ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಪತ್ತೆಹಚ್ಚಲು ನಿಖರವಾದ ಡ್ರೋನ್‌ ಸರ್ವೆಯೊಂದಿಗೆ ಮ್ಯಾಪಿಂಗ್‌ ಮಾಡುವಂತೆ ಸಂಸದೆ ಸುಮಲತಾ ಅಂಬರೀಶ್‌ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಮಂಡ್ಯ (ಜ. 07): ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಪತ್ತೆಹಚ್ಚಲು ನಿಖರವಾದ ಡ್ರೋನ್‌ ಸರ್ವೆಯೊಂದಿಗೆ ಮ್ಯಾಪಿಂಗ್‌ ಮಾಡುವಂತೆ ಸಂಸದೆ ಸುಮಲತಾ ಅಂಬರೀಶ್‌ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ನಗರದ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಆರ್‌ಎಸ್‌ ಅಣೆಕಟ್ಟೆಯ ಸುತ್ತಮುತ್ತ ಗಣಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಇಲ್ಲಿ ಸಕ್ರಮಕ್ಕಿಂತ ಅಕ್ರಮ ಗಣಿಗಳೇ ಹೆಚ್ಚಾಗಿವೆ. ಇದನ್ನು ತಡೆಯಲು ಗಣಿ ಅಧಿಕಾರಿಗಳು ಏಕೆ ಮುಂದಾಗಿಲ್ಲ ಎಂದು ಇಲಾಖೆಯ ಹಿರಿಯ ಭೂ ವಿಜ್ಞಾನಿ ಪದ್ಮಜಾ ಅವರನ್ನು ಪ್ರಶ್ನಿಸಿದರು.

ಅಕ್ರಮ ಗಣಿಗಾರಿಕೆಗೆ ನಾವೆಲ್ಲೂ ಅವಕಾಶ ಮಾಡಿಕೊಟ್ಟಿಲ್ಲ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ಎರವಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಶ್ರೀರಂಗಪಟ್ಟಣ, ಕೆಆರ್‌ಎಸ್‌ ಹಾಗೂ ಮಹದೇವಪುರ ಚೆಕ್‌ಪೋಸ್ಟ್‌ಗಳಲ್ಲಿ ಸೀಸಿ ಕ್ಯಾಮೆರಾ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಕ್ರಮ ಸಾಗಣೆಗೆ ಕಡಿವಾಣ ಹಾಕಲಾಗಿದೆ ಎಂದು ಪದ್ಮಜಾ ಉತ್ತರಿಸಿದರು.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಅಕ್ರಮ ಗಣಿ ಸಾಮಗ್ರಿ ಸಾಗಾಣಿಕೆದಾರರನ್ನು ಪತ್ತೆ ಹಚ್ಚಿ 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರು ಜಾಮೀನು ಪಡೆದುಕೊಂಡಿದ್ದಾರೆ. 10 ಮೆಟ್ರಿಕ್‌ ಟನ್‌ಗಿಂತಲೂ ಹೆಚ್ಚಿನ ಭಾರ ಸಾಗಿಸುವ ಟಿಪ್ಪರ್‌ಗಳಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ. ಈವರೆಗೆ ಸುಮಾರು 19 ಲಕ್ಷ ರು. ದಂಡ ಸಂಗ್ರಹಿಸಲಾಗಿದ್ದು, ಚಾಲ್ತಿ ಕಲ್ಲು ಗಣಿ ಗುತ್ತಿಗೆದಾರರಿಂದ 23 ಕೋಟಿ ರು. ಹಾಗೂ ಅವಧಿ ಮುಗಿದ ಕಲ್ಲುಗಣಿ ಗುತ್ತಿಗೆದಾರರಿಂದ 39.85 ಕೋಟಿ ರು. ಸೇರಿ ಒಟ್ಟು 63.83 ಕೋಟಿ ರೂ. ರಾಜಧನ ಬಾಕಿ ಇದ್ದು, ಇದನ್ನು ವಸೂಲಿ ಮಾಡಲು ಈಗಾಗಲೇ ನೋಟೀಸ್‌ ಜಾರಿಗೊಳಿಸಲಾಗಿದೆ ಎಂದರು.

ನೋಟಿಸ್‌ ಕೊಟ್ಟು ಕುಳಿತರೆ ಪ್ರಯೋಜನವೇನು?

