ಚಿಕ್ಕಬಳ್ಳಾಪುರ (ಜ.23):  ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳ ಜೊತೆಗೆ ಕೇಂದ್ರ ಪುರಸ್ಕೃತ ಯೋಜನೆಗಳಾದ ರಾಷ್ಟ್ರೀಯ ನಗರ ಹಾಗೂ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಗಳ ಪ್ರಗತಿ ಕುಂಠಿತಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ಬಿ.ಎನ್‌.ಬಚ್ಚೇಗೌಡ, ಇಲಾಖೆಗಳು ಪ್ರಗತಿ ತೋರದಿದ್ದರೆ ಸುಮ್ನನೆ ಬಿಡಲ್ಲ ಎಂದು ಎಚ್ಚರಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ  ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಸದರು. ವಸತಿ ಯೋಜನೆಗಳಲ್ಲಿ ಪ್ರಗತಿ ಕುಂಠಿತಕ್ಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಬಡವರಿಗೆ ಸೂರು ಕಲ್ಪಿಸಿ :  ಅಧಿಕಾರಿಗಳ ವಸತಿ ಯೋಜನೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಫಲಾನುಭವಿಗಳ ಮನವೊಲಿಸಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ನಲ್ಮ ಯೋಜನೆ ಹಿನ್ನಡೆಗೆ ಸಿಬ್ಬಂದಿ ಕೊರತೆ ಬಗ್ಗೆ ಅಧಿಕಾರಿಗಳು ಸಂಸದರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಸಿದ ಸಂಸದರು ಈ ಬಗ್ಗೆ ನಗರಾಭಿವೃದ್ದಿ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಶೀಘ್ರ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾದ ಶಾಸಕ, ಬಿಜೆಪಿ ಮುಖಂಡರ ಪುತ್ರ .

ಜಿಲ್ಲೆಯಲ್ಲಿ ವಿಶೇಷವಾಗಿ ಬಾಲ್ಯ ವಿವಾಹ ಪ್ರಕರಣಗಳ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸದರು, ಕುಡಿಯುವ ನೀರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು, ಬೇಸಿಗೆ ಎದುರಾಗಲಿರುವುದರಿಂದ ಈಗನಿಂದಲೇ ಕ್ರಿಯಾ ಯೋಜನೆ ಸಿದ್ದಪಡಿಸಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾ ಉಪಾಧ್ಯಕ್ಷೆ ಸರಸ್ವತಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್‌, ಉಪ ಕಾರ್ಯದರ್ಶಿ ನೋಮೇಶ್‌ ಕುಮಾರ್‌ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ದಿಶಾ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ವಿವಾಹ ವಯಸ್ಸು ಎಷ್ಟಿರಬೇಕು?

ದಿಶಾ ಸಭೆಯಲ್ಲಿ ಸಂಸದ ಬಿ.ಎನ್‌.ಬಚ್ಚೇಗೌಡ ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮಣ್‌, ಹೆಣ್ಣು ಮಕ್ಕಳ ವಿವಾಹ ವಯಸ್ಸು 21ಕ್ಕೆ ಏರಿಸುವ ಪ್ರಸ್ತಾವನೆ ಮುಂದಿಟ್ಟಿರುವ ಕುರಿತು ಅಧಿಕಾರಿಗಳ ಅಭಿಪ್ರಾಯ ಕೇಳಿದರು. ಕೆಲವರು 18ವರ್ಷವೇ ಇರಲಿ ಎಂದರೆ ದಿಶಾ ಸಮಿತಿ ಸದಸ್ಯ ಲಕ್ಷ್ಮೇನಾರಾಯಣಗುಪ್ತ 18ಕ್ಕಿಂತ ಕಡಿಮೆ ಇಳಿಸಿಯೆಂದರು. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ ಮಾತ್ರ ವಯಸ್ಸಿನ ಮಿತಿ ಕನಿಷ್ಠ 20ರ ಮೇಲೆ ಇರಬೇಕು. ಚಿಕ್ಕ ವಯಸ್ಸಿಗೆ ವಿವಾಹ ಆದರೆ ಹೆಣ್ಣು ಮಗುವಿನ ಆರೋಗ್ಯದ ಮೇಲೆ ಸಾಕಷ್ಟುದುಷ್ಪರಿಣಾಮಗಳ ಬೀರುತ್ತವೆಂದರು. ಆಗ ಸಂಸದರು ಈ ಬಗ್ಗೆ ತಮಗೆ ಪತ್ರ ಬರೆದುಕೊಟ್ಟರೆ ಅದನ್ನು ವಿತ್ತ ಸಚಿವರ ಅಥವ ಸಂಸತ್‌ ಅಧಿವೇಶನದಲ್ಲಿ ಮಂಡಿಸುವುದಾಗಿ ತಿಳಿಸಿದರು.

ಬಾಯಿ ಬಿಡದ ಅಧಿಕಾರಿಗಳು!

ದಿಶಾ ಸಭೆಯನ್ನು ವರ್ಷದ ಬಳಿಕ ನಡೆಸಿದ ಸಂಸದ ಬಿ.ಎನ್‌.ಬಚ್ಚೇಗೌಡ, ಸಭೆ ಮುಕ್ತಾಯದ ಹಂತದಲ್ಲಿ ಜಿಲ್ಲೆಯಲ್ಲಿ ಏನಾದರೂ ಅಭಿವೃದ್ದಿ ವಿಚಾರದಲ್ಲಿ ಸಮಸ್ಯೆಗಳಿದ್ದರೆ ಯಾವುದೇ ಮುಚ್ಚುಮರೆ ಇಲ್ಲದೇ ಹೇಳುವಂತೆ ಕೇಳಿಕೊಂಡರೂ ಯಾವೊಬ್ಬ ಅಧಿಕಾರಿ ಕೂಡ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬಾಯಿ ಬಿಡಲಿಲ್ಲ. ಮತ್ತೊಂದಡೆ ಜಿಲ್ಲೆಯ ಉಸ್ತುವಾರಿ ಸಚಿವರು ಆರೋಗ್ಯ ಸಚಿವರಾಗಿರುವ ಕಾರಣ ಸಂಸದರು ತಮ್ಮ ಪ್ರಗತಿ ಪರಿಶೀಲನಾ ಸಭೆ ವೇಳೆ ಆರೋಗ್ಯ ಇಲಾಖೆ ಪ್ರಗತಿ ನಡೆಸದೇ ಅವರೊಂದಿಗೆ ನೇರವಾಗಿ ಚರ್ಚೆ ಮಾಡಿಕೊಳ್ಳಿ ನಾನೊಂದು ಹೇಳುವುದು, ಅವರೊಂದು ಹೇಳುವುದು ಬೇಡ ಅಂತ ಹೇಳಿ ಡಿಎಚ್‌ಒರನ್ನು ಕೂರಿಸಿದರು.