ಹಾಸನ(ಆ): ಕಳೆದ ಒಂದು ವಾರದ ಹಿಂದೆ ಸುರಿದ ಮಹಾ ಮಳೆಗೆ ನಗರ ಪ್ರದೇಶ ಸೇರಿದಂತೆ ಸಕಲೇಶಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟುಪ್ರಮಾಣದಲ್ಲಿ ಹಾನಿಯಾಗಿದ್ದು, ಗುರುವಾರ ಸಂಜೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹಾನುಬಾಳು ಹೋಬಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಸಂಸದರು, ಹಾನುಬಾಳು ಹೋಬಳಿಯ ದೇವಲಕೆರೆ-ದೇವವೃಂದ ಮಾರ್ಗವಾಗಿ ಮೂಡಿಗೆರೆ ತಾಲೂಕು ಸಂಪರ್ಕ ಕಲ್ಪಿಸುವ ರಸ್ತೆ ಕುಸಿತಗೊಂಡು ಅಪಾಯದ ಅಂಚಿಗೆ ಬಂದು ತಲುಪಿದೆ ಹಾಗೂ ಗದ್ದೆಗಳ ಮೇಲೆ ನೀರು ನಿಂತ ಪರಿಣಾಮ ಬಾಣಲೆ ಗ್ರಾಮದಲ್ಲಿ ನೂರಾರು ಎಕರೆಯಲ್ಲಿ ಭತ್ತ ಬೆಳೆ ನಾಶವಾಗಿವೆ ಎಂದರು.

ಮಹಾ ಮಳೆಗೆ ಹಾನುಬಾಳು ಹೋಬಳಿಯ ಇಬ್ಬರು ರೈತರು ನೀರನಲ್ಲಿ ಕೊಚ್ಚಿಹೋಗಿ ಮೃತ ಪಟ್ಟಿದ್ದಾರೆ. ಆದ್ದರಿಂದ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿ ಪ್ರವಾಹ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ನಾಲ್ಕು ತಾಲೂಕುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಸಕಲೇಶಪುರ ನಗರ ಹಾಗೂ ಗ್ರಾಮೀಣ ಭಾಗಗಳಾದ ಹೆತ್ತೂರು, ಯಸಳೂರು ಮತ್ತು ಹಾನುಬಾಳು ಹೋಬಳಿಗಳಲ್ಲಿ ರಸ್ತೆಗಳು, ಕಾಫಿ, ಮೆಣಸು ಎಲಕ್ಕಿ ಸೇರಿದಂತೆ ಭತ್ತ ಬೆಳೆಗಳು ಸಂಪೂರ್ಣ ನಾಶವಾಗಿರುವ ವರದಿಯಾಗಿದೆ ಎಂದರು.

ಹಲವು ಕೆಡಗಳಲ್ಲಿ ಭೂ ಕುಸಿತ ಉಂಟಾಗಿದೆ. ಆದ್ದರಿಂದ ಸರ್ಕಾರದಿಂದ ತುರ್ತು ಅನುದಾನದಲ್ಲಿ ಕೆಲ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆದಾಗ ಮುನ್ನಚ್ಚರಿಕಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್‌ರ ಸಭೆ ಕರೆದು ಚರ್ಚೆಸಿಲಾಗುವುದು ಎಂದರು.

ರೈತ ರಮೇಶ್‌ ಮನೆಗೆ ಭೇಟಿ:

ಈ ವೇಳೆ ಹೇಮಾವತಿ ಹಿನ್ನಿರಿನ ರಭಸಕ್ಕೆ ಕೊಚ್ಚಿಹೋಗಿ ಶವವಾಗಿ ಪತ್ತೆಯಾದ ಬಡ ರೈತ ರಮೇಶ್‌ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ವೇಳೆ ಜಿಪಂ ಸದಸ್ಯರಾದ ಸುಪ್ರದೀಪ್ತ ಯಜಮಾನ, ಉಜ್ಮರಿಜ್ಮಿ, ತಹಸೀಲ್ದಾರ್‌ ರಕ್ಷಿತ್‌ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.