ಬೆಳಗಾವಿ(ಆ.22): ವರುಣಾಸೂರನ ರೌದ್ರನರ್ತನಕ್ಕೆ ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕವೇ ಅಕ್ಷರಶಃ ತತ್ತರಿಸಿ ಹೋಗಿದೆ. ಅದರಲ್ಲೂ ಮಕ್ಕಳ ಶಿಕ್ಷಣದ ಭವಿಷ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುವಂತೆ ಶಾಲೆಗಳನ್ನೇ ಹಾನಿ ಮಾಡಿದೆ. ಇದರಿಂದ ಶಿಕ್ಷಣ ಇಲಾಖೆ ಕಂಗಾಲಾಗಿದೆ.

ಪಶ್ಚಿಮ ಘಟ್ಟಪ್ರದೇಶದಲ್ಲಿ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಬಳ್ಳಾರಿ ನಾಲಾ ಸೇರಿದಂತೆ ಜಿಲ್ಲೆಯ ವಿವಿಧ ಹಳ್ಳ ಕೊಳ್ಳಗಳು ನಿರೀಕ್ಷೆಗೂ ಮೀರಿ ಉಕ್ಕಿ ಹರಿದಿದೆ. ಇದರಿಂದಾ ಜಿಲ್ಲೆಯಲ್ಲಿ ಅನೇಕ ಗ್ರಾಮಗಳು ಜಲಾವೃತವಾಗಿದ್ದವು.

ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂಜರಿಕೆ:

ಜಿಲ್ಲೆಯ ಬಹುತೇಕ ಶಾಲೆಗಳಿಗೆ ಹಾನಿಯಾಗಿದ್ದರಿಂದ ಮಕ್ಕಳ ಶಿಕ್ಷಣದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ. ಶಾಲೆಗಳು ಹಾನಿಯಾಗಿದ್ದರಿಂದ ಪಾಲಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇನ್ನೊಂದೆಡೆ ಹಾನಿಯಾದ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಆತಂಕ ಮನೆ ಮಾಡಿದೆ.

ಅರ್ಧ ತಿಂಗಳಿಗೂ ಹೆಚ್ಚು ಕಾಲ ನೀರಲ್ಲಿ ಮುಳುಗಿದ್ದ ಕಟ್ಟಡಗಳು:

ಸಾವಿರಾರು ಮನೆಗಳು, ಶಾಲಾ ಕಟ್ಟಡಗಳು ಸುಮಾರು 15 ದಿನಗಳ ಕಾಲ ನೀರಿನಲ್ಲಿ ಮುಳುಗಿದ್ದವು. ಇದರಿಂದಾಗಿ ಈ ಕಟ್ಟಡಗಳು ಶಿಥಿಲಗೊಂಡಿವೆ. ಇವೆಲ್ಲ ವಾಸಿಸಲು ಯೋಗ್ಯವೇ ಎಂಬ ಪ್ರಶ್ನೆ ಮೂಡಿಸುತ್ತಿವೆ. ಕಳೆದ ಹದಿನೈದು ದಿನಗಳ ಕಾಲ ಸುರಿದ ಮಳೆಯಿಂದ ಹಾಗೂ ಮಹಾಪೂರದಿಂದ ಬೆಳಗಾವಿ, ಚಿಕ್ಕೋಡಿ ಎರಡು ಶೈಕ್ಷಣಿಕ ಜಿಲ್ಲೆಯ ಸುಮಾರು 4438 ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ.

ಕುಸಿಯುವ ಭೀತಿ:

ಜಿಲ್ಲೆಯ ನೂರಾರು ಶಾಲಾ ಕಟ್ಟಡಗಳು ನೀರಿನಲ್ಲಿ ಮುಳುಗಿದ್ದವು. ಕೆಲವು ಕೊಠಡಿಗಳು ಈಗಾಗಲೆ ಬಿದ್ದಿವೆ. ಈಗಲೂ ದಿನಕ್ಕೊಂದು, ಎರಡು ಕೊಠಡಿಗಳು, ಕಟ್ಟಡಗಳು ಬೀಳುತ್ತಿವೆ. ಸುಮಾರು 75 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ದಿನಕ್ಕೊಂದು ಗೋಡೆ ಧರೆಗೆ ಉರುಳುತ್ತಿರುವ ಈ ಶಾಲಾ ಕೊಠಡಿಯಲ್ಲಿ ಅಧ್ಯಯನ ನಡೆಸುವ ಮಕ್ಕಳು ಮಾತ್ರ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಅಧ್ಯಯನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ1010 ಶಾಲೆಗಳಲ್ಲಿ 2063 ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 868 ಶಾಲೆಗಳಲ್ಲಿ 2375 ಸೇರಿದಂತೆ 4438 ಶಾಲಾ ಕೊಠಡಿಗಳು ಹಾನಿಯಾಗಿವೆ. ಇವುಗಳನ್ನು ಮರು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಶಿಕ್ಷಣ ಇಲಾಖೆಗೆ ಎದುರಾಗಿದೆ. ಪ್ರತಿ ಕೊಠಡಿಗೆ ಎರಡು ಲಕ್ಷ ವೆಚ್ಚದಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 2114.95 ಲಕ್ಷ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 4750 ಒಟ್ಟು 6864.95 ಲಕ್ಷ ವೆಚ್ಚವಾಗಲಿದೆ.

ತಾಲೂಕು ಶಾಲೆಗಳು ಕೊಠಡಿಗಳು:

ಅಥಣಿ 187 426, ರಾಯಬಾಗ 93 281

ಕಾಗವಾಡ 47 80, ನಿಪ್ಪಾಣಿ 182 321

ಚಿಕ್ಕೋಡಿ 172 267, ಗೋಕಾಕ 20 32

ಮೂಡಲಗಿ 90 190, ಹುಕ್ಕೇರಿ 219 466

ಬೆಳಗಾವಿ ನಗರ 99 356, ಬೆಳಗಾವಿ ಗ್ರಾಮೀಣ 131 287

ಬೈಲಹೊಂಗಲ 108 314, ಕಿತ್ತೂರ 65 216

ಖಾನಾಪುರ 236 561, ರಾಮದುರ್ಗ 97 237

ಸವದತ್ತಿ 132 404, ಒಟ್ಟು 1878 4438
 

-ಜಗದೀಶ ವಿರಕ್ತಮಠ ಬೆಳಗಾವಿ