* ಒಂದು ಲಕ್ಷಕ್ಕೂ ಅಧಿಕ ಭಕ್ತರ ಆಗಮನ* 144 ಸೆಕ್ಷನ್‌ ಜಾರಿಗೊಳಿಸಿದ್ದ ಜಿಲ್ಲಾಡಳಿತ* ಚೆಕ್‌ಪೋಸ್ಟ್‌ನಲ್ಲೇ ತಡೆದು ವಾಪಸ್‌ ಕಳುಹಿಸಿದ ಪೊಲೀಸರು 

ಮುನಿರಾಬಾದ್‌(ಜೂ.25): ಹುಲಿಗೆಮ್ಮ ದೇವಸ್ಥಾನ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸೆಕ್ಷನ್‌ 144 ಜಾರಿಗೊಳಿಸಿದ್ದರೂ ಲೆಕ್ಕಿಸದೆ ಕಾರ ಹುಣ್ಣಿಮೆ ದಿನವಾದ ಗುರುವಾರ ಅಮ್ಮನವರ ದರ್ಶನಕ್ಕೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಹುಲಿಗಿ ಗ್ರಾಮದತ್ತ ಬಂದಿದ್ದರು. ಆದರೆ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲೇ ಭಕ್ತರನ್ನು ತಡೆದು ವಾಪಸ್‌ ಕಳುಹಿಸಿದ್ದಾರೆ.

ಕೋವಿಡ್‌ನಿಂದ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ದರ್ಶನ ನಿಷೇಧಿಸಲಾಗಿದೆ. ಹೀಗಾಗಿ ದೇವಸ್ಥಾನದ ಕಡೆಗೆ ಈಗ ಭಕ್ತರು ಬರುತ್ತಿಲ್ಲ. ಆದರೆ ಹುಲಿಗೆಮ್ಮ ದೇವಸ್ಥಾನದ 2ಕಿ.ಮೀ. ವಾಪ್ತಿಯಲ್ಲಿ ಸೆಕ್ಷನ್‌ 144 ಜಾರಿ ಮಾಡಿದರೂ ಸಹ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ದೇವಿಯ ದರ್ಶನಕ್ಕೆ ಭಕ್ತರು ಬಂದಿದ್ದರು. ಕಳೆದ ತಿಂಗಳು ಹುಣ್ಣಿಮೆಯಂದು ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದಿದ್ದರು. ಆಗಲೂ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ತಡೆದು ವಾಪಸ್‌ ಕಳುಹಿಸಿದ್ದರು.

ಕಳೆದ ವರ್ಷ ಸಹ ಇದೇ ಸಮಸ್ಯೆ ಉಂಟಾಗಿತ್ತು. 2020ರಲ್ಲಿ ಜು. 7ರಂದು ಲಾಕ್‌ಡೌನ್‌ ತೆರವಾಗಿತ್ತು. ಲಾಕ್‌ಡೌನ್‌ ತೆರವಾಗುವ 4 ದಿನ ಮುನ್ನ ಅಂದರೆ ಜು. 4ರಂದು ಹುಣ್ಣಿಮೆ ಇತ್ತು. ಲಾಕ್‌ಡೌನ್‌ ಇದ್ದರೂ ಹುಣ್ಣಿಮೆ ಹಿಂದಿನ ದಿನ ದೇವಸ್ಥಾನದ ಅವರಣದಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಸೇರಿದ್ದರು. ಅದರಿಂದ ಹೌಹಾರಿದ ಸ್ಥಳೀಯ ಗ್ರಾಪಂ ಆಡಳಿತ ಲಾಕ್‌ಡೌನ್‌ ಇದ್ದಾಗಲೇ ಇಷ್ಟೊಂದು ಭಕ್ತರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಎರಡು ತಿಂಗಳು ಮುಚ್ಚಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು.

