ರಾತ್ರಿ 9 ಗಂಟೆ 9 ನಿಮಿಷ: ಅತ್ತ ಬೆಳಗಿದ ದೀಪಗಳು, ಇತ್ತ ಹೊಸದುರ್ಗದಲ್ಲಿ ಜನಿಸಿತು ಮಗು!
ದೇಶಾದ್ಯಂತ ಬೆಳಗಿದ ಒಗ್ಗಟ್ಟಿನ ದೀಪ| ಒಂಭತ್ತು ಗಂಟೆ ಒಂಭತ್ತು ನಿಮಿಷ ಭಾರತದೆಲ್ಲೆಡೆ ಕತ್ತಲ ನಡುವೆ ಬೆಳಕಿನಾಟ| ಇತ್ತ ಹೊಸದುರ್ಗದಲ್ಲಿ ಆಂಬುಲೆನ್ಸ್ನಲ್ಲಿ ಗಂಡುಮಗುವಿಗೆ ಜನ್ಮ ಕೊಟ್ಟ ತಾಯಿ
ಚಿತ್ರದುರ್ಗ(ಏ.06): ಏಪ್ರಿಲ್ 05 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷದವರೆಗೆ ಒಂದೆಡೆ ಇಡೀ ದೇಶ ಕೊರೋನಾ ತಡೆಯುವ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶಿಸಿ, ಪಿಎಂ ಮೋದಿ ಮನವಿಯಂತೆ ದೀಪ ಬೆಳಗಿಸುತ್ತಿದ್ದರೆ, ಇತ್ತ ಹೊಸದುರ್ಗದಲ್ಲಿ ತಾಯಿಯೊಬ್ಬಳು ಒಂಭತ್ತು ಗಂಟೆ ಒಂಭತ್ತು ನಿಮಿಷಕ್ಕೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹೌದು ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷದವರೆಗೆ ದೇಶದ ಪ್ರಧಾನಿ ಸೇರಿದಂತೆ ಗಣ್ಯರು ಸಿನಿ ತಾರೆಯರು ಹಾಗೂ ದೇಶದ ನಾಗರಿಕರೆಲ್ಲರೂ ಮನೆಯ ಲೈಟ್ಸ್ ಆರಿಸಿ ದೀಪ ಬೆಳಗಿಸಿದ್ದರು. ಅಷ್ಟೇ ಯಾಕೆ ಸೂರಿಲ್ಲದೆ ಕಡು ಬಡತನದಲ್ಲಿದ್ದವರೂ ಹಣತೆ ಹಚ್ಚುವ ಮೂಲಕ ಕೊರೋನಾ ಸಮರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಕತ್ತಲೆಯ ನಡುವೆ ದೀಪದ ಬೆಳಕಿನ ಮೂಲಕ, ಈ ಸಮರದಲ್ಲಿ ನಾವೆಲ್ಲಾ ಒಂದಾಗಿದ್ದೇವೆ ಎಂಬ ಸಂದೇಶ ನೀಡಿದ್ದರು.
ನನ್ನ ಭಾರತ ಬೆಳಗುತಿರಲಿ: ಕೊರೋನಾ ಸಮರಕ್ಕೆ ಮತ್ತೆ ಒಗ್ಗಟ್ಟಿನ ಮಂತ್ರ!
ಹೀಗಿರುವಾಗ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರದ ಮಾವಿನಕಟ್ಟೆ ಸರ್ಕಲ್ ನಲ್ಲಿ ಜ್ಯೋತಿ ಬೆಳಗಿಸುವ ಸಮಯದಲ್ಲಿ ಇಲ್ಲಿನ ಅಡವಿಸಂಗೇಹಳ್ಳಿ ಗ್ರಾಮದ ರೇಖಾ ಗುರುಮೂರ್ತಿ ಎಂಬುವರು ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇಡೀ ದೇಶವೇ ದೀಪ ಹಚ್ಚಿ ಕೊರೋನಾ ನಿವಾರಣೆಗೆ ಪಣ ತೊಟ್ಟು ಒಗ್ಗಟ್ಟಾದ ಸಮಯದಲ್ಲಿ ಮಗು ಹುಟ್ಟಿದ್ದಕ್ಕೆ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.