ಹಾಸನ(ಫೆ.24): ಬೇಕಾದರೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಿ ಆದರೆ, ಅಮೂಲ್ಯ ಶತ್ರುದೇಶ ಪಾಕಿಸ್ತಾನದ ಪರ ಜೈಕಾರ ಕೂಗಿರುವುದು ತಪ್ಪು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಖಂಡಿಸಿದ್ದಾರೆ.

ನಗರದಲ್ಲಿ ಭಾನುವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ  ಪಾಕ್‌ ಪರ ಅಮೂಲ್ಯ ಜೈಕಾರ್‌ ಹಾಕಿರುವುದು ಖಂಡನೀಯ. ಪಾಕ್‌ ಪರ ಜೈಕಾರ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ನಮ್ಮ ದೇಶ ರೀ.., ನಮ್ಮ ಭಾರತಾಂಬೆ.., ಇಂತಹ ದೇಶದಲ್ಲಿ ಪಾಕ್‌ ಪರ ಹೇಗೆ ಜೈಕಾರ ಕೂಗುತ್ತಾರೆ..? ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶದ ವಿರುದ್ಧ ಮಾತನಾಡುವವರಿಗೆ ಪಕ್ಷಾತೀತವಾಗಿ ಯಾರೂ ಬೆಂಬಲಿಸಬಾರದು. ಬೇಕಾದರೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಿ, ಅದು ಬಿಟ್ಟು ವಿರೋಧಿ ದೇಶದ ಪರ ಜೈಕಾರ ಕೂಗಿದ್ದು ಎಷ್ಟು ಸರಿ ಎಂದು ಪ್ರಜ್ವಲ್‌ ಪ್ರಶ್ನಿಸಿದರು.

ಕ್ಯಾಸಿನೋ, ನೀರಾ ಜಾರಿಗೆ ವಿರೋಧ

ಇನ್ನು ರಾಜ್ಯದಲ್ಲಿ ಕ್ಯಾಸಿನೋ ಹಾಗೂ ನೀರಾ ಜಾರಿಗೆ ತರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್‌, ಬಿಜೆಪಿಯು ಆರ್‌ಎಸ್‌ಎಸ್‌ ನಿಭಾಯಿಸುತ್ತಿದೆಯೋ ಅಥವಾ ಆರ್‌ಎಸ್‌ಎಸ್‌ ಬಿಜೆಪಿಯನ್ನು ನಿಯಂತ್ರಿಸುತ್ತಿದೆಯೋ ಗೊತ್ತಿಲ್ಲ. ಬಿಜೆಪಿ ತತ್ವ ಸಿದ್ಧಾಂತವೇ ಬೇರೆ, ಆರ್‌ಎಸ್‌ಎಸ್‌ ತತ್ವ ಸಿದ್ಧಾಂತವೇ ಬೇರೆ. ಆರ್‌ಎಸ್‌ಎಸ್‌ ಮಾತು ಬಿಜೆಪಿ ಕೇಳುತ್ತಿಲ್ಲವೋ ಅಥವಾ ಬಿಜೆಪಿ ಮಾತು ಆರ್‌ಎಸ್‌ಎಸ್‌ ಕೇಳುತ್ತಿಲ್ಲವೋ ಗೊತ್ತಿಲ್ಲ. ಕ್ಯಾಸಿನೋ ಹಾಗೂ ನೀರಾ ಜಾರಿಗೆ ತರುವುದು ಜನ ವಿರೋಧಿ ಆಗಿದೆ ಎಂದು ಪ್ರಜ್ವಲ್‌ ರೇವಣ್ಣ ಹೇಳಿದರು.