ರಾಮನಗರ [ಫೆ.28]: ಬಿಡದಿ ಬೈರಮಂಗಲದ ಜಲಾಶಯ ಶುದ್ಧೀಕರಣ ಕಾಮಗಾರಿ 140 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿದ್ದು,  ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಹಾಗೂ ಮಾಗಡಿ ಶಾಸಕ ಎ.ಮಂಜುನಾಥ್ ಕಾಮಗಾರಿ ವೀಕ್ಷಿಸಿದರು. 

ಕಾಮಗಾರಿ ವೀಕ್ಷಣೆ ಬಳಿಕ ಬಿಡದಿಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕೆರೆಗಳಿಗೆ ನೀರುಣಿಸುವ ಬೃಹತ್ ಕಾಮಗಾರಿ 18 ತಿಂಗಳ ಒಳಗೆ ಮುಗಿಯಲಿದ್ದು, ಇದರಿಂದ 40 ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ದೊರಕಲಿದೆ ಎಂದರು. 

ಶುದ್ಧ ಕುಡಿಯುವ ನೀರು ಪಡೆಯುವ ಈ ಭಾಗದ ಗ್ರಾಮಸ್ಥರ ಬಹುದಿನದ ಕನಸು ಈಡೇರುತ್ತಿದೆ. ಕಾಮಗಾರಿ ಬೇಗ ಪೂರ್ಣಗೊಳ್ಳಲು ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಸಂಸದ ಸುರೇಶ್ ಹೇಳಿದರು. 

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದ ಪ್ರಸ್ತಾಪ

ಇನ್ನು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್ ಆಯ್ಕೆ ವಿಳಂಬ ಆಗುತ್ತಿರುವುದಕ್ಕೆ ಕಾರಣ ಗೊತ್ತಿಲ್ಲ. ನಾನು ಈ ವಿಚಾರದ ಚರ್ಚೆ ಮಾಡಲ್ಲ. ಇದು ಹೈ ಕಮಾಂಡ್ ಗೆ ಬಿಟ್ಟ ವಿಷಯ ಎಂದು ಡಿ.ಕೆ.ಸುರೇಶ್ ಹೇಳಿದರು. 

ಹಲವು ದಿನಗಳಿಂದ ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿಯಲಿದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದು,  ಆದರೆ ಈ ವಿಚಾರ ಇನ್ನೂ ಕೂಡ ಸ್ಪಷ್ಟವಾಗಿಲ್ಲ.