ವಿಜಯನಗರ: ಒಂದೇ ಕಡೆ ಗೂಟ ಹೊಡೆದಿದ್ದ ಪೊಲೀಸರ ಬೆವರಿಳಿಸಿದ ಎಸ್ಪಿ..!
* ಒಂದೇ ಹಂತದಲ್ಲಿ ಸಾವಿರ ಪೊಲೀಸ್ ಸಿಬ್ಬಂದಿ ವರ್ಗಾವಣೆ
* ನೂತನ ವಿಜಯನಗರ ಜಿಲ್ಲೆಯ ಎಸ್ಪಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
* ಜನಪ್ರತಿನಿಧಿಗಳ ಮಾತಿಗೂ ಜಗ್ಗದ ಎಸ್ಪಿ ಖಡಕ್ ನಿರ್ಧಾರ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯನಗರ
ವಿಜಯನಗರ(ಜೂ.23): ರಾಜ್ಯದ 31ನೇ ಜಿಲ್ಲೆಯಾಗಿ ಹೊರಹೊಮ್ಮಿರೋ ವಿಜಯನಗರ ಜಿಲ್ಲೆಯೂ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರೋ ಜಿಲ್ಲೆಗಳ ಪಟ್ಟಿಗೆ ಸೇರಿದೆ. ಇದಕ್ಕೆ ಕಾರಣ ಹೆಚ್ಚು ಹೆಚ್ಚು ಅನುದಾನ ಬರುತ್ತಿರೋದು ಒಂದೆಡೆಯಾದ್ರೆ, ಅಭಿವೃದ್ಧಿ ಮಾಡಬೇಕೆನ್ನುವ ಇಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕಾರಣ ಎಂದ್ರು ತಪ್ಪಾಗಲಿಕ್ಕಿಲ್ಲ. ಇನ್ನೂ ಬೆಳೆಯುತ್ತಿರೋ ಜಿಲ್ಲೆಯ ಆಡಳಿತ ಸುಧಾರಣೆಗೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮೂಲಕ ಇದೀಗ ಪೊಲೀಸ್ ಇಲಾಖೆ ಮುಂದಾಗಿದ್ದು, ಒಂದೇ ದಿನ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಅವಳಿ ಜಿಲ್ಲೆಯ ಪೊಲೀಸ್ ಇಲಾಖೆ ಮಟ್ಟಿಗೆ ಇದೊಂದು ದಾಖಲೆ ಎನ್ನಲಾಗುತ್ತಿದೆ.
ಒಂದೇ ಕಡೆ ಗೂಟ ಹೊಡೆದುಕೊಂಡು ಕುಳಿತಿದ್ದ ಸಿಬ್ಬಂದಿ ಬೆವರಳಿಸಿದ ಎಸ್ಪಿ
ಹೌದು, ಜಿಲ್ಲೆಯಾಗಿ ಒಂದೇ ವರ್ಷದಲ್ಲಿ ಆಡಳಿತ ಯಂತ್ರ ಸುಧಾರಣೆಗೆ ವಿಜಯನಗರ ಪೊಲೀಸ್ ಇಲಾಖೆ ಭಾರಿ ಕಸರತ್ತು ಮಾಡಿದೆ. ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರ ವರ್ಗಾವಣೆ ಮಾಡಿ ಆದೇಶ ಮಾಡೋ ಮೂಲಕ ಇಲ್ಲಿರೋ ಪೊಲಿಸರು ಭರ್ಜರಿ ಶಾಕ್ ನೀಡಿದೆ. ಅದರಲ್ಲೂ ಹಲವು ವರ್ಷಗಳಿಂದ ಒಂದೇ ಕಡೆ ಗೂಟ ಹೊಡೆದು ಕೊಂಡು ಕುಳಿತಿರೋ ಪೊಲೀಸರಿಗೆ ಬಿಸಿ ಮುಟ್ಟಿಸಿದ ಎಸ್ಪಿ ಅರುಣ್ ಕುಮಾರ 900 ಪೇದೆಗಳು ಸೇರಿದಂತೆ ಸಾವಿರ ಪೊಲೀಸ್ ಸಿಬ್ಬಂದಿ ವರ್ಗಾವಣೆ ಮಾಡಿದ್ದಾರೆ. ಬಳ್ಳಾರಿ ವಿಜಯನಗರ ಜಿಲ್ಲೆ ವಿಭಜನೆ ಬಳಿಕ ಮೊದಲಿಗೆ ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬದಲಾವಣೆಗೆ ಅವಕಾಶ ಕೊಡಲಾಗಿತ್ತು. ಆಗ ಒಂದಷ್ಟು ಸಿಬ್ಬಂದಿ ಅದಲು ಬದಲಾದ್ರು. ಕೆಲವರಂತೂ ವರ್ಷಾನುಗಟ್ಟಲೇ ಇರೋ ಠಾಣೆಯನ್ನು ಬಿಡದೇ ಒಂದೇ ಠಾಣೆ ನಂಬಿಕೊಂಡಿದ್ರು. ಹೀಗಾಗಿ ಒಂದೇ ಠಾಣೆಯಲ್ಲಿ ಹಲವು ವರ್ಷದಿಂದ ಇದ್ದು ಯಾವುದೇ ಕೆಲಸ ಮಾಡದೇ ಇರೋರಿಗೆ ಬಿಸಿ ಮುಟ್ಟಿಸೋ ಮೂಲಕ ವರ್ಗಾವಣೆ ಪರ್ವ ಪ್ರಾರಂಭಿಸಿದ್ದಾರೆ. ಆಡಳಿತ ಸುಧಾರಣೆಗೆ ಇದು ಅನಿವಾರ್ಯ ಎನ್ನುತ್ತಿದ್ದಾರೆ ಎಸ್ಪಿ ಅರುಣ್ ಕುಮಾರ್.
