Asianet Suvarna News Asianet Suvarna News

ಕೋವಿಡ್‌ ನಿಯಮಗಳೇ ಬಾಗಿಲು ತೆರೆಯಲು ಅಡ್ಡಿ: ಧಾರವಾಡದಲ್ಲಿ ಚಿತ್ರಮಂದಿರ ಓಪನ್‌ ಇಲ್ಲ..!

ಆರ್ಥಿಕ ನಷ್ಟದಲ್ಲಿವೆ ಧಾರವಾಡದ ನಾಲ್ಕೂ ಚಿತ್ರಮಂದಿರಗಳು| ಕೋವಿಡ್‌ ನಿಯಮ ಪಾಲಿಸಿ, ತೆರಿಗೆ ಕಟ್ಟಿ, ನೌಕರರಿಗೆ ಸಂಬಳ ಕಟ್ಟೋದೆ ತಲೆನೋವು| ಕೋವಿಡ್‌ ಹಿನ್ನೆಲೆ ಮಾರ್ಚ್‌ ತಿಂಗಳಲ್ಲಿಯೇ ಬಂದ್‌ ಆಗಿರುವ ಚಿತ್ರಮಂದಿರಗಳು| 

Movie Theaters Did Not Open in Dharwad grg
Author
Bengaluru, First Published Oct 16, 2020, 12:03 PM IST

ಧಾರವಾಡ(ಅ.16): ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಧಾರವಾಡದ ಯಾವೊಂದು ಚಿತ್ರಮಂದಿರಗಳು ಬಾಗಿಲು ತೆರೆಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕೋವಿಡ್‌ ನಿಯಮಗಳನ್ನು ಪಾಲಿಸಿ ಚಿತ್ರಮಂದಿರಗಳನ್ನು ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿದರೂ ಹಲವು ಕಾರಣಗಳಿಂದ ಚಿತ್ರಮಂದಿರಗಳು ಮತ್ತೆ ಆರಂಭಿಸುವ ಧೈರ್ಯ ಮಾಡುತ್ತಿಲ್ಲ. ಕಳೆದ ಮಾರ್ಚ್‌ ತಿಂಗಳಲ್ಲಿ ಬಾಗಿಲು ಮುಚ್ಚಿರುವ ಧಾರವಾಡದ ಶ್ರೀನಿವಾಸ, ಪದ್ಮಾ, ವಿಜಯಾ ಹಾಗೂ ಸಂಗಮ ಸಿನಿಮಾ ಮಂದಿರಗಳು ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿವೆ.

ಲಾಕ್‌ಡೌನ್‌ ಮಧ್ಯೆಯೂ ಸಿಬ್ಬಂದಿಗೆ ಸಂಬಳ ಹಾಗೂ ನಿರ್ವಹಣೆಯಿಂದ ಬೇಸತ್ತು ಹೋಗಿದ್ದಾರೆ. ಇದೀಗ ಕೋವಿಡ್‌ ನಿಯಮ ಪಾಲಿಸಿ ಆರಂಭಿಸಿ ಎಂದು ಒಪ್ಪಿಗೆ ಸೂಚಿಸಿದರೂ ಕೋವಿಡ್‌ ನಿಯಮಗಳೇ ಬಾಗಿಲು ತೆರೆಯಲು ಅಡ್ಡಿಯಾಗಿವೆ.

ಏನು ನಿಯಮ?:

ಚಿತ್ರಮಂದಿರ ಸಿಬ್ಬಂದಿ ಪಿಪಿಇ ಕಿಟ್‌ ಧರಿಸುವುದು, ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸೇನ್‌, ಶೇ. 50 ರಷ್ಟು ಮಾತ್ರ ವೀಕ್ಷಕರಿಗೆ ಅವಕಾಶ ಹೀಗೆ ಅನೇಕ ನಿಯಮಗಳನ್ನು ಹಾಕಿದ್ದು, ಇವುಗಳನ್ನು ಜಾರಿ ಮಾಡಲು ನಮಗೆ ಸಾಧ್ಯವೇ ಇಲ್ಲ. ಲಾಕ್‌ಡೌನ್‌ ಮುಂಚೆಯೂ ಟಿವಿ, ಮೊಬೈಲ್‌, ಲ್ಯಾಪ್‌ಟಾಪ್‌ ಪ್ರಭಾವದಿಂದ ಜನರು ಚಿತ್ರಮಂದಿರಗಳಿಗೆ ಬಂದು ವೀಕ್ಷಿಸುವುದು ಕಡಿಮೆಯಾಗಿತ್ತು. ಇದೀಗ ಕೋವಿಡ್‌ ನಿಯಮ ಪಾಲಿಸಿದರೂ ಅದರ ಭಯದಿಂದ ಯಾರೊಬ್ಬರೂ ಚಿತ್ರಮಂದಿರದ ಕಡೆ ಸುಳಿಯೋದಿಲ್ಲ ಎಂಬ ಸಂದೇಹ ನಮಗಿದೆ. ಇದರೊಂದಿಗೆ ಸ್ಥಳೀಯ ಮಹಾನಗರ ಪಾಲಿಕೆ ಬಾಡಿಗೆ ಕಟ್ಟಡ ತುಟ್ಟಿಮಾಡಿದೆ. ಪರವಾನಗಿ ಶುಲ್ಕವನ್ನು ಶೇ. 22 ರಷ್ಟು ಏರಿಕೆ ಮಾಡಲಾಗಿದೆ. ಇದೆಲ್ಲವನ್ನು ಸರಿಪಡಿಸಿ ಚಿತ್ರಮಂದಿರಗಳನ್ನುಆರಂಭಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ಶ್ರೀನಿವಾಸ- ಪದ್ಮಾ ಚಿತ್ರಮಂದಿರದ ಮಾಲೀಕರಾದ ಬಾಬಣ್ಣ ಕುಲಕರ್ಣಿ.

