆಸ್‌ನವರೇ ಇದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈಗಾಗಲೇ ಮೊದಲ ಚಾರ್ಜ್ ಶೀಟ್‌ನಲ್ಲಿ ಕಾಂಗ್ರೆಸ್‌ (Congress) ಮುಖಂಡರ ಮಕ್ಕಳ ಹೆಸರೇ ಉಲ್ಲೇಖ ಆಗಿದೆ. ರಫೇಲ್‌ ವಿಚಾರದಲ್ಲೂ ಕಾಂಗ್ರೆಸ್‌ನ ಅವ್ವ, ಮಗಾ ಹೀಗೆ ಮಾಡಿದ್ದರು. ತಾವು ಡೀಲ್‌ ಮಾಡಿಕೊಂಡು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದರು. ಈಗ ಅವರ ಡೀಲ್‌ ಬಯಲಾಗಿದೆ. ರಾಜ್ಯದಲ್ಲೂ ಅದೇ ತಂತ್ರವನ್ನ ಕಾಂಗ್ರೆಸ್‌ ಪ್ರಯೋಗಿಸುತ್ತಿದೆ. ಈ ಪ್ರಕರಣವು ಕಾಂಗ್ರೆಸ್‌ ಕೊರಳಿಗೆ ಸುತ್ತಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ 3ನೇ ಬಿಜೆಪಿ ಸಿಎಂ ಖಚಿತ: ಪ್ರಿಯಾಂಕ್‌

 ಬಿಟ್‌ ಕಾಯಿನ್‌ ಹಗರಣದ ಮಾಹಿತಿ ಹೊರ ಬಂದರೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಹೇಳಿಕೆಗೆ ಈಗಲೂ ಬದ್ಧ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಪುನರುಚ್ಚರಿಸಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ, ಬಿಟ್‌ ಕಾಯಿನ್‌ ಬಗ್ಗೆ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತಾಂತ್ರಿಕ ತನಿಖೆಯಾಗಲಿ ಎಂದು ಆಗ್ರಹಿಸಿದ್ದರು. 

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್‌ ಕಾಯಿನ್‌ (Bit Coin) ಹಗರಣಕ್ಕೆ ಸಂಬಂಧಿಸಿದಂತೆ ನಾನು ಹೇಳಿರುವ ಮಾಹಿತಿ ಸರಿಯಿಲ್ಲ ಎನ್ನುವುದಾದರೆ ನಾನು ಎತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡಲಿ. ತನಿಖೆಯ ಮಾಹಿತಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಹಗರಣದಲ್ಲಿ ಕಾಂಗ್ರೆಸ್‌ನವರು (Congress) ಇದ್ದಾರೆ ಎಂದು ಹೇಳುತ್ತಾರೆ. ಕಾಂಗ್ರೆಸ್ಸಿನವರ ವಿಚಾರ ಏಕೆ? ಕಾಂಗ್ರೆಸ್‌ನವರನ್ನು ಸಂಧಾನಕ್ಕೆ ಕರೆಯುತ್ತಿದ್ದೀರಾ? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದರು.

ನಮ್ಮ ಬಳಿ ಇರುವುದು ಸರ್ಕಾರಿ ಮಾಹಿತಿ. ಈ ಹಗರಣದ ಆಳ, ಅಗಲ ಬಹಳ ಇದೆ. ಇದು ಅಳತೆಗೂ ಸಿಗುತ್ತಿಲ್ಲ. ಜಂಟಿ ಆಯುಕ್ತರು ಕೊಟ್ಟಿರುವ ಮಾಹಿತಿಯೇ ಗಾಬರಿ ಹುಟ್ಟಿಸುತ್ತಿದೆ. ಇನ್ನು ಚಾರ್ಜ್ ಶೀಟ್‌ನಲ್ಲಿ ಏನೆಲ್ಲಾ ಮಾಹಿತಿ ಇರಬೇಡ? ಶ್ರೀಕಿ ಯಾರಿಗೆ ಅನುಕೂಲ ಮಾಡಿದ್ದಾರೆ ಎನ್ನುವುದನ್ನು ಕೇಳುತ್ತಿದ್ದೇವೆ? ಅದನ್ನು ಬಹಿರಂಗ ಮಾಡಲು ಸರ್ಕಾರಕ್ಕೆ ಏನು ತೊಂದರೆ? ಕಾಂಗ್ರೆಸ್‌ ಹೆಸರು ಹೇಳಿ ಏಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದರು.

ಪೇಪರ್‌ಸಿಂಹಗೆ ಪ್ರತಿಕ್ರಿಯಿಸಲ್ಲ:

ಸಂಸದ ಪ್ರತಾಪ್‌ಸಿಂಹ ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಪೇಪರ್‌ ಸಿಂಹ ಹೇಳಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡಲ್ಲ. ಆದಾಯ ತೆರಿಗೆ ಇಲಾಖೆ (Tax Department), ಜಾರಿ ನಿರ್ದೇಶನಾಲಯ ಎರಡೂ ಅವರ ಬಳಿಯೇ ಇದೆ. ತನಿಖೆ ಮಾಡಿ ಮಾಹಿತಿ ತರಿಸಿಕೊಳ್ಳಲಿ. ನಮ್ಮ ಆರೋಪಗಳಿಗೆ ಉತ್ತರ ಕೊಡಲಾಗದಿದ್ದಾಗ ವೈಯಕ್ತಿಕ ಟೀಕೆ ಮಾಡುತ್ತಾರೆ. ಇದು ಬಿಜೆಪಿಯ ಮಂತ್ರ’ ಎಂದರು.

ನಮ್ಮ ಬಳಿ ಒಂದೇ ನಂಬರಿನ ಕಾರು ಇದ್ದರೆ ಆ ಬಗ್ಗೆ ಆರ್‌ಟಿಓ ಕೇಳಬೇಕು. ಮೈಸೂರನ್ನು ಪ್ಯಾರಿಸ್‌ ಮಾಡುತ್ತೇನೆ ಎಂದು ಮತ ಹಾಕಿಸಿಕೊಂಡು ಮರೆತು ಈಗ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಅವರು ಚರ್ಚೆಗೆ ಬರಲಿ ಎಲ್ಲಾ ರೀತಿಯ ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದರು.