ಯಾದಗಿರಿ(ಮೇ.06): ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವಲಸೆ ಹೋಗಿದ್ದ ಸಾವಿರಾರು ಜನರು ಕಳೆದೆರಡು ದಿನಗಳಲ್ಲಿ ಯಾದಗಿರಿಗೆ ವಾಪಸ್ಸಾಗಿದ್ದಾರೆ. ಸೋಮವಾರ ಹಾಗೂ ಮಂಗಳವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 200 ಬಸ್‌ಗಳ ಮೂಲಕ (ಒಂದು ಬಸ್ಸಿನಲ್ಲಿ 35 ಜನರಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು) 5 ಸಾವಿರಕ್ಕೂ ಹೆಚ್ಚು ಜನ ತವರು ಜಿಲ್ಲೆಗೆ ಆಗಮಿಸಿದ್ದಾರೆ.

ಸೋಮವಾರ ಸುಮಾರು 66 ಬಸ್‌ಗಳು ಬಂದರೆ, ಮಂಗಳವಾರ 119 ಬಸ್‌ಗಳು ಸಂಜೆವರೆಗೆ ಬಂದಿವೆ. ರಾತ್ರಿ ಕೂಡ ಇನ್ನೂ ಹೆಚ್ಚಿನ ಬಸ್‌ಗಳು ಬರುವ ನಿರೀಕ್ಷೆಯಿದ್ದು, ಇನ್ನೂ ಮೂರ್‍ನಾಲ್ಕು ದಿನಗಳಲ್ಲಿ ಪ್ರತಿದಿನಕ್ಕೆ ಎರಡು ನೂರಕ್ಕಿಂತಲೂ ಹೆಚ್ಚು ಬಸ್‌ಗಳು ಬರಲಿವೆ ಎಂದು ಕೋವಿಡ್-19 ವಲಸೆ ಕಾರ್ಮಿಕರ/ಕೂಲಿ ಕಾರ್ಮಿಕರ ನೋಡಲ್ ಅಧಿಕಾರಿ ಹಾಗೂ ಬಾಲ ಕಾರ್ಮಿಕ ಇಲಾಖೆ ಯೋಜನಾಧಿಕಾರಿ ರಘುವೀರಸಿಂಗ್ ಠಾಕೂರ್ ’ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಈ ಎರಡು ದಿನಗಳಲ್ಲಿ 6 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಯಾದಗಿರಿಗೆ ವಾಪಸ್ಸಾಗಿದ್ದಾರೆ ಎಂದು ಠಾಕೂರ್ ತಿಳಿಸಿದರು.

ಗ್ರೀನ್ ಝೋನ್‘ ಇದ್ರೂ ಯಾದಗಿರಿ ಕಲ್ಲಂಗಡಿ ಹಣ್ಣಿನಂತೆ: ದಾರಿ ತಪ್ಪಿದ ಲಾಕ್‌ಡೌನ್ ಸಡಿಲಿಕೆ..!

ಜಿಲ್ಲಾ ಕ್ರೀಡಾಂಗಣಕ್ಕೆ ಬಸ್‌ಗಳಲ್ಲಿ ಬಂದ ಪ್ರತಿ ಪ್ರಯಾಣಿಕರನ್ನೂ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷೆಗೆ ಒಳಪಡಿಸಿ, ಕೈ ಮೇಲೆ ಸೀಲ್ ಹಾಕಲಾಯಿತು. ಬಂದ ಪ್ರಯಾಣಿಕರಿಗೆ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಕಾರ್ಮಿಕರ ಊಟಕ್ಕಾಗಿ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರು ಜಿಲ್ಲಾಡಳಿತಕ್ಕೆ ದವಸ ಧಾನ್ಯಗಳನ್ನು ನೀಡಿದ್ದರು ಎನ್ನಲಾಗಿದೆ.

ವಿಶೇಷ ಬಸ್ ಗಳಲ್ಲಿ ಬಂದಿರುವ ಕಾರ್ಮಿಕರು, ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ಇಲಾಖೆಯ ಸೀಲ್ ಹಾಕಲಾಗುತ್ತಿದೆ. ಕಾರ್ಮಿಕರು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿರಬೇಕು. ಮನೆಯಿಂದ ಹೊರ ಬರುವಂತಿಲ್ಲ ಎಂದು ಜಿಲ್ಲಾಡಳಿತ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಽಕಾರಿಗಳು ಹೇಳಿ ಕಳುಹಿಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಯಾದಗಿರಿ ಜಿಲ್ಲೆಗೆ ಮರಳುತ್ತಿರುವ ಪ್ರಯಾಣಿಕರಿಗೆ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ. ಯಾದಗಿರಿಯಿಂದ ಅವರ ಸ್ವಗ್ರಾಮಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ್ ಹೇಳಿದ್ದಾರೆ.

1281 ವರದಿ ನೆಗೆಟಿವ್, 131 ವರದಿ ಬಾಕಿ

ನೋವೆಲ್ ಕೊರೋನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ್ದ ಮಾದರಿಗಳ ಪೈಕಿ ಮಂಗಳವಾರ  ಮತ್ತೆ 89 ಮಾದರಿಗಳ ವರದಿ ನೆಗೆಟಿವ್ ಬಂದಿದ್ದು, ಇಲ್ಲಿಯವರೆಗೆ ಒಟ್ಟು 1281 ಮಾದರಿಗಳ ವರದಿ ನೆಗೆಟಿವ್ ಬಂದಂತಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಕಳುಹಿಸಲಾದ 55 ಹೊಸ ಮಾದರಿಗಳು ಸೇರಿದಂತೆ 131 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಽಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.

ಹೊಸ ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ 7 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಸುರಪುರ ಸೂಪರ್ ಕ್ವಾರಂಟೈನ್ ಸೆಂಟರ್‌ನಲ್ಲಿ 5 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರು 22 ಜನ, ದ್ವಿತೀಯ ಸಂಪರ್ಕದಲ್ಲಿದ್ದವರು 63 ಜನರಿದ್ದು, ಇವರನ್ನು ಪ್ರತ್ಯೇಕವಾಗಿರಿಸಲಾಗಿದೆ. ವಿದೇಶಗಳಿಂದ ಜಿಲ್ಲೆಗೆ ಮರಳಿ ಬಂದಿರುವ 71 ಜನರ ಅವಲೋಕನ ಅವಽ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.