175 ಆಸನದ ಮಲ್ಟಿಪ್ಲೆಕ್ಸ್‌ನಲ್ಲಿ ಒಬ್ಬನಿಗೇ ಚಿತ್ರ ಪ್ರದರ್ಶನ..!

ಒಂದು ವೇಳೆ ಚಿತ್ರಮಂದಿರಗಳು ಆರಂಭವಾದರೂ ನಾವು ಮಾತ್ರ ಯಾವ ಹೊಸ ಚಿತ್ರ ಬಂದರೂ ಹೋಗುವ ಮನಸ್ಸಿಲ್ಲ. ಧಾರವಾಡದಲ್ಲಿ ಈಗಾಗಲೇ ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದ್ದು, ಯಾವುದೇ ಕಾರಣಕ್ಕೂ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ ಎಂದು ಸಾಧನಕೇರಿಯ ನಿವಾಸಿ ವೃಷಭ ಕೊರೋಲೆ ಹೇಳಿದರೆ, ಬರೀ ಮನೆಯಲ್ಲಿದ್ದು ಬೇಸರ ಮೂಡಿಸಿದೆ. ಹೊಸ ಚಿತ್ರಗಳನ್ನು ನೋಡುವಾಸೆ. ಚಿತ್ರಮಂದಿರ ಆರಂಭಿಸಿದರೆ ಎಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಹೋಗುವಾಸೆ ಇದೆ ಎಂದು ಗಾಂಧಿನಗರದ ವಿಶಾಲ ಮರಡಿ ಆಶಯ ವ್ಯಕ್ತಪಡಿಸುತ್ತಾರೆ.

ಧಾರವಾಡದಲ್ಲಿ ಒಟ್ಟು ಏಳು ಚಿತ್ರಮಂದಿರಗಳಿದ್ದವು. ಒಂದೊಂದಾಗಿ ಬಾಗಿಲು ಮುಚ್ಚುತ್ತಾ ಸಾಗುತ್ತಿವೆ. ಆರಂಭದಲ್ಲಿ ಸಿಬಿಟಿ ಬಳಿಯ ರೀಗಲ್‌ ಬಂದ್‌ ಆಗಿ ಇದೀಗ ಅಲ್ಲಿ ವಾಣಿಜ್ಯ ಮಳಿಗೆ ಆಗಿದೆ. ನಂತರದಲ್ಲಿ ಮಾಡರ್ನ್‌ ಸಿನಿಮಾ ಮಂದಿರ ಬಂದ್‌ ಆಗಿ ಈಗ ಮದುವೆ ಹಾಲ್‌ ಆಗಿದೆ. ನಂತರದಲ್ಲಿ ಈಚೆಗೆ ಲಕ್ಷ್ಮೀ ಮಂದಿರ ಬಂದ್‌ ಆಗಿದೆ. ಇದೀಗ ಕೋವಿಡ್‌ ಹಿನ್ನೆಲೆ ಎಂಟು ತಿಂಗಳಿಂದ ಎಲ್ಲ ಚಿತ್ರಮಂದಿರಗಳು ಬಂದ್‌ ಆಗಿವೆ. ಹೀಗಾಗಿ ಸದ್ಯ ಚಿತ್ರಮಂದಿರಗಳ ಭವಿಷ್ಯ ಡೋಲಾಯಮಾನವಾಗಿದ್ದು, ಮುಂದಾದರೂ ಸರಿ ಹೋಗುವುದೇ ಕಾದು ನೋಡಬೇಕಿದೆ.
 

Follow Us:
Download App:
  • android
  • ios