ಬೆಂಗಳೂರು(ಮಾ.22): ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ರಾಜಧಾನಿಯಲ್ಲಿ ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್‌ ತಂಡದ ತಾಯಿ ಮತ್ತು ಇಬ್ಬರು ಮಕ್ಕಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಮಧ್ಯಪ್ರದೇಶದ ಭೂಪಾಲ್‌ ಮೂಲದ ಜನಿಯಾ, ಆಕೆಯ ಮಕ್ಕಳಾದ ಅಬುಜರ್‌ ಅಲಿ ಹಾಗೂ ಅಬ್ದುಲ್‌ ಹುಸೇನ್‌ ಬಂಧಿತರಾಗಿದ್ದು, ಆರೋಪಿಗಳಿಂದ .40 ಲಕ್ಷ ಮೌಲ್ಯದ 1 ಕೆ.ಜಿ 35 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ವಿವೇಕನಗರ ಸಮೀಪ ಮಹಿಳೆಯೊಬ್ಬರ ಸರ ಅಪಹರಣ ನಡೆದಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ ಸಿಸಿಬಿ, ಸಿಸಿಟಿವಿ ಕ್ಯಾಮರಾ, ಮೊಬೈಲ್‌ ಕರೆಗಳು ಹಾಗೂ ಬಾತ್ಮೀದಾರರ ಮಾಹಿತಿ ಆಧರಿಸಿ ತಾಯಿ ಮತ್ತು ಮಕ್ಕಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲೇ ಮಾಹಿತಿ ವಿನಿಮಯ:

ಮಧ್ಯಪ್ರದೇಶದ ಮೂಲದ ಜನಿಯಾ, ತಮ್ಮ ಕುಟುಂಬದ ಜತೆ ಧಾರವಾಡದ ಸಮೀಪ ನೆಲೆಸಿದ್ದಾಳೆ. ಹಲವು ವರ್ಷಗಳಿಂದ ಆಕೆಯ ಮಕ್ಕಳು ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದು, ಈ ಕೃತ್ಯಕ್ಕೆ ಜನಿಯಾ ಸಹ ಸಾಥ್‌ ಕೊಟ್ಟಿದ್ದಾಳೆ. ರಸ್ತೆಯಲ್ಲಿ ಸಂಚರಿಸುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರಗಳ್ಳತನ ನಡೆಸುತ್ತಿದ್ದ ಅಲಿ ಮತ್ತು ಹುಸೇನ್‌, ಕದ್ದ ಆಭರಣಗಳನ್ನು ತಾಯಿ ಮೂಲಕ ವಿಲೇವಾರಿ ಮಾಡಿಸುತ್ತಿದ್ದರು.

2010ರಲ್ಲಿ ಸರಗಳ್ಳತನ ಪ್ರಕರಣ ಸಂಬಂಧ ಇಬ್ಬರನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ಅವರು, ಮತ್ತೆ ತಮ್ಮ ಚಾಳಿ ಮುಂದುವರಿಸಿದ್ದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಸಹ ಅವರು ಕೈಚಳ ತೋರಿಸಿದ್ದಾರೆ ಎಂದು ಆಯುಕ್ತ ಭಾಸ್ಕರ್‌ರಾವ್‌ ತಿಳಿಸಿದ್ದಾರೆ.