ಮುಜರಾಯಿ ದೇವಸ್ಥಾನದಲ್ಲಿಯೇ ಮೌಢ್ಯಾ : ಅಗ್ನಿಕುಂಡ ಹಾಯುವಾಗ ಕೋಳಿ ತೂರಿದ ಪೂಜಾರಿ

ಭಕ್ತರಿಗೆ ನಿರಾಸೆ:

ಬೇರೆ ಬೇರೆ ಊರುಗಳಿಂದ ಬಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ನಿರಾಸೆ ಉಂಟಾಯಿತು. ಅಮ್ಮನವರ ದರ್ಶನ ಪಡೆಯಲು ಬಂದಿದ್ದ ಗದಗ ನಗರದ ಭಕ್ತ ಆನಂದ ಎಂಬವರು ಅಮ್ಮನವರ ದರ್ಶನ ಸಿಗದಿದ್ದಕ್ಕೆ ತುಂಬಾ ಹತಾಶರಾದರು. ಅಮ್ಮನ ದರ್ಶನ ನಿರಾಕರಿಸುವುದು ಸರಿಯಲ್ಲ. ಕೇವಲ ದೇವಸ್ಥಾನಕ್ಕೆ ಭಕ್ತರು ಬರುವುದರಿಂದ ಕೊರೋನಾ ಹರಡುತ್ತದೆಯೇ? ರಾಜಕಾರಣಿಗಳು ಸಭೆ-ಸಮಾರಂಭ ಮಾಡಿದರೆ ಕೊರೋನಾ ಹರಡುವುದಿಲ್ಲವೇ? ಅವರಿಗೆ ಇಲ್ಲದ ನಿರ್ಬಂಧ ಶ್ರೀ ಹುಲಿಗೆಮ್ಮ ದೇವಿ ಭಕ್ತರಿಗೆ ಏಕೆ ಎಂದು ಪ್ರಶ್ನಿಸಿದರು. ಸರ್ಕಾರ ಹಾಗೂ ಜಿಲ್ಲಾಡಳಿತ ಮುಂಚಿತವಾಗಿ ಮಾಧ್ಯಮ ಹಾಗೂ ಆಕಾಶವಾಣಿ ಮೂಲಕ ಜನರಿಗೆ ಸೂಚನೆ ಕೊಡಬೇಕಾಗಿತ್ತು. ಈ ವಿಷಯವಾಗಿ ಜಿಲ್ಲಾಡಳಿತದಿಂದ ಲೋಪವಾಗಿದೆ ಎಂದು ಆರೋಪಿಸಿದರು.

ಪೊಲೀಸ್‌ ಬಂದೋಬಸ್ತ್‌:

ಹುಲಿಗಿ ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಪೊಲೀಸರು ವಾಹನಗಳನ್ನು ಚೆಕ್‌ಪೋಸ್ಟಗಳಲ್ಲಿ ತಡೆದು ವಾಪಸ್‌ ಅವರ ಊರುಗಳಿಗೆ ಕಳುಹಿಸುತ್ತಿದ್ದರು. ಪೊಲೀಸ್‌ ಇಲಾಖೆ ವತಿಯಿಂದ ಧ್ವನಿವರ್ಧಕ ಮೂಲಕ ಜನರು ತಮ್ಮ ತಮ್ಮ ಊರುಗಳಿಗೆ ತೆರಳಬೇಕೆಂದು ಘೋಷಣೆ ಮಾಡುತ್ತಿದ್ದರು. ಹುಣ್ಣಿಮೆ ದಿನದಂದು ದೇವಸ್ಥಾನದಲ್ಲಿ ಹಣ್ಣು-ಕಾಯಿ ಮಾಡುತ್ತಿದ್ದ ಭಕ್ತರು ಈ ಬಾರಿ ಊರಿನ ಅಗಸೆ ಕಲ್ಲಿಗೆ ಪೂಜೆ ಸಲ್ಲಿಸಿ, ಹಣ್ಣು-ಕಾಯಿ ಸಮರ್ಪಿಸಿ, ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದರು.