ಗ್ರೀನ್ ಝೋನ್‘ ಇದ್ರೂ ಯಾದಗಿರಿ ಕಲ್ಲಂಗಡಿ ಹಣ್ಣಿನಂತೆ: ದಾರಿ ತಪ್ಪಿದ ಲಾಕ್‌ಡೌನ್ ಸಡಿಲಿಕೆ..!
ಯಾದಗಿರಿ ಜಿಲ್ಲೆಯ ಒಟ್ಟು ಜನಸಂಖ್ಯೆ 11.74 ಲಕ್ಷ| ಜಿಲ್ಲಾಡಳಿತ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು ಸುಮಾರು 1200| ಜನಸಂಖ್ಯೆಗೆ ಹೋಲಿಸಿದರೆ ಶೇ.1 ರಷ್ಟೂ ತಲುಪಿಲ್ಲ| ಇದೇ ತರೆನಾದ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಾತಾವರಣ ಗಂಭೀರವಾಗುವ ಸಾಧ್ಯತೆ|
ಆನಂದ್ ಎಂ. ಸೌದಿ
ಯಾದಗಿರಿ(ಮೇ.06): ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದೆ ‘ಹಸಿರು ವಲಯ’ದಲ್ಲಿ ಹೆಸರು ಮಾಡಿರುವ ಯಾದಗಿರಿ ಜಿಲ್ಲೆಯಲ್ಲಿನ ಸದ್ಯದ ಸ್ಥಿತಿಗತಿ ನಿಜಕ್ಕೂ ಆಘಾತ ಮೂಡಿಸುತ್ತದೆ. ಲಾಕ್‌ಡೌನ್ ಸಡಿಲಿಕೆ ದಾರಿ ತಪ್ಪಿದಂತಿದೆ. ಇದರ ನೆಪದಲ್ಲಿ ಯರ್ರಾಬಿರ್ರಿ ಜನ ಸಂಚಾರ, ವಾಹನಗಳ ಓಡಾಟ, ವ್ಯಾಪಾರ ವಹಿವಾಟು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನ ನೋಡಿದರೆ, ಗ್ರೀನ್ ಝೋನ್ ನೆಪದಲ್ಲಿನ ನಿಷ್ಕಾಳಜಿ ಮುಂದಿನ ದಿನಗಳಲ್ಲಿ ಆತಂಕ ಮೂಡಿಸಿದೆ. ಒಂದು ರೀತಿಯಲ್ಲಿ ಯಾದಗಿರಿ ಜಿಲ್ಲೆಯದ್ದು ಕಲ್ಲಂಗಡಿ ಹಣ್ಣಿನಂತೆ..! ಹೊರಗೆ ಹಸಿರು, ಒಳಗಡೆ ಅವಿತಿರುವ ಕೆಂಪು..!!
ಪಕ್ಕದಲ್ಲೇ ಕಲಬುರಗಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಹಾಗೂ ತೆಲಂಗಾಣ ಗಡಿಗಂಟಿಕೊಂಡಿದ್ದರೂ, ಯಾದಗಿರಿ ಜಿಲ್ಲೆಯಲ್ಲಿ ಈವರೆಗೂ ಯಾವುದೇ ಪ್ರಕರಣಗಳು ಕಂಡು ಬಾರದಿರುವುದು ಜಿಲ್ಲೆಯ ಜನರಲ್ಲಿ ಸಮಾಧಾನ ಮೂಡಿಸಿದೆ. ಜಿಲ್ಲಾಡಳಿತದ ಹಗಲೂ ರಾತ್ರಿ ಕಾರ್ಯವೈಖರಿ ಜನಮೆಚ್ಚುಗೆಗೂ ಪಾತ್ರವಾಗಿದೆ. ಕಳೆದೊಂದ ತಿಂಗಳು ಮೀರಿ ಇದಕ್ಕೆ ಜನ ನೀಡಿರುವ ಸಹಕಾರ ಆಡಳಿತಕ್ಕೂ ನೆಮ್ಮದಿ ಮೂಡಿಸಿತ್ತು.
ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್: ಆದಾಯ ಹೆಚ್ಚಿಸಿಕೊಳ್ಳಲು ಆರೇಂಜಿಗೆ ಇಳಿದ ಅಬಕಾರಿ..!
ಜನ ಸಾಮಾನ್ಯರ ಬೇಕು ಬೇಡಗಳಿಗೆ ಹಾಗೂ ಕಾರ್ಮಿಕರು, ರೈತರು ಮುಂತಾದವರ ಹಿತದೃಷ್ಟಿಯಿಂದಾಗಿ ಲಾಕ್ ಡೌನ್ ಸಡಿಲಿಕೆಯಾಗಿದೆ. ಆದರೀಗ ನಡೆಯುತ್ತಿರುವ ಬೆಳವಣಿಗೆಗಳು ಜಿಲ್ಲಾಡಳಿತಕ್ಕೆ ಭಾರಿ ತಲೆ ನೋವು ಮೂಡಿಸಿದೆ. ಲಾಕ್ ಡೌನ್ ಸಡಿಲಿಕೆ ಅನಿವಾರ್‍ಯವಾದರೂ,ವೈಯುಕ್ತಿಕ ಕಾಳಜಿ ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಜನರು ಪಾಲಿಸುವಲ್ಲಿ ಮರೆಯುತ್ತಿರುವಂತಿದೆ.
ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಸಾಮಾಜಿಕ ಅಂತರ ಹಾಗೂ ವೈಯುಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅನಿವಾರ್ಯ ಎಂಬ ನೆಪದಲ್ಲಿ ಬಹುತೇಕರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡು ಬರುತ್ತಿದೆ. ಹಿಂಡು ಹಿಂಡಾಗಿ ಜನ ನಿಲ್ಲುತ್ತಿರುವುದು, ವಾಹನಗಳಲ್ಲಿ ಹತ್ತಿಪ್ಪತ್ತಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಮದ್ಯ ಮಾರಾಟದ ಅನುಮತಿ ಮತ್ತಷ್ಟೂ ಕವಲು ದಾರಿಗೆ ಕಾರಣವಾಗಲಿದೆ.
ಇನ್ನು, ಕಳೆದ ತಿಂಗಳು ಯಾದಗಿರಿ ಜಿಲ್ಲೆಯ ವಿವಿಧೆಡೆಯಿಂದ ಸುಮಾರು ಒಂದೂವರೆ ಲಕ್ಷದಷ್ಟು ಜನರ ವಲಸಿಗರು ವಾಪಸ್ಸಾಗಿದ್ದರು. ಈಗ ಲಾಕ್‌ಡೌನ್ ಸಡಿಲಿಕೆ ನಂತರ ಕಳೆದ ಮೂರ್‍ನಾಲ್ಕು ದಿನಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಬಂದಿದ್ದು, ಅನ್ಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತೆಲಂಗಾಣದಿಂದ ಮುಂದಿನ ನಾಲ್ಕೈದು ದಿನಗಳಲ್ಲಿ ಸಹಸ್ರಾರು ಜನರು ಬರುವ ನಿರೀಕ್ಷೆಯಿದೆ.
ಮಂಗಳವಾರ ಬೆಂಗಳೂರಿನಿಂದ ಬಂದ 120ಕ್ಕೂಹೆಚ್ಚು ಬಸ್‌ಗಳಲ್ಲಿ 3500 ಕ್ಕೂ ಅಧಿಕ ವಲಸಿಗರು ಬಂದಿಳಿದಿದ್ದಾರೆ. ಅವರಿಗೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲು ಸೂಚಿಸಿದೆ ನಿಜ. ಆದರೆ, ಎಲ್ಲವನ್ನೂ ಸರ್ಕಾರವೇ ಹೊರಬೇಕೆನ್ನುವ ಮನೋಸ್ಥಿತಿ ಸರಿಯಲ್ಲ ಎನ್ನುವ ಸಾಮಾಜಿಕ ಕಾರ್ಯಕರ್ತ ತುಳಜಾರಾಂ ಪವಾರ್, ಈ ಮೇ ತಿಂಗಳಲ್ಲಿ ಅತ್ಯಂತ ಹೆಚ್ಚು ಜಾಗೃತಿ ವಹಿಸಬೇಕಾದ ಸಂದರ್ಭ. ಎಚ್ಚರ ತಪ್ಪಿದರೆ ಗ್ರೀನ್ ಝೋನ್ ಹಣೆಪಟ್ಟಿ ತಪ್ಪೀತು ಎಂಬ ಆತಂಕ ವ್ಯಕ್ತಪಡಿಸುತ್ತಾರೆ.
ಯಾದಗಿರಿ ಜಿಲ್ಲೆಯ ಒಟ್ಟು ಜನಸಂಖ್ಯೆ 11.74 ಲಕ್ಷ. ಯಾದಗಿರಿ ಜಿಲ್ಲಾಡಳಿತ ಮಾಹಿತಿ ಪ್ರಕಾರ, ಈವರೆಗೆ ಅಂದರೆ ಕಳೆದೊಂದೂವರೆ ತಿಂಗಳ ಅವಧಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದು ಸುಮಾರು 1200. ಸುಮಾರು 1 ಸಾವಿರದಷ್ಟು ನೆಗಟಿವ್ ವರದಿಗಳು ಬಂದಿದ್ದು, ನೂರಕ್ಕೂ ಹೆಚ್ಚು ವರದಿಗಳ ನಿರೀಕ್ಷೆಯಿದೆ. ಹಾಗೆ ನೋಡಿದರೆ, ಜನಸಂಖ್ಯೆಗೆ ಹೋಲಿಸಿದರೆ ಶೇ.1 ರಷ್ಟೂ ತಲುಪಿಲ್ಲ. ಹೀಗಿರುವಾಗ, ಇದೇ ತರೆನಾದ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟೂ ವಾತಾವರಣ ಗಂಭೀರವಾಗುವ ಸಾಧ್ಯತೆಯಿದೆ ಎಂಬ ಮಾತುಗಳನ್ನೂ ತಳ್ಳಿ ಹಾಕುವಂತಿಲ್ಲ ಎಂಬ ಮಾತುಗಳು ಪ್ರಜ್ಞಾವಂತರಿಂದ ಕೇಳಿ ಬರುತ್ತಿವೆ.