ಜನತಾ ಕರ್ಫ್ಯೂ: ದೇಶವಿಂದು ಸ್ತಬ್ಧ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್‌ ಕರೆ ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳುತ್ತೇವೆ ಎಂಬ ಕಾರಣದಿಂದ ಆರೋಪಿಗಳು, ವಾಟ್ಸ್‌ಆ್ಯಪ್‌ ಮೂಲಕ ತಂಡದ ಸದಸ್ಯರ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ನಗರದಲ್ಲಿ ಯಾವ ಪ್ರದೇಶದಲ್ಲಿ ಎಷ್ಟುಗಂಟೆ ಕೃತ್ಯ ಎಸಗಬೇಕು. ಸರ ಅಪಹರಣ ಬಳಿಕ ತಪ್ಪಿಸಿಕೊಳ್ಳುವ ಮಾರ್ಗಗಳು ಹೀಗೆ ಪ್ರತಿಯೊಂದು ವಿಷಯವನ್ನು ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಳ್ಳುತ್ತಿದ್ದರು. ವಾಟ್ಸ್‌ಆ್ಯಪ್‌ ಬಳಕೆಯಿಂದ ಅವರ ಪತ್ತೆ ಕಾರ್ಯವು ಕಷ್ಟವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಬಂಧನದಿಂದ ಕೆ.ಆರ್‌.ಪುರದ 4, ಮಡಿವಾಳ 3, ಬಾಣಸವಾಡಿ, ಬಾಗಲೂರುಗಳಲ್ಲಿ ತಲಾ ಎರಡು, ಹಲಸೂರು, ವಿಜಯನಗರ, ಹಲಸೂರು ಗೇಟ್‌, ಜ್ಞಾನಭಾರತಿ, ವಿಜಯನಗರ, ವಿವೇಕನಗರ, ಚಾಮರಾಜಪೇಟೆ, ವೈಯಾಲಿಕಾವಲ್‌, ಪರಪ್ಪನ ಅಗ್ರಹಾರ, ಸಿದ್ದಾಪುರ ಹಾಗೂ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಸೇರಿದಂತೆ ಒಟ್ಟು 23 ಪ್ರಕರಣಗಳು ಪತ್ತೆಯಾಗಿವೆ ಎಂದು ಆಯುಕ್ತ ಭಾಸ್ಕರ್‌ ರಾವ್‌ ವಿವರಿಸಿದ್ದಾರೆ.

ಇತ್ತೀಚೆಗೆ ವಿವೇಕನಗರ ಸೇರಿದಂತೆ ಕೆಲವು ಕಡೆ ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಸರ ಅಪಹರಣಕಾರರ ವಿರುದ್ಧ ಕಾರ್ಯಾಚರಣೆ ನಡೆಸಿದ ಎಸಿಪಿ ಮದುವಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಹಜರೇಶ್‌ ಕಿಲ್ಲೇದಾರ್‌ ನೇತೃತ್ವದ ತಂಡ ಕೊನೆಗೆ ಆರೋಪಿಗಳನ್ನು ಬಂಧಿಸಿದೆ.

ಸರಗಳ್ಳರ ಐಷರಾಮಿ ಜೀವನ

ಸರಗಳ್ಳತನ ಕೃತ್ಯದಲ್ಲಿ ಸಂಪಾದಿಸಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು. ಪ್ರಮುಖ ನಗರಗಳಿಗೆ ಸರ ಅಪಹರಣ ಸಲುವಾಗಿ ತೆರಳುತ್ತಿದ್ದ ಆರೋಪಿಗಳು, ಪಂಚತಾರಾ ಹೋಟೆಲ್‌ಗಳಲ್ಲೇ ತಂಗುತ್ತಿದ್ದರು. ಉಬರ್‌, ಓಲಾ ಕ್ಯಾಬ್‌ ಬಳಸುತ್ತಿದ್ದ ಅವರು, ಬಳಿಕ ದ್ವಿಚಕ್ರ ವಾಹನಗಳನ್ನು ಬಾಡಿಗೆ ಪಡೆದು ದುಷ್ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ತಂದೆ: ಕಾರಣ?

ಆರೋಪಿಗಳು ಅಂತರಾಜ್ಯ ಸರಗಳ್ಳರು. ದೆಹಲಿ, ಭೂಪಾಲ್‌ ಹಾಗೂ ಮುಂಬೈ ಸೇರಿದಂತೆ ದೇಶದ ವಿವಿಧೆಡೆ ವಿಮಾನದಲ್ಲಿ ಪ್ರಯಾಣಿಸಿ ಸರಗಳ್ಳತನ ಕೃತ್ಯ ಎಸಗುತ್ತಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ತಂಡದ ಜತೆ ಮಾತುಕತೆಗೆ ವಾಟ್ಸ್‌ಆ್ಯಪ್‌ ಮಾತ್ರ ಬಳಸುತ್ತಿದ್ದರು ಎಂದು ಪೊಲೀಸ್ ಆಯುಕ್ತ ಎಸ್‌.ಭಾಸ್ಕರ್‌ರಾವ್‌ ತಿಳಿಸಿದ್ದಾರೆ.