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ, ನೊಟೀಸ್‌ ಕೊಟ್ಟು ಸುಮ್ಮನೆ ಕೂತರೆ ಪ್ರಯೋಜನವೇನು? ನ್ಯಾಯಾಲಯದಲ್ಲಿ ನೀವು ಹಾಕಿರುವ ಪ್ರಕರಣಗಳ ವಿಚಾರಣೆಗೆ ವಕೀಲರೇ ಹಾಜರಾಗುತ್ತಿಲ್ಲ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಅವರ ಪರವಾನಗಿ ರದ್ದುಗೊಳಿಸಿ ಸಂಬಂಧಪಟ್ಟತಹಸೀಲ್ದಾರರಿಗೆ ಇವರ ಸ್ಥಿರ ಮತ್ತು ಚರಾಸ್ತಿ ಮಾಹಿತಿ ಸಂಗ್ರಹಿಸಿ ಮುಟ್ಟುಗೋಲು ಹಾಕಿಕೊಳ್ಳುವಂತೆ ತಿಳಿಸಿ, ರಾಜಧನ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲಾದ್ಯಂತ ಖನಿಜಗಳ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಸಂಬಂಧ 66 ಪ್ರಕರಣಗಳನ್ನು ಪತ್ತೆ ಮಾಡಿ ವಿವಿಧ ನ್ಯಾಯಾಲಯಗಳಲ್ಲಿ ನಿಯಮಾನುಸಾರ ಖಾಸಗಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅನಧಿಕೃತ ಖನಿಜಗಳನ್ನು ಸಾಗಾಣಿಕೆ ಮಾಡುತ್ತಿದ್ದ 119 ಪ್ರಕರಣಗಳಲ್ಲಿ 3 ಪ್ರಕರಣಗಳಿಗೆ ಪಿಸಿಆರ್‌ ದಾಖಲಿಸಿದ್ದು, ಉಳಿದ 116 ಪ್ರಕರಣಗಳಿಂದ 39.11 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪದ್ಮಜಾ ಮಾಹಿತಿ ನೀಡಿದರು.

20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ

ಕೆಆರ್‌ಎಸ್‌ ಅಣೆಕಟ್ಟೆಯ ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯೊಳಗೆ ಎಲ್ಲಾ ರೀತಿಯ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗಳು ಇಲಾಖೆ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯವರಿಗೆ ಪತ್ರ ಬರೆದಿದ್ದಾರೆ. ಸ್ಫೋಟಕ ಸಾಮಗ್ರಿಗಳ ದಾಸ್ತಾನು ಮಾಡಲು ಪರವಾನಗಿ ನೀಡುವಿಕೆ ಹಾಗೂ ನಿಯಂತ್ರಣ ಕ್ರಮವನ್ನು ಕೇಂದ್ರದ ಇಲಾಖೆ ಕೈಗೊಳ್ಳಲಿದೆ ಎಂದು ತಿಳಿಸಿದರು.

ದಿಲೀಪ್‌ ಬಿಲ್ಡ್‌ಕಾನ್‌ನಿಂದ 32.07 ಕೋಟಿ ರಾಜಧನ

ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕೈಗೊಂಡಿರುವ ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ ಅವರ ಕಾಮಗಾರಿಗೆ ಸಂಬಂಧಿಸಿದಂತೆ 22.44 ಲಕ್ಷ ಮೆಟ್ರಿಕ್‌ ಟನ್‌ ಉಪ ಖನಿಜಗಳನ್ನು ಸಾಗಾಣಿಕೆ ಮಾಡಲು ಪರವಾನಗಿ ಪಡೆದಿದ್ದು, 24.75 ಕೋಟಿ ರಾಜಧನವನ್ನು ಪಾವತಿಸಿದ್ದಾರೆ. ಮುರ್ರಂ ಮಣ್ಣಿಗೆ ಸಂಬಂಧಿಸಿದಂತೆ 7.32 ಕೋಟಿ ಸೇರಿ ಒಟ್ಟಾರೆ ಇಲಾಖೆಗೆ 32.07 ಕೋಟಿ ರು. ರಾಜಧನ ಬಂದಿದೆ ಎಂದು ಸಂಸದರಿಗೆ ಮಾಹಿತಿ ನೀಡಿದರು.

ಉಳಿದಂತೆ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಹಾಗೂ ಶಂಭೂನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕಾನೂನುಬದ್ಧವಾಗಿದ್ದು, ಎರಡೂ ಕ್ರಷರ್‌ಗಳಿಗೂ ಭೇಟಿ ನೀಡಿ ಪರಿಶೀಲಿಸಿದ ಬಳಿಕವೇ ಪರವಾನಗಿ ನೀಡಲಾಗಿದೆ. ಇದು ಕೆಆರ್‌ಎಸ್‌ನಿಂದ ವಾಯುಮಾರ್ಗದಲ್ಲಿ 20 ಕಿ.ಮೀ. ಹೊರಗಿದೆಯಾದ್ದರಿಂದ ಇಲಾಖೆಯ ನಿಯಮಾವಳಿಯಂತೆ ಪರವಾನಗಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳೀಗೌಡ, ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಜಿಪಂ ಸಿಇಒ ಶಾಂತಾ ಎಲ್‌.ಹುಲ್ಮನಿ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ದಿಶಾ ಸಮಿತಿ ಸದಸ್ಯರಾದ ಬೇಲೂರು ಸೋಮಶೇಖರ್‌, ಕೆ.ಪಿ.ಅರುಣಕುಮಾರಿ ಉಪಸ್ಥಿತರಿದ್ದರು.