VIJAYANAGARA; ಕೆಲಸಕ್ಕೂ ಮುನ್ನ ಯೋಗ ಮಾಡಿದ ನರೇಗಾ ಕಾರ್ಮಿಕರು
ಜನಪ್ರತಿನಿಧಿಗಳ ಮಾತಿಗೂ ಜಗ್ಗದ ಎಸ್ಪಿ ಖಡಕ್ ನಿರ್ಧಾರ
ಇನ್ನೂ ವರ್ಗಾವಣೆ ಪರ್ವ ಆರಂಭವಾಗುತ್ತಿದ್ದಂತೆ ಕೆಲವರು ಜಾತಿ ಮುಖಂಡರು ಮತ್ತು ತಮ್ಮ ಕ್ಷೇತ್ರದ ಜನಪ್ರತಿನಿಧಿಗಳ ಬಳಿ ದುಂಬಾಲು ಬಿದ್ದು, ಎಸ್ಪಿ ಅರುಣ್ ಅವರಿಗೆ ಕರೆ ಮಾಡಿಸಿ ಮತ್ತದೇ ಹಳೇ ಠಾಣೆಯಲ್ಲಿ ಉಳಿಯೋ ತಂತ್ರಗಾರಿಕೆ ಮಾಡಿದ್ರು. ಆದ್ರೇ, ಜನಪ್ರತಿನಿಧಿಗಳ ಹಿಂಬಾಲಕಂತೆ ವರ್ತಿಸೋ ಪೊಲೀಸರ ಮಾತಿಗೆ ಯಾವುದೇ ರೀತಿಯ ಮನ್ನಣೆ ನಿಡದೇ, ವರ್ಗಾವಣೆ ಆದೇಶ ಬಂದ ಕೂಡಲೇ ಅಧಿಕಾರ ವಹಿಸಿಕೊಳ್ಳಿ ನೆಪ ಹೇಳಿದ್ರೇ ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚಿಕೆಯನ್ನು ನೀಡಿದ್ದಾರೆ ಎಸ್ಪಿ ಅರುಣ್ ಕುಮಾರ. ಇದರಿಂದ ಕಂಗಾಲಾಗಿರೋ ಬಹುತೇಕ ಪೊಲೀಸ್ ಸಿಬ್ಬಂದಿ ಮತ್ತಷ್ಟು ಶಿಫಾರಸ್ಸು ಮಾಡಲು ಮುಂದಾದ್ರೇ, ಮತ್ತಷ್ಟು ದೂರ ಹೋಗೋ ಭೀತಿ ಹಿನ್ನೆಲೆ ಇದೀಗ ಹಾಕಿದ ಕಡೆ ಹೋಗ್ತಿದ್ದಾರೆ.
ಎಸ್ಪಿ ಕ್ರಮಕ್ಕೆ ಮೆಚ್ಚುಗೆ
ಯಾವುದೇ ಒತ್ತಡಕ್ಕೆ ಮಣಿಯದೆ ಹಲವು ನಾಯಕರ ಫೋನ್‌ಗಳಿಗೂ ಕ್ಯಾರೆ ಅನ್ನದೇ ವರ್ಗಾವಣೆ ಮಾಡಿದ ವಿಜಯನಗರ ಎಸ್ಪಿ ಅರುಣ್ ಕುಮಾರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಅದೇನೇ ಇರಲಿ ಹೊಸ ಜಿಲ್ಲೆ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ಈ ರೀತಿಯ ಕ್ರಮ ಅಗತ್ಯ ಎನ್ನುವದು ಇಲ್ಲಿ ಸಾಬೀತಾಗಿದೆ.