ತಾಯಿಯ ಎದೆಹಾಲು ಅಮೃತಕ್ಕೆ ಸಮಾನ: ಅಶೋಕ್
ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಎದೆಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲ ಪೋಷಕಾಂಶಗಳ ಜೊತೆಗೆ ಅಗತ್ಯ ರೋಗ ನಿರೋಧಕ ಶಕ್ತಿ ಅಡಗಿದ್ದು ಪ್ರತಿಯೊಬ್ಬ ತಾಯಂದಿರು ಮಗುವಿಗೆ ಎದೆಹಾಲು ಉಣಿಸಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಟಿ. ಅಶೋಕ್ ತಿಳಿಸಿದರು.
ತಿಪಟೂರು :ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಎದೆಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲ ಪೋಷಕಾಂಶಗಳ ಜೊತೆಗೆ ಅಗತ್ಯ ರೋಗ ನಿರೋಧಕ ಶಕ್ತಿ ಅಡಗಿದ್ದು ಪ್ರತಿಯೊಬ್ಬ ತಾಯಂದಿರು ಮಗುವಿಗೆ ಎದೆಹಾಲು ಉಣಿಸಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಟಿ. ಅಶೋಕ್ ತಿಳಿಸಿದರು.
ತಾಲೂಕಿನ ಅನಗೊಂಡನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ವಿಶ್ವಸ್ತನ್ಯಪಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಗುವಿನ ಬೆಳವಣಿಗೆ ತಾಯಿಯ ಗರ್ಭದಿಂದಲೇ ಆರಂಭಗೊಳ್ಳುವುದರಿಂದ ತಾಯಿ ಉತ್ತಮ ಪೌಷ್ಟಿಕ ಆಹಾರಕ್ಕೆ ಒತ್ತು ನೀಡಬೇಕು. ಸ್ಥಳೀಯವಾಗಿ ಸಿಗುವಂತಹ ಆಹಾರ ಸೇವನೆ ಮಾಡಬೇಕು ಸೊಪ್ಪು, ತರಕಾರಿಗಳ ಸೇವನೆ, ಆರೋಗ್ಯ ಇಲಾಖೆಯಿಂದ ಸಿಗುವ ಆರೋಗ್ಯ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಎದೆಹಾಲು ಉಣಿಸುವ ತಾಯಂದಿರಿಗೆ ಕುಟುಂಬದ ಸಹಕಾರ ಅತಿಮುಖ್ಯವಾಗಿದ್ದು, ಅವರನ್ನು ಸಂತೋಷದಿಂದ ನೋಡಿಕೊಳ್ಳಬೇಕು. ಪೌಡರ್ ಹಾಲು, ಬಾಟಲಿ ಹಾಲು ಮಗುವಿನ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ತಾಯಂದಿರು ಈ ಬಗ್ಗೆ ಜಾಗೃತರಾಗಬೇಕು. ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಪೌಷ್ಟಿಕ ಪುಷ್ಠಿಯನ್ನು ಉಪಯೋಗಿಸಬೇಕೆಂದರು.
ಆಯುಷ್ ವೈದ್ಯಾಧಿಕಾರಿ ಡಾ. ಸುಮನಾ ಮಾತನಾಡಿ, ತಾಯಂದಿರು ತಮ್ಮ ಮಕ್ಕಳಿಗೆ ನಿಗಧಿತ ಅವಧಿಯವರೆಗೆ ಎದೆ ಹಾಲುಣಿಸುವುದು ಹಾಗೂ ಮೇಲು ಆಹಾರ ನೀಡುವುದು ಅಗತ್ಯ. ಎದೆ ಹಾಲುಣಿಸುವ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಬಿಟ್ಟು ಮಗು ಜನಿಸಿದ ಅರ್ಧಗಂಟೆಯೊಳಗೆ ಹಾಲುಣಿಸಬೇಕೆಂದು ಹೆಣ್ತೆತನದ ಮಹತ್ವ ಬಗ್ಗೆ ಹಾಗೂ ನಾಟಿ ಹಸುವಿನ ಹಾಲಿನ ಮಹತ್ವ ಕುರಿತು ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ ಪ್ರೀತಿ ಮಾತನಾಡಿ, ಗರ್ಭಿಣಿ ಎಂದು ತಿಳಿದ ತಕ್ಷಣ ಆಕೆ ತನ್ನ ಸ್ತನವನ್ನು ಆರೈಕೆ ಮಾಡಿಕೊಳ್ಳುವುದು ಮತ್ತು ಮಗು ಹುಟ್ಟಿದ ತಕ್ಷಣ ಮೊದಲ ಮೂರು ದಿನ ಬರುವ ಗೀಬಿನ ಹಾಲನ್ನು ಮಗುವಿಗೆ ನೀಡಲೇಬೇಕು. ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಲಸಿಕೆ ಇದ್ದಂತೆ. ಪೌಷ್ಟಿಕಾಂಶ ಉತ್ಕೃಷ್ಟವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿಕ ಕಾಯಿಲೆಗಳನ್ನಿ ತಡೆಗಟ್ಟುತ್ತದೆ ಎಂದರು.
ಅಧ್ಯಕ್ಷತೆಯನ್ನು ರಂಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ವಹಿಸಿದ್ದರು. ಈ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಹಾಗೂ ಕದಳಿ ವೇದಿಕೆ ಅಧ್ಯಕ್ಷೆ ಸ್ವರ್ಣಗೌರಿ ಹಾಗೂ ಪದಾಧಿಕಾರಿಗಳು ಗರ್ಭಿಣಿ ಮತ್ತು ಬಾಣಂತಿಯರಿಗೆ ಮಡಿಲು ತುಂಬಿದರು. ಗ್ರಾಮದ ಹಿರಿಯ ನಾಗರೀಕರಾದ ಗೌರಮ್ಮನವರಿಗೆ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಂಕರ್ ಬೀಳೂರು, ಉಪಾಧ್ಯಕ್ಷೆ ಗೌತಮಿ, ಸದಸ್ಯ ಆನಂದಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ್, ಮೇಲ್ವಿಚಾರಕಿ ಗೌರವ್ವ ಎಣ್ಣಿ, ಶೈಲಾ, ತ್ರಿವೇಣಿ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ಗ್ರಾಮಸ್ಥರು ಭಾಗವಹಿಸಿದ್ದರು.
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಮೂಲಕ ಎದೆಹಾಲಿನ ಮಹತ್ವದ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಮಗು ಜನಿಸಿದ ಒಂದು ಗಂಟೆಯೊಳಗೆ ಮಗುವಿಗೆ ತಾಯಿ ಎದೆ ಹಾಲನ್ನು ನೀಡುವುದು ಅವಶ್ಯಕವಾಗಿದ್ದು, ಅದು ಪ್ರಥಮ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.
ಎಸ್. ಗೋಪಾಲಪ್ಪ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