ಮಂಗಳೂರು(ಮಾ.14): ಹೆತ್ತಮ್ಮನಿಂದಲೇ ಹಿಂಸೆಗೆ ತುತ್ತಾಗುವ ಕಂದಮ್ಮಗಳಿಗೆ ರಕ್ಷಣೆ ನೀಡುವಂತೆ ಶಾಲಾ ವಿದ್ಯಾರ್ಥಿಯೊಬ್ಬ ಸರಕಾರಕ್ಕೆ ಮಾಡಿದ ಮನವಿಗೆ ಸ್ಪಂದನೆ ವ್ಯಕ್ತವಾಗಿದ್ದು, ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಶುಕ್ರವಾರದಂದು ಉಪ್ಪಿನಂಗಡಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮಹಿಳೆಯ ಆಕ್ರಮಣಕಾರಿ ವರ್ತನೆಗೆ ಅಸಹಾಯಕರಾಗಿ ಅಧಿಕಾರಿಗಳು ಹಿಂತಿರುಗಬೇಕಾಯಿತು.

ಉಪ್ಪಿನಂಗಡಿ ಗ್ರಾ.ಪಂ. ಕಚೇರಿ ಬಳಿ ರಾತ್ರಿಯಾಗುತ್ತಲೇ ಕಾಣಿಸಿಕೊಳ್ಳುವ ಓರ್ವ ಮಹಿಳೆ ತನ್ನ ಸುಮಾರು 2 ವರ್ಷ ಪ್ರಾಯದ ಮಗ ಹಾಗೂ ಹಸುಕೂಸಿನೊಂದಿಗೆ ಇದ್ದು, ಮದ್ಯ ಸೇವನೆಯ ಅಮಲಿನಲ್ಲಿ ತನ್ನ ಕರುಳ ಕುಡಿಯ ಮೇಲೆಯೇ ಆಕ್ರಮಣಕಾರಿಯಾಗಿ ವರ್ತಿಸುತ್ತಾ ಇದ್ದು, ಕಳೆದ ಜನವರಿ ತಿಂಗಳಲ್ಲಿ ಮಗನ ಮೇಲಿನ ಆಕ್ರಮಣ ವಿಕೋಪಕ್ಕೆ ತಿರುಗಿತ್ತು. ಅಮ್ಮನ ಅಮಾನುಷ ಪೆಟ್ಟಿನಿಂದ ತಪ್ಪಿಸಿಕೊಳ್ಳಲು ಮಗು ರಸ್ತೆಯಲ್ಲಿ ಸಾಗುವ ಜನರ ಕಾಲು ಹಿಡಿದು ರಕ್ಷಣೆಗಾಗಿ ಹಂಬಲಿಸುತ್ತಿದ್ದ ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿತ್ತು.

ಮದುವೆಗೆ ನಿರ್ಬಂಧ : ಕಲ್ಯಾಣ ಮಂಟಪಗಳಿಗೆ 50 ಕೋಟಿ ನಷ್ಟ!

ಈ ದೃಶ್ಯವನ್ನು ಕಂಡ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ 7ನೇ ತರಗತಿಯ ಸ್ಕೌಟ್ಸ್‌ ವಿದ್ಯಾರ್ಥಿ ಅವನೀಶ್‌ ಕುಮಾರ್‌, ತಾಯಿಯ ಹಲ್ಲೆಯಿಂದ ಮಗುವನ್ನು ರಕ್ಷಿಸಿ - ಮಗುವಿಗೆ ಸುರಕ್ಷಿತ ಜೀವನ ಒದಗಿಸುವಂತೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವರಿಗೆ ಜನವರಿ 31 ರಂದು ಪತ್ರ ರವಾನಿಸಿದ್ದ.

ಈ ಪತ್ರಕ್ಕೆ ಇಲಾಖಾಧಿಕಾರಿಗಳು ತ್ವರಿತ ಸ್ಪಂದಬೆ ನೀಡಿದರಾದರೂ, ಮಹಿಳೆ ತನ್ನ ಮಕ್ಕಳೊಂದಿಗೆ ರಾತ್ರಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ, ರಾತ್ರಿ ವೇಳೆಯ ಕಾರ್ಯಾಚರಣೆ ಅಸಾಧ್ಯ ಎಂಬ ಮಾತು ಕೇಳಿಬಂದಿತ್ತು. ಈ ಮಧ್ಯೆ ಪುಟಾಣಿ ಮಕ್ಕಳ ಸಂಕಷ್ಟವನ್ನು ಗಮನಿಸಿದ ಉಪ್ಪಿನಂಗಡಿಯ ಉದ್ಯಮಿ ಕರುಣಾಕರ ಪೂಜಾರಿ ಎಂಬವರು ಶುಕ್ರವಾರದಂದು ಬೆಳಗ್ಗೆ 6 ಗಂಟೆಯಿಂದ ಮಹಿಳೆ ಮತ್ತು ಮಕ್ಕಳ ಮೇಲೆ ನಿಗಾಯಿರಿಸಿ ಹಗಲಿನಲ್ಲಿ ಮಹಿಳೆ ಎಲ್ಲಿರುತ್ತಾಳೆಂದು ಇಲಾಖೆಗೆ ತಿಳಿಸಿದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರಿನ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಹಿಳೆಯನ್ನು ಮಕ್ಕಳ ಸಹಿತ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದರಾದರೂ, ತೀವ್ರವಾಗಿ ಪ್ರತಿರೋಧ ತೋರಿದ ಮಹಿಳೆಯನ್ನು ನಿಯಂತ್ರಿಸಲಾಗದೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಹಿಂತಿರುಗಿದರು.

ಮೂರು ಬಾರಿ ವಶಕ್ಕೆ ಪಡೆದಿದ್ದರಂತೆ:

ಮಹಿಳೆಯನ್ನು ಕಂಡ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಈ ಮಹಿಳೆಯನ್ನು ಈಗಾಗಲೇ ಮೂರು ಬಾರಿ ವಶಕ್ಕೆ ಪಡೆದು ಆಶ್ರಯ ಕಲ್ಪಿಸಲಾಗಿದ್ದರೂ, ಆಕೆ ತನ್ನ ಹೆತ್ತ ಮಕ್ಕಳನ್ನೇ ಕೊಲ್ಲಲು ಯತ್ನಿಸಿದ ಕಾರಣಕ್ಕೆ ಬಿಡಲಾಗಿತ್ತು. ಆಕೆಯಿಂದ ಮಕ್ಕಳನ್ನು ಬೇರ್ಪಡಿಸಲು ಇಲಾಖಾನುಮತಿ ದೊರೆತರೆ ಮಕ್ಕಳ ರಕ್ಷಣೆಗೆ ಬೇರೆ ಕಾರ್ಯತಂತ್ರ ರೂಪಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.