ಬೆಂಗಳೂರು(ಡಿ.14): ನನ್ನ ಆಯ್ಕೆ ನನಗೇ ಅಚ್ಚರಿಯಾಗಿತ್ತು. ಪಕ್ಷ ನನಗೆ ಈ ಕೊಡುಗೆ ಕೊಡುತ್ತದೆ ಎಂಬ ಯಾವ ಸುಳಿವು ನನಗಿರಲಿಲ್ಲ. ನನ್ನಂಥ ಸಾಮಾನ್ಯ ಕಾರ್ಯಕರ್ತ ರಾಜ್ಯಸಭೆ ಸದಸ್ಯ ಸ್ಥಾನ ಪಡೆಯಲು ಪ್ರಧಾನಿ ಮೋದಿ ಸಾಮ್ರಾಜ್ಯದಲ್ಲಿ ಮಾತ್ರ ಸಾಧ್ಯ! ಎಂದು ರಾಜ್ಯಸಭಾ ಸದಸ್ಯ ಡಾ.ಕೆ.ನಾರಾಯಣ್‌ ಸಂತಸ ವ್ಯಕ್ತಪಡಿಸಿದ್ದಾರೆ. 

ಕಾಸರಗೋಡು ಜಿಲ್ಲೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಹಾಗೂ ಭಾರತೀಯ ಜನತಾ ಪಕ್ಷದ ಸಹಯೋಗದಲ್ಲಿ ಬಿಟಿಎಂ ಲೇಔಟ್‌ನ ಐಡಬ್ಲ್ಯೂಡಬ್ಲ್ಯೂಎ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ರಾಜಕಾರಣದಲ್ಲಿ ರಾಜಕಾರಣಿಗಳ ಮಕ್ಕಳು ಮಾತ್ರ ಸ್ಥಾನ ಪಡೆಯುವುದನ್ನು ನೋಡುತ್ತಿದ್ದೇವೆ. ಆದರೆ, ಬಿಜೆಪಿ ಹಾಗೂ ಪ್ರಧಾನಿ ಮೋದಿ ಸಾಮ್ರಾಜ್ಯದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಮಹತ್ವದ ಸ್ಥಾನ ಕಲ್ಪಿಸಲಾಗುತ್ತಿದೆ. ನನ್ನ ನಿಸ್ವಾರ್ಥ ಸೇವೆ ಪರಿಗಣಿಸಿ ಭಾಜಪದ ಹಿರಿಯರು ನನಗೆ ಈ ಗಿಫ್ಟ್‌ ನೀಡಿದ್ದಾರೆ. ನನ್ನ ಆಯ್ಕೆ ಬಹುತೇಕರಿಗೆ ಅಚ್ಚರಿ ಉಂಟುಮಾಡಿದೆ. ಪ್ರಧಾನಿ ಮೋದಿಯವರು ಯಾವುದೇ ಅಪೇಕ್ಷೆ ಇಲ್ಲದೆ ದುಡಿಯುತ್ತಿರುವ ಲಕ್ಷಾಂತರ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಲು ನನ್ನನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಯ್ಕೆಗೊಳಿಸಿದ್ದಾರೆ’ ಎಂದರು.

'ಕಾಂಗ್ರೆಸ್‌ನಿಂದ ಬೆಂಕಿ ಹಚ್ಚುವ ಕೆಲಸ'

‘ನಾನು ಸಹ ಒಬ್ಬ ಸಾಮಾನ್ಯ ಕಾರ್ಯಕರ್ತ. ನಾನು ಸಂಸ್ಕೃತ ಮಾಸ ಪತ್ರಿಕೆ ಹೊರತಂದು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಕೃತವೇ ನಮ್ಮ ತಾಯಿ. ಹೀಗಾಗಿ ಸಂಸ್ಕೃತದಲ್ಲೇ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನಾನು ನೇಕಾರ ಸಮಾಜದಿಂದ ಬಂದವನು. ಸಮಾಜದಲ್ಲಿ ಸಾಕಷ್ಟುಕೆಲಸ ಮಾಡಬೇಕು. ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಪರಿಹರಿಸುವಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಪಕ್ಷದಲ್ಲೂ ಸಕ್ರೀಯವಾಗಿ ಸಾಮಾನ್ಯ ಕಾರ್ಯಕರ್ತನ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತೇನೆ’ ಎಂದು ಹೇಳಿದರು.

‘ನಾನು ಎಂದಿಗೂ ಅಧಿಕಾರವನ್ನು ಬಯಸಲಿಲ್ಲ. ಆದರೆ, ಇಂದು ಅಧಿಕಾರವೇ ನನ್ನ ಹತ್ತಿರ ಬಂದಿದೆ. ನಾನಿಂದು ಒಂದು ರೀತಿಯ ವಿಚಿತ್ರ ಸನ್ನಿವೇಶಕ್ಕೆ ಸಿಲುಕಿದ್ದೇನೆ. ನನ್ನ ದುಡಿತದ ಶೇ.30ರಷ್ಟು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದೇನೆ. ನಾವು ಯಾವುದೇ ಕೆಲಸವನ್ನು ನಿಸ್ವಾರ್ಥ ಸೇವಾ ಮನೋಭಾವದಿಂದ ಮಾಡಬೇಕು. ಸಮಾಜಕ್ಕಾಗಿ ಕಾರ್ಯಕರ್ತರು ದುಡಿಯಿರಿ. ಇಂದು ನಾವು ಏನಾದರು ಉತ್ತಮ ಕಾರ್ಯಗಳನ್ನು ಮಾಡಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿ, ಬಿಜೆಪಿ ಮುಖಂಡರಾದ ಮುತ್ತಪ್ಪ, ಬಿಟಿಎಂ ಲೇಔಟ್‌ನ ಮುಖಂಡ ಲಲ್ಲೇಶ್‌ ರೆಡ್ಡಿ, ಕೃಪಾಶಂಕರ್‌, ಡಾ.ವಿವೇಕಾನಂದ ಶೆಟ್ಟಿ, ಕಿರಣ್‌ ಭಟ್‌, ರಾಜ್ಯ ಯುವ ಮೋರ್ಚಾ ಖಜಾಂಚಿ ಅನಿಲ್‌ ಶೆಟ್ಟಿ ಇನ್ನಿತರರು ಇದ್ದರು.